ಹಾಸನ: ಆಕಸ್ಮಿಕವಾಗಿ ಕಾಲುಜಾರಿ ನದಿಗೆ ಬಿದ್ದ ಅಳಿಯ ನೀರಿನಲ್ಲಿ ಮುಳುಗುತ್ತಿದ್ದುದನ್ನು ಕಂಡು ಆತನ ರಕ್ಷಣೆಗೆ ಹೋದ ಮಾವ ಕೂಡ ನೀರು ಪಾಲಾಗಿರುವ ಘಟನೆ ಹಾಸನದಲ್ಲಿ ನಡೆದಿದೆ.
ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಎನ್.ಹೊಸಳ್ಳಿ ಗ್ರಾಮದಲ್ಲಿ ಈ ದುರ್ಗಟನೆ ಬೆಳಕಿಗೆ ಬಂದಿದೆ. ಸೋಮನಹಳ್ಳಿ ಗ್ರಾಮದ 12 ವರ್ಷದ ಬಾಲಕ ಪ್ರತೀಕ್, ಶಾಲೆಗೆ ಬೇಸಿಗೆ ರಜೆ ಇದ್ದ ಕಾರಣ ಅರಸೀಕೆರೆಯಲ್ಲಿರುವ ತನ್ನ ಮಾವ ಪ್ರಭಾಕರ್ (45) ಅವರ ಮನೆಗೆ ಬಂದಿದ್ದ. ರಜೆಯ ಮಜಾ ಕಳೆಯುತ್ತಿದ್ದ ಬಾಲಕ ತನ್ನ ಮಾವನ ಜೊತೆ ಕೆರೆಯ ದಡದಲ್ಲಿ ಹೋಗುತ್ತಿದ್ದಾಗ ಆಕಸ್ಮಿಕವಾಗಿ ಪ್ರತೀಕ್ ಕಾಲು ಜಾರಿ ನೀರಿಗೆ ಬಿದ್ದಿದ್ದಾನೆ.
ನೀರಿಗೆ ಬಿದ್ದ ಅಳಿಯ ಪ್ರತೀಕ್ ಮುಳುಗುತ್ತಿರುವುದನ್ನು ಕಂಡು ಗಾಬರಿಗೊಂಡ ಪ್ರಭಾಕರ್, ಕೂಡಲೇ ಆತನನ್ನು ರಕ್ಷಿಸಲು ಕೆರೆಗೆ ಇಳಿದಿದ್ದಾರೆ. ಆದರೆ ದುರದೃಷ್ಟವಶಾತ್ ಪ್ರಭಾಕರ್ ಅವರಿಗೂ ಈಜು ಬರುತ್ತಿರಲಿಲ್ಲ. ಅಳಿಯನನ್ನು ದಡಕ್ಕೆ ತರುವ ಪ್ರಯತ್ನದಲ್ಲಿ ಇಬ್ಬರೂ ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಮೃತಪಟ್ಟಿದ್ದಾರೆ.
ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಇಬ್ಬರ ಮೃತದೇಹಗಳನ್ನು ಕೆರೆಯಿಂದ ಹೊರತೆಗೆದಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಗಂಡಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

