HomeIPL 2026IPL 2026: ಅಬ್ಬಬ್ಬಾ ಥ್ರಿಲ್ಲರ್ ಪಂದ್ಯದಲ್ಲಿ ಗೆದ್ದ ಗುಜರಾತ್; ಗೆಲ್ಲಬಹುದಿದ್ದ ಪಂದ್ಯ ಕೈಚೆಲ್ಲಿದ ಡೆಲ್ಲಿ

IPL 2026: ಅಬ್ಬಬ್ಬಾ ಥ್ರಿಲ್ಲರ್ ಪಂದ್ಯದಲ್ಲಿ ಗೆದ್ದ ಗುಜರಾತ್; ಗೆಲ್ಲಬಹುದಿದ್ದ ಪಂದ್ಯ ಕೈಚೆಲ್ಲಿದ ಡೆಲ್ಲಿ

ಡೆಲ್ಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಲೀಗ್ ಹಂತದ 14ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗುಜರಾತ್ ಟೈಟನ್ಸ್ 1 ರನ್‌ಗಳ ರೋಚಕ ಗೆಲುವನ್ನು ಕಂಡಿದೆ.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟನ್ಸ್ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 210 ರನ್ ಕಲೆಹಾಕಿ ಡೆಲ್ಲಿ ಕ್ಯಾಪಿಟಲ್ಸ್‌ಗೆ 211 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಲು ಯತ್ನಿಸಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 209 ರನ್ ಕಲೆಹಾಕಿತು.

ಗುಜರಾತ್ ಟೈಟನ್ಸ್ ಇನ್ನಿಂಗ್ಸ್: ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಸಾಯಿ ಸುದರ್ಶನ್ ಕೇವಲ 12 ರನ್ ಗಳಿಸಿದರೆ, ಆರಂಭದಲ್ಲಿ ನಿಧಾನಗತಿ ಬ್ಯಾಟಿಂಗ್ ಮಾಡಿ ಬಳಿಕ ಬಿರುಸಾದ ಬ್ಯಾಟಿಂಗ್ ನಡೆಸಿದ ಶುಬ್‌ಮನ್ ಗಿಲ್ 45 ಎಸೆತಗಳಲ್ಲಿ 4 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 70 ರನ್ ಬಾರಿಸಿದರು. ಇನ್ನುಳಿದಂತೆ ಜೋಶ್ ಬಟ್ಲರ್ 27 ಎಸೆತಗಳಲ್ಲಿ 3 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 52 ರನ್ ಚಚ್ಚಿದರು. ವಾಷಿಂಗ್ಟನ್ ಸುಂದರ್ 32 ಎಸೆತಗಳಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 55 ರನ್ ಬಾರಿಸಿ ಐಪಿಎಲ್‌ನಲ್ಲಿ ಚೊಚ್ಚಲ ಅರ್ಧಶತಕ ಬಾರಿಸಿದ ಸಾಧನೆ ಮಾಡಿದರು. ಗ್ಲೆನ್ ಫಿಲಿಪ್ಸ್ ಅಜೇಯ 14 ರನ್ ಹಾಗೂ ರಾಹುಲ್ ತೆವಾಟಿಯಾ ಅಜೇಯ 1 ರನ್ ಗಳಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಡೆಲ್ಲಿ ಕ್ಯಾಪಿಟಲ್ಸ್ ಪರ ಮುಕೇಶ್ ಕುಮಾರ್ ಎರಡು ವಿಕೆಟ್, ಲುಂಗಿ ಎನ್‌ಗಿಡಿ ಹಾಗೂ ಕುಲ್‌ದೀಪ್ ಯಾದವ್ ತಲಾ ಒಂದೊಂದು ವಿಕೆಟ್ ಪಡೆದರು.

ಡೆಲ್ಲಿ ಕ್ಯಾಪಿಟಲ್ಸ್ ಇನ್ನಿಂಗ್ಸ್: ಡೆಲ್ಲಿ ಪರ ಆರಂಭಿಕರಾಗಿ ಕಣಕ್ಕಿಳಿದ ಪಥುಮ್ ನಿಸ್ಸಂಕ ಹಾಗೂ ಕೆಎಲ್ ರಾಹುಲ್ 76 ರನ್‌ಗಳ ಜತೆಯಾಟವಾಡುವ ಮೂಲಕ ಉತ್ತಮ ಆರಂಭವನ್ನು ನೀಡಿದರು. ನಿಸ್ಸಂಕ 24 ಎಸೆತಗಳಲ್ಲಿ 41 ರನ್ ಬಾರಿಸಿ ಔಟ್ ಆದರು. ಬೆನ್ನಲ್ಲೇ ನಿತಿಶ್ ರಾಣಾ 5 ರನ್, ಸಮೀರ್ ರಿಜ್ವಿ ಡಕ್‌ಔಟ್, ಅಕ್ಷರ್ ಪಟೇಲ್ 2, ಟ್ರಿಸ್ಟನ್ ಸ್ಟಬ್ಸ್ 7 ರನ್ ಮಾತ್ರ ಗಳಿಸಿ ವಿಕೆಟ್ ಒಪ್ಪಿಸಿದರು. ಒಂದೆಡೆ ವಿಕೆಟ್ ಬೀಳುತ್ತಿದ್ದರೆ ಮತ್ತೊಂದೆಡೆ ಜವಾಬ್ದಾರಿಯುತ ಆಟವನ್ನಾಡಿದ ಕೆಎಲ್ ರಾಹುಲ್ 52 ಎಸೆತಗಳಲ್ಲಿ 11 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 92 ರನ್ ಕಲೆಹಾಕಿ ಔಟ್ ಆಗಿ ಶತಕ ವಂಚಿತರಾದರು. ಕೊನೆಯಲ್ಲಿ ಅಬ್ಬರಿಸಿದ ಡೇವಿಡ್ ಮಿಲ್ಲರ್ 12 ಎಸೆತಗಳಲ್ಲಿ 36 ರನ್ ಬೇಕಿದ್ದಾಗ ಸಿರಾಜ್ ಎಸೆದ 19ನೇ ಓವರ್‌ನಲ್ಲಿ ಮಿಲ್ಲರ್ ಎರಡು ಸಿಕ್ಸರ್, ಒಂದು ಬೌಂಡರಿ ಮತ್ತು ವಿಪ್ರಾಜ್ ನಿಗಮ್ ಒಂದು ಬೌಂಡರಿ ಮತ್ತು ಒಂದು ಸಿಂಗಲ್ ರನ್ ಗಳಿಸಿದ ಪರಿಣಾಮ ಆ ಓವರ್‌ 23 ರನ್ ಹರಿದುಬಂತು. ಅಲ್ಲಿಗೆ ಕೊನೆಯ ಆರು ಎಸೆತಗಳಿಗೆ ಗೆಲ್ಲಲು 13 ರನ್‌ಗಳ ಅಗತ್ಯವಿತ್ತು. ಪ್ರಸಿದ್ಧ್ ಕೃಷ್ಣ ಎಸೆದ ಕೊನೆಯ ಓವರ್‌ನ ಮೊದಲ ಎಸೆತಕ್ಕೆ ಬೌಂಡರಿ ಬಾರಿಸಿದ ವಿಪ್ರಾಜ್ ನಿಗಮ್ ನಂತರದ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಬೆನ್ನಲ್ಲೆ ಕಣಕ್ಕಿಳಿದ ಕುಲ್‌ದೀಪ್ ಯಾದವ್ ಸಿಂಗಲ್ ತೆಗೆದುಕೊಂಡು ಮಿಲ್ಲರ್‌ಗೆ ಸ್ಟ್ರೈಕ್ ನೀಡಿದರು. 3 ಎಸೆತಗಳಿಗೆ 8 ರನ್ ಬೇಕಿದ್ದಾಗ ಭರ್ಜರಿ ಸಿಕ್ಸರ್ ಬಾರಿಸಿದ ಮಿಲ್ಲರ್ ಓವರ್‌ನ ಐದನೇ ಎಸೆತಕ್ಕೆ ಯಾವುದೇ ರನ್ ಬಾರಿಸಲಿಲ್ಲ ಹಾಗೂ ಒಂದು ರನ್ ಓಡುವ ಅವಕಾಶವಿದ್ದರೂ ಕಡೆಗಣಿಸಿದರು. ಈ ಮೂಲಕ ಕೊನೆಯ ಎಸೆತಕ್ಕೆ ಎರಡು ರನ್ ಬಾರಿಸಬೇಕಾದ ಅನಿವಾರ್ಯತೆ ಎದುರಾಯಿತು. ಕೊನೆಯ ಬೌನ್ಸರ್‌ ಎಸೆತವನ್ನು ಎದುರಿಸುವಲ್ಲಿ ಮಿಲ್ಲರ್ ವಿಫಲರಾದ ಕಾರಣ ಚೆಂಡು ವಿಕೆಟ್ ಕೀಪರ್ ಕೈಸೇರಿತ್ತು. ಈ ಸಮಯದಲ್ಲಿ ರನ್ ಕದ್ದು ಡ್ರಾ ಮಾಡಿಕೊಳ್ಳಲು ಮುಂದಾದರಾದರೂ ಕುಲ್‌ದೀಪ್ ಯಾದವ್ ರನ್‌ಔಟ್ ಆದರು. ವಿಪ್ರಾಜ್ ನಿಗಮ್ 12 ರನ್ ಕಲೆಹಾಕಿದರೆ, ಕುಲ್‌ದೀಪ್ ಯಾದವ್ 1 ಹಾಗೂ ಡೇವಿಡ್ ಮಿಲ್ಲರ್ 20 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 3 ಬೌಂಡರಿ ಸಹಿತ ಅಜೇಯ 41 ರನ್ ಬಾರಿಸಿದರು.

ಗುಜರಾತ್ ಟೈಟನ್ಸ್ ಪರ ರಶೀದ್ ಖಾನ್ ಮೂರು ವಿಕೆಟ್, ಪ್ರಸಿದ್ಧ್ ಕೃಷ್ಣ ಎರಡು ವಿಕೆಟ್ ಹಾಗೂ ಮೊಹಮ್ಮದ್ ಸಿರಾಜ್ ಒಂದು ವಿಕೆಟ್ ಪಡೆದರು.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular