ಮ್ಯಾನ್ ಆಫ್ ಮಾಸಸ್ ಜೂನಿಯರ್ ಎನ್ಟಿಆರ್ ಹಾಗೂ ಕೆಜಿಎಫ್ ಖ್ಯಾತಿಯ ಸ್ಟಾರ್ ನಿರ್ದೇಶಕ ಪ್ರಶಾಂತ್ ನೀಲ್ ಕಾಂಬಿನೇಷನ್ನ ಬಹುನಿರೀಕ್ಷಿತ ‘ಡ್ರ್ಯಾಗನ್’ ಸಿನಿಮಾಗೆ ಸಂಬಂಧಿಸಿದಂತೆ ಇದೀಗ ಗಾಂಧಿನಗರ ಹಾಗೂ ಟಾಲಿವುಡ್ನಲ್ಲಿ ಭಾರಿ ಕುತೂಹಲಕಾರಿ ಸುದ್ದಿಯೊಂದು ಹರಿದಾಡುತ್ತಿದೆ. ‘ಧುರಂಧರ್’ ಚಿತ್ರದ ಮೂಲಕ ಅಪಾರ ಗಮನ ಸೆಳೆದಿದ್ದ ಯುವ ಸಂಗೀತ ನಿರ್ದೇಶಕ ಶಸ್ವತ್ ಸಚ್ದೇವ್, ಈ ಬೃಹತ್ ಸಿನಿಮಾದ ಕೆಲ ಹಾಡುಗಳಿಗೆ ಸ್ವರಸಂಯೋಜನೆ ಮಾಡಲು ಚಿತ್ರತಂಡದ ಜೊತೆ ಮಾತುಕತೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
ರವಿ ಬಸ್ರೂರ್ ಜೊತೆಗೆ ಮತ್ತೊಬ್ಬ ಮ್ಯೂಸಿಕ್ ಡೈರೆಕ್ಟರ್ ಎಂಟ್ರಿ?: ‘ಡ್ರ್ಯಾಗನ್’ ಚಿತ್ರಕ್ಕೆ ಮೊದಲೇ ಕನ್ನಡಿಗರ ನೆಚ್ಚಿನ ಸಂಗೀತ ನಿರ್ದೇಶಕ ರವಿ ಬಸ್ರೂರ್ ಮೂಲ ಸಂಗೀತ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಹೀಗಿರುವಾಗ ಶಸ್ವತ್ ಸಚ್ದೇವ್ ಅವರ ಸಂಭಾವ್ಯ ಸೇರ್ಪಡೆ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಒಂದು ವೇಳೆ ಈ ಮಾತುಕತೆ ಯಶಸ್ವಿಯಾದರೆ, ಶಸ್ವತ್ ಸಿನಿಮಾದಲ್ಲಿ ಕೆಲವು ನಿರ್ದಿಷ್ಟ ಹಾಡುಗಳಿಗೆ ಮಾತ್ರ ಸಂಗೀತ ನೀಡಲಿದ್ದಾರೆ ಎನ್ನಲಾಗಿದೆ.
ಇನ್ನೂ ಈ ಕುರಿತು ಚಿತ್ರತಂಡದಿಂದ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲವಾದರೂ, ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿ ಸಖತ್ ವೈರಲ್ ಆಗುತ್ತಿದೆ. ತಮ್ಮ ವಿಶಿಷ್ಟ ಬಿಜಿಎಂ ಹಾಗೂ ಸಂಗೀತ ಶೈಲಿಗೆ ಹೆಸರಾದ ಶಸ್ವತ್ ಸಚ್ದೇವ್ ಮತ್ತು ಪ್ರಶಾಂತ್ ನೀಲ್ ಜೋಡಿ ಒಟ್ಟಾದರೆ ‘ಡ್ರ್ಯಾಗನ್’ ಚಿತ್ರದ ಆಲ್ಬಮ್ ಮತ್ತಷ್ಟು ಮಾಸ್ ಆಗಿ ಮೂಡಿಬರಲಿದೆ ಎಂದು ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ.

