ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಲೀಗ್ ಹಂತದ 11ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 43 ರನ್‌ಗಳ ಬೃಹತ್ ಗೆಲುವನ್ನು ಕಂಡು ಟೂರ್ನಿಯಲ್ಲಿ ಎರಡನೇ ಜಯವನ್ನು ದಾಖಲಿಸಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ಬೌಲಿಂಗ್ ಆರಿಸಿಕೊಂಡು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 250 ರನ್ ಕಲೆಹಾಕಿ ಚೆನ್ಮೈ ಸೂಪರ್ ಕಿಂಗ್ಸ್ ತಂಡಕ್ಕೆ 251 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ಚೆನ್ನೈ ಸೂಪರ್ ಕಿಂಗ್ಸ್ 19.4 ಓವರ್‌ಗಳಲ್ಲಿ 207 ರನ್‌ಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಟೂರ್ನಿಯಲ್ಲಿ ಹ್ಯಾಟ್ರಿಕ್ ಸೋಲನ್ನು ಕಂಡಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಇನ್ನಿಂಗ್ಸ್: ಆರ್‌ಸಿಬಿ ಪರ ಆರಂಭಿಕರಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ ಹಾಗೂ ಫಿಲ್ ಸಾಲ್ಟ್ ಮೊದಲ ಎರಡು ಓವರ್ ಯಾವುದೇ ಬೌಂಡರಿ ಬಾರಿಸಲಾಗದೇ ಪರದಾಡಿದರಾದರೂ ನಂತರ ಒಳ್ಳೆಯ ರನ್ ಕಲೆಹಾಕಿ ಸಮಾಧಾನಕರ ಆರಂಭ ಕಟ್ಟಿಕೊಟ್ಟರು. ಕೊಹ್ಲಿ 28 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ, ಫಿಲ್ ಸಾಲ್ಟ್ 46 ರನ್ ಬಾರಿಸಿದರು. ಬಳಿಕ ಅಬ್ಬರಿಸಿದ ದೇವದತ್ ಪಡಿಕ್ಕಲ್ 29 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 50 ರನ್ ಚಚ್ಚಿದರು. ಪಡಿಕ್ಕಲ್ ವಿಕೆಟ್ ಬಿದ್ದ ಬಳಿಕ ಜತೆಯಾದ ನಾಯಕ ರಜತ್ ಪಟಿದಾರ್ ಹಾಗೂ ಟಿಮ್ ಡೇವಿಡ್ ಜೋಡಿ 35 ಎಸೆತಗಳಲ್ಲಿ 99 ರನ್ ಚಚ್ಚಿ ಸಿಕ್ಸರ್‌ಗಳ ಸುರಿಮಳೆ ಸುರಿಸಿದರು. ರಜತ್ ಪಟಿದಾರ್ 19 ಎಸೆತಗಳಲ್ಲಿ 1 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ ಅಜೇಯ 48 ರನ್ ಬಾರಿಸಿ ಅಬ್ಬರಿಸಿದರೆ, ಟಿಮ್ ಡೇವಿಡ್ ಮೊದಲ ಆರು ಎಸೆತಗಳಲ್ಲಿ ನಿಧಾನಗತಿಯ ಆಟವನ್ನಾಡಿ ಬಳಿಕ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿ 25 ಎಸೆತಗಳಲ್ಲಿ 3 ಬೌಂಡರಿ ಹಾಗೂ 8 ಸಿಕ್ಸರ್ ಸಹಿತ ಅಜೇಯ 70 ರನ್ ಬಾರಿಸಿದರು.
ಆರ್‌ಸಿಬಿ ರೌದ್ರನರ್ತನಕ್ಕೆ ಕಂಗಾಲಾದ ಚೆನ್ನೈ ಸೂಪರ್ ಕಿಂಗ್ಸ್ ಪರ ಅನ್ಶುಲ್ ಕಾಂಬೋಜ್, ಜೇಮಿ ಓವರ್ಟನ್ ಹಾಗೂ ಶಿವಮ್ ದುಬೆ ತಲಾ ಒಂದೊಂದು ವಿಕೆಟ್ ಪಡೆದರು.
ಚೆನ್ನೈ ಸೂಪರ್ ಕಿಂಗ್ಸ್ ಇನ್ನಿಂಗ್ಸ್: ಸಿಎಸ್‌ಕೆ ಮೊದಲ ಓವರ್‌ನಲ್ಲೇ ತನ್ನ ನಾಯಕನ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಸರ್ಫರಾಜ್ ಖಾನ್ ಅರ್ಧಶತಕ ಬಾರಿಸಿದರೂ ಸಹ 108 ರನ್‌ಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ನಂತರ ಜೇಮಿ ಓವರ್ಟನ್ ಹಾಗೂ ಪ್ರಶಾಂತ್ ವೀರ್ ದೊಡ್ಡ ಹೊಡೆತಗಳನ್ನು ಬಾರಿಸಿ ತಂಡ ಇನ್ನೂರರ ಗಡಿ ದಾಟುವಲ್ಲಿ ಪಾತ್ರವಹಿಸಿದರಾದರೂ ಬೃಹತ್ ಗುರಿಯತ್ತ ತಂಡವನ್ನು ಕೊಂಡೊಯ್ಯುವಲ್ಲಿ ಸಾಧ್ಯವಾಗಲಿಲ್ಲ. ತಂಡದ ಪರ ರುತುರಾಜ್ ಗಾಯಕ್ವಾಡ್ 7, ಸಂಜು ಸ್ಯಾಮ್ಸನ್ 9, ಆಯುಷ್ ಮ್ಹಾತ್ರೆ 1, ಸರ್ಫರಾಜ್ ಖಾನ್ 50, ಕಾರ್ತಿಕ್ ಶರ್ಮಾ 6, ಶಿವಮ್ ದುಬೆ 16, ಪ್ರಶಾಂತ್ ವೀರ್ 43 (29), ಜೇಮಿ ಓವರ್ಟನ್ 37 (16), ನೂರ್ ಅಹ್ಮದ್ 8, ಮ್ಯಾಟ್ ಹೆನ್ರಿ 2 ಹಾಗೂ ಅನ್ಶುಲ್ ಕಾಂಬೋಜ್ ಅಜೇಯ 18 ರನ್ ಕಲೆಹಾಕಿದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಭುವನೇಶ್ವರ್ ಕುಮಾರ್ ಮೂರು ವಿಕೆಟ್, ಜೇಕಬ್ ಡಫಿ ಎರಡು ವಿಕೆಟ್, ಕೃನಾಲ್ ಪಾಂಡ್ಯ ಎರಡು ವಿಕೆಟ್, ಅಭಿನಂದನ್ ಸಿಂಗ್ ಎರಡು ವಿಕೆಟ್ ಹಾಗೂ ಸುಯಶ್ ಶರ್ಮಾ ಒಂದು ವಿಕೆಟ್ ಪಡೆದರು.

