ನವದೆಹಲಿ: ಆಲಿಕಲ್ಲು ಮಳೆಯಿಂದ ಬೆಳೆ ಹಾನಿಗೊಳಗಾದ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿ ವರದಿ ನೀಡುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.
ಕರ್ನಾಟಕ ಹಾಗೂ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಸುರಿದ ಭಾರೀ ಆಲಿಕಲ್ಲು ಮಳೆಯಿಂದ ಉಂಟಾದ ಬೆಳೆ ನಷ್ಟಕ್ಕೆ ಶೀಘ್ರ ಕ್ರಮ ಕೈಗೊಳ್ಳುವಂತೆ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಸಚಿವಾಲಯದ ಅಧಿಕಾರಿಗಳಿಗೆ ಭಾನುವಾರ ಸೂಚನೆ ನೀಡಿದ್ದಾರೆ.
ಬಾಧಿತ ರಾಜ್ಯಗಳಲ್ಲಿ ಬೆಳೆ ನಷ್ಟದ ಸಮಗ್ರ ವಿಮರ್ಶೆ ನಡೆಸುವಂತೆ ಸಚಿವರು ನಿರ್ದೇಶನ ನೀಡಿದ್ದಾರೆ. ರಾಜ್ಯ ಸರ್ಕಾರಗಳ ಜೊತೆಗೆ ಮಾತುಕತೆ ನಡೆಸಿ ತಳಮಟ್ಟದ ಮಾಹಿತಿ ಸಂಗ್ರಹಿಸುವಂತೆ ಆದೇಶಿಸಿದ್ದಾರೆ.
ಬೆಳೆ ನಷ್ಟದ ಪ್ರಮಾಣವನ್ನು ವಿವರವಾಗಿ ಪರಿಶೀಲಿಸುವ ಉದ್ದೇಶದಿಂದ ಸಚಿವ ಚೌಹಾಣ್ ಅವರು ಬಾಧಿತ ರಾಜ್ಯಗಳ ಸಚಿವರೊಂದಿಗೆ ಸಭೆ ನಡೆಸಲಿದ್ದಾರೆ ಎಂದು ಸಚಿವಾಲಯ ಮಾಹಿತಿ ನೀಡಿದೆ. ಇತ್ತೀಚೆಗೆ ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಭಾರಿ ಆಲಿಕಲ್ಲು ಮಳೆಯಿಂದ ಬೆಳೆ ನಷ್ಟವಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

