ಸಾಮಾನ್ಯವಾಗಿ ಮದುವೆ ಮಾತುಕತೆ ವೇಳೆ ವರನ ಕೆಲಸ, ಆತನ ವಾರ್ಷಿಕ ಆದಾಯ, ಸ್ವಭಾವ ಹಾಗೂ ಕುಟುಂಬದ ಹಿನ್ನೆಲೆಯನ್ನು ನೋಡುವುದು ವಾಡಿಕೆ. ಆದರೆ, ಸುಂದರವಾಗಿದ್ದು, ವರ್ಷಕ್ಕೆ ಬರೋಬ್ಬರಿ ₹40 ಲಕ್ಷ ಸಂಪಾದಿಸುವ ಉತ್ತಮ ಕುಟುಂಬದ ಯುವಕನೊಬ್ಬನ ಮದುವೆ ಪ್ರಸ್ತಾಪವನ್ನು ಯುವತಿಯೊಬ್ಬಳು ವಿಚಿತ್ರ ಕಾರಣಕ್ಕೆ ತಿರಸ್ಕರಿಸಿರುವ ಘಟನೆ ಈಗ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ (X) ಭಾರಿ ಚರ್ಚೆಗೆ ಕಾರಣವಾಗಿದೆ.
ಇನ್ಸ್ಟಾಗ್ರಾಮ್ ಪ್ರೊಫೈಲ್ ನೋಡಿ ನಿರ್ಧಾರ
ಆರೂಹಿ ರೆಡ್ಡಿ ಎಂಬ ಹೆಸರಿನ ಎಕ್ಸ್ ಖಾತೆದಾರರು ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ನನಗೆ ಇತ್ತೀಚೆಗೆ ಮದುವೆಯ ಪ್ರಸ್ತಾಪವೊಂದು ಬಂದಿತ್ತು. ಆ ಹುಡುಗ ನೋಡಲು ಹ್ಯಾಂಡ್ಸಮ್ ಆಗಿದ್ದ, ₹40 ಲಕ್ಷದ ಉತ್ತಮ ಪ್ಯಾಕೇಜ್ ಹೊಂದಿದ್ದು, ಒಳ್ಳೆ ಕುಟುಂಬದಿಂದ ಬಂದವನಾಗಿದ್ದ. ಆದರೂ ನಾನು ಆತನನ್ನು ನಿರಾಕರಿಸಿದೆ. ಕಾರಣ, ಆತನ ಇನ್ಸ್ಟಾಗ್ರಾಮ್ ಪ್ರೊಫೈಲ್ ತೆರೆದು ನೋಡಿದಾಗ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರನ್ನು ತನ್ನ ರೋಲ್ ಮಾಡೆಲ್ ಎಂದು ಬರೆದುಕೊಂಡಿದ್ದ ಎಂದು ಪೋಸ್ಟ್ ಮಾಡಿದ್ದಾರೆ.
https://x.com/CuteAaruhi4/status/2089313204531020023
https://www.instagram.com/reel/DcQXb35T2xZ/?utm_source=ig_web_copy_link&igsi=NTc4MTIwNjQ2YQ==
ತಮ್ಮ ನಿರ್ಧಾರಕ್ಕೆ ಸ್ಪಷ್ಟನೆ ನೀಡಿರುವ ಆಕೆ, “ನಾನೊಬ್ಬ ಹೆಮ್ಮೆಯ ರಾಷ್ಟ್ರವಾದಿ ಹಿಂದೂ. ಸದಾ ಸೋಲುವ ವ್ಯಕ್ತಿಯನ್ನು ತನ್ನ ಆದರ್ಶ ಎಂದು ನಂಬಿರುವವನನ್ನು ನಾನು ಹೇಗೆ ತಾನೇ ಜೀವನಸಂಗಾತಿಯಾಗಿ ಸ್ವೀಕರಿಸಲಿ? ನನಗೆ ಹಣ ಮತ್ತು ಆಸ್ತಿಗಿಂತ ನನ್ನ ದೇಶವೇ ಮುಖ್ಯ” ಎಂದು ಬರೆದುಕೊಂಡಿದ್ದಾರೆ. ಇದರ ಜೊತೆಗೆ ತನಗೆ ಕಳೆದ ತಿಂಗಳಷ್ಟೇ 18 ವರ್ಷ ತುಂಬಿದೆ ಎಂಬುದನ್ನೂ ಕಾಮೆಂಟ್ನಲ್ಲಿ ಸ್ಪಷ್ಟಪಡಿಸಿದ್ದಾರೆ.
ಎಕ್ಸ್ನಲ್ಲಿ ನೆಟ್ಟಿಗರ ನಡುವೆ ಪರ-ವಿರೋಧ ಚರ್ಚೆ
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಎರಡು ಬಣಗಳಾಗಿ ವಿಂಗಡಣೆಯಾಗಿದ್ದು, ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ:
ಬೆಂಬಲ: “ಜೀವನಪೂರ್ತಿ ಒಟ್ಟಿಗೆ ಬಾಳಬೇಕಾದಾಗ ಸಿದ್ಧಾಂತ ಹಾಗೂ ಆಲೋಚನೆಗಳು ಹೊಂದುವುದು ಅತ್ಯಗತ್ಯ. ಆಕೆಯ ವೈಯಕ್ತಿಕ ನಿಲುವು ಸರಿಯಾಗಿದೆ” ಎಂದು ಕೆಲವರು ಸಮರ್ಥಿಸಿಕೊಂಡಿದ್ದಾರೆ.
ಟೀಕೆ: “ರಾಜಕೀಯ ಅಭಿಪ್ರಾಯಗಳನ್ನು ಮದುವೆಯಂತಹ ಪವಿತ್ರ ಬಂಧಕ್ಕೆ ತರುವುದು ಸರಿಯಲ್ಲ. ಕೇವಲ ರಾಜಕೀಯ ಸಿದ್ಧಾಂತದಿಂದ ವ್ಯಕ್ತಿಯ ಗುಣವನ್ನು ಅಳೆಯಲು ಸಾಧ್ಯವಿಲ್ಲ” ಎಂದು ಇನ್ನು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

