ಅಮೆರಿಕದ ನ್ಯೂಯಾರ್ಕ್ ನಲ್ಲಿ 27 ವರ್ಷದ ಭಾರತೀಯ ಮಹಿಳೆ ನಿಖಿತಾ ಗೋಡಿಶಾಲಾ ಕೊಲೆ ಮಾಡಿ ಭಾರತಕ್ಕೆ ಪರಾರಿಯಾಗಿದ್ದ ಮಾಜಿ ಗೆಳೆಯ ಅರ್ಜುನ್ ಶರ್ಮಾನನ್ನು ತಮಿಳುನಾಡಿನಲ್ಲಿ ಬಂಧಿಸಲಾಗಿದೆ.
ಎಲ್ಲಿಕಾಟ್ ನಗರದ ನಿವಾಸಿ ನಿಖಿತಾ ಗೋಡಿಶಾಲಾ ಜನವರಿ 2 ರಂದು ನಾಪತ್ತೆಯಾಗಿದ್ದರು. ಹೊವಾರ್ಡ್ ಕೌಂಟಿ ಪೊಲೀಸರು ಭಾನುವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಕೊಲಂಬಿಯಾ, ಮೇರಿಲ್ಯಾಂಡ್ ನಲ್ಲಿ ಆಕೆಯ ಮಾಜಿ ಗೆಳೆಯ ಅರ್ಜುನ್ ಶರ್ಮಾ(26) ಅಪಾರ್ಟ್ಮೆಂಟ್ ನಲ್ಲಿ ಇರಿತದ ಗಾಯಗಳೊಂದಿಗೆ ನಿಖಿತಾ ಶವವಾಗಿ ಪತ್ತೆಯಾಗಿದ್ದಾಳೆ ಎಂದು ತಿಳಿಸಿದ್ದಾರೆ.
ತೆಲುಗು ಮೂಲದ ನಿಖೀತಾ ಕೊಲೆಗೈದ ಆರೋಪಿಗಾಗಿ ಇಂಟರ್‌ಪೋಲ್ ನಡೆಸಿದ ಅಂತರರಾಷ್ಟ್ರೀಯ ಹುಡುಕಾಟ ತಮಿಳುನಾಡಿನಲ್ಲಿ ಕೊನೆಗೊಂಡಿದೆ. ಅಮೆರಿಕದಲ್ಲಿ ನಿಖಿತಾ ಗೋಡಿಶಾಲಾ ಅವರನ್ನು ಕೊಲೆ ಮಾಡಿ ಅಪರಾಧ ನಡೆದ ಕೂಡಲೇ ಭಾರತಕ್ಕೆ ಪಲಾಯನ ಮಾಡಿದ ಆರೋಪದ ಮೇಲೆ ಆರೋಪಿ ಅರ್ಜುನ್ ಶರ್ಮಾನನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮೇರಿಲ್ಯಾಂಡ್‌ನಲ್ಲಿ ನೆಲೆಸಿರುವ ಭಾರತೀಯ-ಅಮೇರಿಕನ್ ಡೇಟಾ ವಿಶ್ಲೇಷಕಿ ನಿಕಿತಾ ರಾವ್ ಗೋಡಿಶಾಲಾ(27) ಜನವರಿ 2 ರಂದು ಕಾಣೆಯಾಗಿದ್ದರು. ಆಕೆಯ ಮಾಜಿ ಗೆಳೆಯ ಅರ್ಜುನ್ ಶರ್ಮಾ ಹೊಸ ವರ್ಷದ ಮುನ್ನಾದಿನದಂದು ತಾನು ಕೊನೆಯ ಬಾರಿಗೆ ಅವಳನ್ನು ನೋಡಿದ್ದೇನೆ ಎಂದು ಹೊವಾರ್ಡ್ ಕೌಂಟಿ ಪೊಲೀಸರಿಗೆ ಮಾಹಿತಿ ನೀಡಿದ್ದ. ನಾಪತ್ತೆ ದೂರು ದಾಖಲಿಸಿದ ಅದೇ ದಿನ ಅಮೆರಿಕದಿಂದ ಭಾರತಕ್ಕೆ ತೆರಳಿದ್ದ ಎಂದು ಪೊಲೀಸರು ದೃಢಪಡಿಸಿದರು. ಅವರನ್ನು ಸೋಮವಾರ ಬಂಧಿಸಲಾಯಿತು ಮತ್ತು ಬಂಧನದ ಕುರಿತು ಹೆಚ್ಚಿನ ವಿವರಗಳನ್ನು ಇನ್ನೂ ದೃಢಪಡಿಸಲಾಗಿಲ್ಲ.
ಹೊವಾರ್ಡ್ ಕೌಂಟಿ ಪೊಲೀಸರು ನಂತರ ಶರ್ಮಾ ವಿರುದ್ಧ ಪ್ರಥಮ ದರ್ಜೆ ಮತ್ತು ದ್ವಿತೀಯ ದರ್ಜೆ ಕೊಲೆ ಆರೋಪದ ಮೇಲೆ ಬಂಧನ ವಾರಂಟ್ ಗಳನ್ನು ಪಡೆದರು. ಹತ್ಯೆಯ ಹಿಂದಿನ ಉದ್ದೇಶ ಇನ್ನೂ ತನಿಖೆಯಲ್ಲಿದೆ.
ಗೋಡಿಶಾಲಾ ಫೆಬ್ರವರಿ 2025 ರಿಂದ ವೇಡಾ ಹೆಲ್ತ್‌ನಲ್ಲಿ ಡೇಟಾ ಮತ್ತು ಸ್ಟ್ರಾಟಜಿ ವಿಶ್ಲೇಷಕರಾಗಿ ಕೆಲಸ ಮಾಡುತ್ತಿದ್ದರು. ಕುಟುಂಬದ ಆಪ್ತ ಮೂಲಗಳ ಪ್ರಕಾರ, ಅವರು ಇತ್ತೀಚೆಗೆ ಕಂಪನಿಯ “ಆಲ್-ಇನ್ ಅವಾರ್ಡ್” ಅನ್ನು ಪಡೆದಿದ್ದರು. ಅವರು ಮೇರಿಲ್ಯಾಂಡ್‌ನ ಎಲ್ಲಿಕಾಟ್ ಸಿಟಿಯಲ್ಲಿ ನೆಲೆಸಿದ್ದರು. ಮತ್ತು ಸ್ವತಂತ್ರವಾಗಿ ವಾಸಿಸುತ್ತಿದ್ದರು.
ಅಂತರರಾಷ್ಟ್ರೀಯ ಸಮನ್ವಯದ ನಂತರ ಬಂಧನ
ಶರ್ಮಾ ದೇಶದಿಂದ ನಿರ್ಗಮಿಸಿದ ನಂತರ ಅವರನ್ನು ಪತ್ತೆಹಚ್ಚಲು ಯುಎಸ್ ಫೆಡರಲ್ ಏಜೆನ್ಸಿಗಳು ಭಾರತೀಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿದವು. ಏಜೆನ್ಸಿಗಳ ನಡುವೆ ನಿರಂತರ ಕಣ್ಗಾವಲು ಮತ್ತು ಮಾಹಿತಿ ಹಂಚಿಕೆಯ ನಂತರ ಇಂಟರ್ಪೋಲ್ ಪೊಲೀಸರು ತಮಿಳುನಾಡಿನಲ್ಲಿ ಅವರನ್ನು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಔಪಚಾರಿಕ ಹಸ್ತಾಂತರ ಪ್ರಕ್ರಿಯೆಗಳು ನಂತರ ನಡೆಯುವ ನಿರೀಕ್ಷೆಯಿದೆ.
ಯುನೈಟೆಡ್ ಸ್ಟೇಟ್ಸ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಗೋಡಿಶಾಲಾ ಅವರ ಕುಟುಂಬದೊಂದಿಗೆ ಸಂಪರ್ಕದಲ್ಲಿದೆ ಮತ್ತು ಕಾನ್ಸುಲರ್ ಸಹಾಯವನ್ನು ನೀಡುತ್ತಿದೆ ಎಂದು ದೃಢಪಡಿಸಿದೆ.

