ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯನನ್ನು ನವಗ್ರಹಗಳ ಅಧಿಪತಿ ಎಂದು ಪರಿಗಣಿಸಲಾಗುತ್ತದೆ. ಆತ್ಮವಿಶ್ವಾಸ, ಶಕ್ತಿ, ಅಧಿಕಾರ ಮತ್ತು ಗೌರವದ ಸಂಕೇತವಾಗಿರುವ ಸೂರ್ಯ ಗ್ರಹವು ನಿರ್ದಿಷ್ಟ ಅವಧಿಯಲ್ಲಿ ತನ್ನ ರಾಶಿ ಹಾಗೂ ನಕ್ಷತ್ರವನ್ನು ಬದಲಾಯಿಸುತ್ತಾನೆ. ಈ ಬದಲಾವಣೆಗಳು ಜ್ಯೋತಿಷ್ಯದಲ್ಲಿ ವಿಶೇಷ ಮಹತ್ವ ಹೊಂದಿವೆ.
ಡಿಸೆಂಬರ್ 16ರಂದು ಸೂರ್ಯನು ಧನು ರಾಶಿಗೆ ಪ್ರವೇಶಿಸುವುದರ ಜೊತೆಗೆ ಮೂಲ ನಕ್ಷತ್ರಕ್ಕೂ ಸಂಚರಿಸಲಿದ್ದಾನೆ. ಈ ಅಪರೂಪದ ಸಂಚಾರವು ದ್ವಾದಶ ರಾಶಿಗಳ ಮೇಲೂ ಪರಿಣಾಮ ಬೀರಲಿದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಕೆಲವು ರಾಶಿಯವರಿಗೆ ಶುಭಫಲಗಳು ದೊರೆಯುವ ಸಾಧ್ಯತೆಯಿದ್ದರೆ, ಇನ್ನು ಕೆಲವು ರಾಶಿಯವರು ವೃತ್ತಿ, ಹಣಕಾಸು ಮತ್ತು ವೈಯಕ್ತಿಕ ಜೀವನದಲ್ಲಿ ಎಚ್ಚರಿಕೆ ವಹಿಸಬೇಕಾಗುತ್ತದೆ. ಹಾಗಾದರೆ ಸೂರ್ಯನ ಈ ಸಂಚಾರದಿಂದ ಜಾಗರೂಕರಾಗಿರಬೇಕಾದ ರಾಶಿಗಳು ಯಾವುವು? ಇಲ್ಲಿದೆ ಮಾಹಿತಿ.
ವೃಷಭ ರಾಶಿ
ಸೂರ್ಯನ ಸಂಚಾರದಿಂದ ವೃಷಭ ರಾಶಿಯವರಲ್ಲಿ ದೈಹಿಕ ಮತ್ತು ಮಾನಸಿಕ ಉತ್ಸಾಹ ಕಡಿಮೆಯಾಗುವ ಸಾಧ್ಯತೆಯಿದೆ. ಹೊಸ ಕೆಲಸಗಳನ್ನು ಆರಂಭಿಸುವಾಗ ಆತ್ಮವಿಶ್ವಾಸದ ಕೊರತೆ ಎದುರಾಗಬಹುದು. ಆದ್ದರಿಂದ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಸರಿಯಾಗಿ ಯೋಚಿಸುವುದು ಉತ್ತಮ.
ಉದ್ಯೋಗ ಕ್ಷೇತ್ರದಲ್ಲಿ ನಾಯಕತ್ವದ ಜವಾಬ್ದಾರಿ ಹೊಂದಿರುವವರಿಗೆ ಕೆಲಸದ ಒತ್ತಡ ಹೆಚ್ಚಾಗಬಹುದು. ಹಣಕಾಸಿನ ವಿಚಾರಗಳಲ್ಲಿ ಗೊಂದಲ ಉಂಟಾಗುವ ಸಾಧ್ಯತೆಯಿದೆ. ಕುಟುಂಬ ಮತ್ತು ಸಂಗಾತಿಯೊಂದಿಗಿನ ಸಂಬಂಧದಲ್ಲಿ ತಾಳ್ಮೆ ಕಾಪಾಡಿಕೊಳ್ಳಿ. ಅನಗತ್ಯ ವಾದ-ವಿವಾದಗಳಿಂದ ದೂರವಿರುವುದು ಉತ್ತಮ.
ಮಿಥುನ ರಾಶಿ
ಮಿಥುನ ರಾಶಿಯವರಿಗೆ ಈ ಸಂಚಾರವು ಆರ್ಥಿಕ ವಿಚಾರಗಳಲ್ಲಿ ಕೆಲವು ಏರಿಳಿತಗಳನ್ನು ತರಬಹುದು. ಅನಿರೀಕ್ಷಿತ ಖರ್ಚುಗಳು ಎದುರಾಗುವ ಸಾಧ್ಯತೆಯಿರುವುದರಿಂದ ಹಣಕಾಸಿನ ನಿರ್ವಹಣೆಗೆ ಹೆಚ್ಚಿನ ಗಮನ ನೀಡಬೇಕು.
ಕುಟುಂಬದ ಸದಸ್ಯರೊಂದಿಗೆ ಭಿನ್ನಾಭಿಪ್ರಾಯ ಉಂಟಾಗದಂತೆ ಎಚ್ಚರಿಕೆ ವಹಿಸಿ. ಮಾತನಾಡುವಾಗ ಕಠಿಣ ಪದಗಳ ಬಳಕೆ ಮತ್ತು ಇತರರನ್ನು ಟೀಕಿಸುವುದನ್ನು ತಪ್ಪಿಸಿ. ಕೆಲಸದ ಸ್ಥಳದಲ್ಲಿಯೂ ಶಾಂತವಾಗಿ ವರ್ತಿಸುವುದು ಉತ್ತಮ.
ಮೇಷ ರಾಶಿ
ಮೇಷ ರಾಶಿಯವರಿಗೆ ಈ ಅವಧಿಯಲ್ಲಿ ಆರ್ಥಿಕ ಚಿಂತೆ ಮತ್ತು ಕೆಲಸದ ಒತ್ತಡ ಹೆಚ್ಚಾಗಬಹುದು. ಅನಿರೀಕ್ಷಿತ ವೆಚ್ಚಗಳು ಎದುರಾಗುವ ಸಾಧ್ಯತೆಯಿದೆ. ಕಚೇರಿಯಲ್ಲಿ ನಿಮ್ಮ ಪರಿಶ್ರಮಕ್ಕೆ ತಕ್ಕ ಮನ್ನಣೆ ಸಿಗದಿರುವುದು ಬೇಸರ ತರಬಹುದು.
ವಿದೇಶಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ನಿಧಾನಗತಿಯ ಪ್ರಗತಿ ಕಂಡುಬರಬಹುದು. ಈ ಸಮಯದಲ್ಲಿ ಅನಗತ್ಯ ಖರ್ಚುಗಳನ್ನು ನಿಯಂತ್ರಿಸುವುದು ಮುಖ್ಯ. ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚಾಗಬಹುದು. ಕೆಲಸ ಮತ್ತು ಕುಟುಂಬದ ನಡುವೆ ಸಮತೋಲನ ಕಾಯ್ದುಕೊಳ್ಳುವುದರಿಂದ ನೆಮ್ಮದಿ ದೊರೆಯಲಿದೆ.
ಮಕರ ರಾಶಿ
ಮಕರ ರಾಶಿಯವರಿಗೆ ಸೂರ್ಯನ ಸಂಚಾರವು ವೃತ್ತಿ ಹಾಗೂ ವೈಯಕ್ತಿಕ ಸಂಬಂಧಗಳಲ್ಲಿ ಕೆಲವು ಸವಾಲುಗಳನ್ನು ತರಬಹುದು. ನಿಮ್ಮ ಹಠಮಾರಿ ಸ್ವಭಾವದಿಂದ ಸಂಗಾತಿ ಅಥವಾ ವ್ಯಾಪಾರ ಪಾಲುದಾರರೊಂದಿಗೆ ಭಿನ್ನಾಭಿಪ್ರಾಯ ಉಂಟಾಗುವ ಸಾಧ್ಯತೆಯಿದೆ.
ವ್ಯಾಪಾರಸ್ಥರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಆತುರಪಡಬಾರದು. ಜಂಟಿ ಉದ್ಯಮ ಮತ್ತು ಹೂಡಿಕೆ ವಿಚಾರಗಳಲ್ಲಿ ಎಚ್ಚರಿಕೆ ಅಗತ್ಯ. ಪ್ರೀತಿಪಾತ್ರರ ಭಾವನೆಗಳಿಗೆ ಬೆಲೆ ನೀಡುವುದು ಮತ್ತು ಇತರರ ಅಭಿಪ್ರಾಯಗಳನ್ನು ಗೌರವಿಸುವುದು ಉತ್ತಮ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ಈ ಸಂಚಾರವು ಸಂವಹನ ಮತ್ತು ಪ್ರಯಾಣದ ವಿಚಾರಗಳಲ್ಲಿ ಕೆಲವು ಅಡೆತಡೆಗಳನ್ನು ತರಬಹುದು. ಸಾರ್ವಜನಿಕವಾಗಿ ಮಾತನಾಡುವವರು ಅಥವಾ ಸಂವಹನ ಕ್ಷೇತ್ರದಲ್ಲಿ ಕೆಲಸ ಮಾಡುವವರು ಆತ್ಮವಿಶ್ವಾಸದ ಕೊರತೆ ಅನುಭವಿಸಬಹುದು.
ಪ್ರಯಾಣದ ಯೋಜನೆಗಳು ಮತ್ತು ಪ್ರಮುಖ ಮಾತುಕತೆಗಳಲ್ಲಿ ಸವಾಲುಗಳು ಎದುರಾಗುವ ಸಾಧ್ಯತೆಯಿದೆ. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಸಣ್ಣ ಪ್ರಯತ್ನಗಳನ್ನೂ ಮೇಲಧಿಕಾರಿಗಳು ಗಮನಿಸುವ ಸಾಧ್ಯತೆಯಿರುವುದರಿಂದ ಕೆಲಸದಲ್ಲಿ ಹೆಚ್ಚಿನ ಜಾಗರೂಕತೆ ಇರಲಿ. ಗುರಿ ಸಾಧಿಸಲು ಸ್ಪಷ್ಟ ಯೋಜನೆ ರೂಪಿಸಿಕೊಂಡು ಮುನ್ನಡೆಯುವುದು ಉತ್ತಮ.
ಸೂರ್ಯನ ಸಂಚಾರದ ಅವಧಿಯಲ್ಲಿ ಯಾವುದೇ ಪ್ರಮುಖ ನಿರ್ಧಾರಗಳನ್ನು ಆತುರದಿಂದ ತೆಗೆದುಕೊಳ್ಳದೆ, ತಾಳ್ಮೆ ಮತ್ತು ವಿವೇಚನೆಯಿಂದ ಮುಂದುವರಿಯುವುದು ಉತ್ತಮ ಎಂದು ಜ್ಯೋತಿಷ್ಯ ನಂಬಿಕೆಗಳು ಸೂಚಿಸುತ್ತವೆ.
Disclaimer: ಈ ಲೇಖನದಲ್ಲಿನ ಮಾಹಿತಿಯು ಜ್ಯೋತಿಷ್ಯ ನಂಬಿಕೆಗಳು ಮತ್ತು ಲಭ್ಯವಿರುವ ಮೂಲಗಳನ್ನು ಆಧರಿಸಿದೆ. ಇದಕ್ಕೆ ವೈಜ್ಞಾನಿಕ ದೃಢೀಕರಣವಿಲ್ಲ. ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು.

