ಬೆಂಗಳೂರು- ನಾಲ್ಕು ವಿಧಾನ ಪರಿಷತ್ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಭಾರಿ ಮುಖಭಂಗ ಅನುಭವಿಸಿದ ಬೆನ್ನಲ್ಲೇ ಡಿಸಂಬರ್ ಒಳಗೆ ನಡೆಸಲೇ ಬೇಕಿರುವ ಜಿಬಿಎ ಚುನಾವಣೆಯನ್ನು ಮತ್ತೆ ಮುಂದೂಡುವ ಕಾರ್ಯಕ್ಕೆ ಸರ್ಕಾರ ಕೈ ಹಾಕಿದೆ.
ರಾಜ್ಯದಲ್ಲಿ ನಡೆದಿರುವ ಎಸ್ಐಆರ್ನಲ್ಲಿ ಭಾರಿ ಗೊಂದಲಗಳಿವೆ. ಹೀಗಾಗಿ ಎಲ್ಲಾ ಪ್ರಕ್ರಿಯೆ ಪೂರ್ಣಗೊಂಡ ನಂತರ ಜಿಬಿಎಗೆ ಚುನಾವಣೆ ನಡೆಸಲು ಅನುಮತಿ ನೀಡುವಂತೆ ಮತ್ತೆ ಸುಪ್ರೀಂ ಕೋರ್ಟ್ ಮೊರೆ ಹೋಗಲು ಸರ್ಕಾರ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ಉನ್ನತ ಮೂಲಗಳು ಈಸಂಜೆ ಗೆ ತಿಳಿಸಿವೆ.
ಅರ್ಜಿಯ ಮುಂದೂಡುವ ನಿರ್ಧಾರ
ಯಾವುದೇ ಸಬೂಬು ಹೇಳದೆ ಡಿಸಂಬರ್ ವೇಳೆಗೆ ಜಿಬಿಎ ವ್ಯಾಪ್ತಿಯ ಐದು ಪಾಲಿಕೆಗಳಿಗೆ ಚುನಾವಣೆ ನಡೆಸುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿತ್ತು. ಆ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ್ದ ಖ್ಯಾತ ವಕೀಲ ಕಪಿಲ್ ಸಿಬಲ್ ಅವರು ಇದೇ ಕೊನೆಯ ಬಾರಿ ಮತ್ತೆ ನಾವು ಚುನಾವಣೆ ಮುಂದೂಡುವ ಪ್ರಸ್ತಾವ ಸಲ್ಲಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.
ಆದರೂ ಮತ್ತೆ ಚುನಾವಣೆ ಮುಂದೂಡಿಕೆ ಪ್ರಸ್ತಾವನೆ ಸಲ್ಲಿಸಲು ಮುಂದಾಗಿರುವ ಸರ್ಕಾರ ಈ ಕುರಿತಂತೆ ಕಾನೂನು ತಜ್ಞರೊಂದಿಗೆ ಚರ್ಚೆ ನಡೆಸಿದ್ದು, ಸೋಮವಾರ ಇಲ್ಲವೇ ಮಂಗಳವಾರ ಸುಪ್ರೀಂ ಕೋರ್ಟ್ಗೆ ಮನವಿ ಸಲ್ಲಿಸಲು ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.
ಚುನಾವಣಾ ಆಯುಕ್ತರೊಂದಿಗೂ ಚರ್ಚೆ; ಶಥಾಯ ಗಥಾಯ ಚುನಾವಣೆ ಮುಂದೂಡಲೆ ಬೇಕು ಎಂಬ ಹಠಕ್ಕೆ ಬಿದ್ದಿರುವ ಸರ್ಕಾರದ ರಾಜ್ಯ ಚುನಾವಣಾ ಆಯುಕ್ತ ಸಂಗ್ರೇಶಿ ಅವರೊಂದಿಗೂ ಮಾತುಕತೆ ನಡೆಸಿ ಚುನಾವಣೆ ಮುಂದೂಡಿಕೆಗೆ ಅರ್ಜಿ ಸಲ್ಲಿಸುವಂತೆ ಮನವಿ ಮಾಡಿಕೊಂಡಿತ್ತು.
ಆದರೆ, ಆಯುಕ್ತರು ಯಾವುದೇ ಕಾರಣಕ್ಕೂ ನಾವು ಮತ್ತೆ ಚುನಾವಣಾ ಮುಂದೂಡಿಕೆ ಪ್ರಸ್ತಾಪವನ್ನು ನ್ಯಾಯಲಯದ ಮುಂದೆ ಸಲ್ಲಿಸಲು ಸಾಧ್ಯವಿಲ್ಲ. ನಾವು ಈಗಾಗಲೇ ಚುನಾವಣಾ ಸಿದ್ದತೆ ಮಾಡಿಕೊಂಡಿದ್ದೇವೆ. ಅವಶ್ಯಕತೆ ಇದ್ದರೆ ಸರ್ಕಾರದ ಕಡೆಯಿಂದಲೇ ಅರ್ಜಿ ಸಲ್ಲಿಸುವಂತೆ ಹೇಳಿ ಬಂದಿದ್ದಾರೆ ಎಂದು ಮೂಲಗಳು ಉಲ್ಲೇಖಿಸಿವೆ.
ಅಧಿಕಾರಿಗಳ ಹಿಂದೇಟು; ಚುನಾವಣಾ ಆಯುಕ್ತರು ಕೋರ್ಟ್ ಕದ ತಟ್ಟಲು ಹಿಂದೇಟು ಹಾಕುತ್ತಿದ್ದಂತೆ ಸರ್ಕಾರ ಕೆಲವು ಅಧಿಕಾರಿಗಳಿಗೆ ಅರ್ಜಿ ಸಲ್ಲಿಸುವಂತೆ ಸೂಚನೆ ನೀಡಿದೆ. ಆದರೆ, ಸುಪ್ರೀಂ ಕೋರ್ಟ್ ಭಯದ ಹಿನ್ನೆಲೆಯಲ್ಲಿ ಯಾವ ಅಧಿಕಾರಿಗಳು ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲು ಮುಂದೆ ಬರುತ್ತಿಲ್ಲ ಎಂದು ವರದಿಯಾಗಿದೆ.
ಆದರೂ ಪಟ್ಟು ಬಿಡದ ಸರ್ಕಾರ ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿಗಳ ಮೂಲಕವೇ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಕೈಗೆತ್ತಿಕೊಂಡಿದೆ ಎಂದು ತಿಳಿದುಬಂದಿದೆ.
ಚುನಾವಣೆ ವಿವರಗಳು
ಚುನಾವಣೆಗೆ ಏಕೆ ಹಿಂದೇಟು; ಕಳೆದ ಆರು ವರ್ಷಗಳಿಂದ ಜಿಬಿಎಗೆ ನಗರೋತ್ಥಾನ ಅನುದಾನದಡಿ ಕೇಂದ್ರ ಸರ್ಕಾರದಿಂದ ಬರಬೇಕಿದ್ದ ಸಾವಿರಾರು ಕೋಟಿ ರೂ.ಗಳ ಅನುದಾನ ಬಂದಿಲ್ಲ. ಗ್ಯಾರಂಟಿ ಯೋಜನೆಗಳಿಂದಾಗಿ ಖಜಾನೆ ಖಾಲಿ ಮಾಡಿಕೊಂಡಿರುವ ಕಾಂಗ್ರೆಸ್ ಸರ್ಕಾರ ಜಿಬಿಎಗೆ ಚುನಾವಣೆ ನಡೆಸಿ ಕೇಂದ್ರದಿಂದ ಅನುದಾನ ತರಲು ಅಣಿಯಾಗಿತ್ತು.
ಆದರೆ, ರಾಜ್ಯದಲ್ಲಿ ನಡೆದ ನಾಲ್ಕು ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೀನಾಯ ಸೋಲು ಅನುಭವಿಸಿ ಮುಖಭಂಗ ಅನುಭವಿಸಿತ್ತು.
ಇಂತಹ ಸಂದರ್ಭದಲ್ಲಿ ನಾವು ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಐದು ನಗರ ಪಾಲಿಕೆಗಳಿಗೆ ಚುನಾವಣೆ ನಡೆಸಿದರೆ ಅಲ್ಲೂ ನಮ ಪಕ್ಷ ಗೆಲ್ಲುವುದು ಅಸಾಧ್ಯ ಎನ್ನುವುದು ಅರಿವಾಗುತ್ತಿದ್ದಂತೆ ಸರ್ಕಾರ ಮತ್ತೆ ಹೇಗಾದರೂ ಮಾಡಿ ಚುನಾವಣೆ ಮುಂದೂಡಿಸುವ ಕಾರ್ಯಕ್ಕೆ ಕೈ ಹಾಕಿದೆ ಎಂದು ತಿಳಿದುಬಂದಿದೆ.
ಅಸಾಧ್ಯ: ಈಗಾಗಲೇ ಜಿಬಿಎ ಚುನಾವಣೆ ವಿಚಾರದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಕೆಂಡಾಮಂಡಲವಾಗಿರುವ ಸುಪ್ರೀಂ ಕೋರ್ಟ್ ಮತ್ತೆ ಚುನಾವಣೆ ಮುಂದೂಡಿಕೆ ಪ್ರಸ್ತಾವನೆ ಸಲ್ಲಿಸಿದರೆ ಅದಕ್ಕೆ ತಕ್ಕ ಪಾಠ ಕಲಿಸುವುದರ ಜೊತೆಗೆ ಕೂಡಲೇ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸೂಚಿಸಲಿದೆ ಎಂದು ಚುನಾವಣಾ ಆಯೋಗದ ಮೂಲಗಳು ವಿವರಣೆ ನೀಡಿವೆ.

