ನಿನ್ನೆ ( ಏಪ್ರಿಲ್ 19 ) ಮುಲ್ಲಾನ್‌ಪುರದಲ್ಲಿ ನಡೆದ ಪಂಜಾಬ್ ಕಿಂಗ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳ ನಡುವಿನ ಪಂದ್ಯದಲ್ಲಿ ಪಂಜಾಬ್ 54 ರನ್‌ಗಳ ಬೃಹತ್ ಗೆಲುವನ್ನು ದಾಖಲಿಸುವ ಮೂಲಕ ಟೂರ್ನಿಯಲ್ಲಿ ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರಿಸಿತು.
ಟೂರ್ನಿಯಲ್ಲಿ ಇಲ್ಲಿಯವರೆಗೂ ಒಟ್ಟು 6 ಪಂದ್ಯಗಳನ್ನಾಡಿರುವ ಪಂಜಾಬ್ ಕಿಂಗ್ಸ್ ಯಾವುದೇ ಪಂದ್ಯವನ್ನೂ ಸೋಲದೇ ಮುನ್ನುಗ್ಗುತ್ತಿದೆ. ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯ ಮಳೆಯಿಂದ ರದ್ದಾದ ಕಾರಣ ಆ ಪಂದ್ಯ ಫಲಿತಾಂಶವಿಲ್ಲದೇ ಅಂತ್ಯಗೊಂಡ ಕಾರಣ ಸದ್ಯ 11 ಅಂಕಗಳನ್ನು ಹೊಂದಿರುವ ಪಂಜಾಬ್ ಕಿಂಗ್ಸ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ಈ ಸತತ ಗೆಲುವುಗಳ ಮೂಲಕ ಪಂಜಾಬ್ ಕಿಂಗ್ಸ್ ಈ ಹಿಂದೆ ತಾನೇ ಮಾಡಿದ್ದ ದಾಖಲೆಯನ್ನು ಅಳಿಸಿಹಾಕಿದೆ. ಹೌದು, ಐಪಿಎಲ್ ಇತಿಹಾಸದಲ್ಲಿ ಟೂರ್ನಿ ಆರಂಭವಾದ ಮೊದಲ ಆರು ಪಂದ್ಯಗಳಲ್ಲಿ ಸೋಲನ್ನೇ ಕಾಣದ ಮೊದಲ ತಂಡ ಎಂಬ ದಾಖಲೆಯನ್ನು ಪಂಜಾಬ್ ಬರೆದಿದೆ.
ಈ ಹಿಂದೆ 2015ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಸತತವಾಗಿ ಮೊದಲ ಐದು ಪಂದ್ಯಗಳನ್ನು ಗೆದ್ದು ಈ ದಾಖಲೆಯನ್ನು ಬರೆದಿತ್ತು.

