ಬೆಂಗಳೂರು: ಭಾರತೀಯ ಸಂಸ್ಕೃತಿಯಲ್ಲಿ ಮದುವೆ ಎನ್ನುವುದು ಕೇವಲ ಎರಡು ಜೀವಗಳ ಮಿಲನವಲ್ಲ, ಅದೊಂದು ಪವಿತ್ರ ಅನುಬಂಧ. ಮದುವೆಯ ತಯಾರಿ, ಶಾಸ್ತ್ರಗಳು ಎಷ್ಟು ಮುಖ್ಯವೋ, ಅತಿಥಿಗಳು ನೀಡುವ ಮುಯ್ಯಿ ಅಥವಾ ಉಡುಗೊರೆ ಕೂಡ ಅಷ್ಟೇ ವಿಶೇಷ. ಅದೆಷ್ಟೇ ದೊಡ್ಡ ಮೊತ್ತದ ಹಣ ನೀಡಿದರೂ, ಅದರ ಜೊತೆಗೆ ಒಂದು ರೂಪಾಯಿ ನಾಣ್ಯ ಸೇರಿಸುವುದು ನಮ್ಮಲ್ಲಿನ ಅನಾದಿ ಕಾಲದ ಪದ್ಧತಿ.
ಮದುವೆ, ನಿಶ್ಚಿತಾರ್ಥ ಅಥವಾ ಯಾವುದೇ ಶುಭ ಸಮಾರಂಭಗಳಿಗೆ ಹೋದಾಗ ನಾವು ಲಕೋಟೆಯಲ್ಲಿ ಹಣವಿಟ್ಟು ಮುಯ್ಯಿ ನೀಡುತ್ತೇವೆ. ಆಗ 100, 500 ಅಥವಾ 1000 ರೂಪಾಯಿಗಳ ಜೊತೆಗೆ ಒಂದು ರೂಪಾಯಿ ನಾಣ್ಯವನ್ನು ಇಡುವುದು ನಮ್ಮಲ್ಲಿನ ಅನಾದಿ ಕಾಲದ ಸಂಪ್ರದಾಯ. ಒಂದು ರೂಪಾಯಿ ಇಲ್ಲದೆ ಲಕೋಟೆ ನೀಡಿದರೆ ಅದು ಅಪೂರ್ಣ ಅಥವಾ ಅಶುಭ ಎಂದು ಪರಿಗಣಿಸಲಾಗುತ್ತದೆ. ಅಷ್ಟಕ್ಕೂ ಈ ಒಂದು ರೂಪಾಯಿ ಮ್ಯಾಜಿಕ್ ಏನು? ಇಲ್ಲಿದೆ ಆಸಕ್ತಿದಾಯಕ ಮಾಹಿತಿ.
1.ಶೂನ್ಯ ಅಂತ್ಯ, ಒಂದು ಆರಂಭ
ಸಂಪ್ರದಾಯದ ಪ್ರಕಾರ ಶೂನ್ಯ ಎನ್ನುವುದು ಅಂತ್ಯವನ್ನು ಸೂಚಿಸುತ್ತದೆ. ಆದರೆ ಒಂದು ಎಂಬುದು ಹೊಸ ಆರಂಭದ ಸಂಕೇತ. ಮುಯ್ಯಿ ನೀಡುವಾಗ ಒಂದು ರೂಪಾಯಿ ಹೆಚ್ಚುವರಿಯಾಗಿ ಸೇರಿಸುವುದರಿಂದ, ಆ ಕುಟುಂಬದಲ್ಲಿ ಯಾವಾಗಲೂ ಸಂತೋಷ ಮತ್ತು ಸಮೃದ್ಧಿಯ ಹೊಸ ಆರಂಭವಿರಲಿ ಎಂದು ಹಾರೈಸಿದಂತಾಗುತ್ತದೆ.
2.ಅವಿಭಾಜ್ಯ ಸಂಖ್ಯೆಯ ಗಣಿತದ ನಂಟು
ಗಣಿತಶಾಸ್ತ್ರದ ಪ್ರಕಾರ 100, 500 ಮತ್ತು 1000 ಸಂಖ್ಯೆಗಳನ್ನು ಸುಲಭವಾಗಿ ಭಾಗಿಸಬಹುದು. ಆದರೆ 101, 501 ಅಥವಾ 1001 ಸಂಖ್ಯೆಗಳು ಅವಿಭಾಜ್ಯ ಸಂಖ್ಯೆಗಳು (Prime Numbers). ಇವುಗಳನ್ನು ಭಾಗಿಸಲು ಸಾಧ್ಯವಿಲ್ಲ. ಇದರ ಅರ್ಥವೇನೆಂದರೆ, ನಾವು ನೀಡುವ ಆಶೀರ್ವಾದ ಮತ್ತು ಹಾರೈಕೆಗಳು ಎಂದಿಗೂ ಬೇರ್ಪಡಿಸಲಾಗದಂತೆ (Indivisible) ಗಟ್ಟಿಯಾಗಿರಲಿ ಎಂಬುದಾಗಿದೆ.
3.ಬಾಂಧವ್ಯದ ನಿರಂತರತೆ
ಈ ಒಂದು ರೂಪಾಯಿ ಮೂಲ ಮೊತ್ತವನ್ನು ಮೀರಿದ ನಿರಂತರತೆಯನ್ನು ಪ್ರತಿನಿಧಿಸುತ್ತದೆ. ಇದು ನೀಡುವವರು ಮತ್ತು ಸ್ವೀಕರಿಸುವವರ ನಡುವಿನ ಪ್ರೀತಿಯ ಬಂಧವು ಮುಂದುವರಿಯುತ್ತದೆ ಎಂಬುದನ್ನು ಸೂಚಿಸುತ್ತದೆ. ನಮ್ಮ ಸಂಬಂಧ ಕೇವಲ ಆ ಹಣಕ್ಕೆ ಸೀಮಿತವಲ್ಲ, ಅದು ಬೆಳೆಯುತ್ತಾ ಹೋಗುತ್ತದೆ ಎಂಬ ಭಾವನೆ ಇದರ ಹಿಂದಿದೆ.
4.ನಾಣ್ಯವೇ ಏಕೆ ಇರಬೇಕು? (ಬೀಜದ ಸಂಕೇತ)
ಮುಯ್ಯಿಯಲ್ಲಿ ಒಂದು ರೂಪಾಯಿ ನೋಟಿಗಿಂತ ನಾಣ್ಯಕ್ಕೆ ಹೆಚ್ಚಿನ ಮಹತ್ವವಿದೆ.ನಾಣ್ಯವು ಲೋಹದಿಂದ ಮಾಡಲ್ಪಟ್ಟಿದ್ದು, ಇದು ಭೂಮಿಯಿಂದ ಬರುತ್ತದೆ. ಇದನ್ನು ಲಕ್ಷ್ಮಿ ದೇವಿಯ ಅಂಶ ಎಂದು ಪರಿಗಣಿಸಲಾಗುತ್ತದೆ.ದೊಡ್ಡ ಮೊತ್ತದ ಹಣದ ಜೊತೆಗಿರುವ ಈ ಒಂದು ರೂಪಾಯಿ ನಾಣ್ಯವು ಆಸ್ತಿಯ ಬೆಳವಣಿಗೆಗೆ ಒಂದು ಬೀಜದಂತೆ ಕೆಲಸ ಮಾಡುತ್ತದೆ ಎಂಬ ನಂಬಿಕೆಯಿದೆ.

