ಬೆಂಗಳೂರು : ಹವಾಮಾನ ಇಲಾಖೆಯ ವರದಿಯ ಪ್ರಕಾರ ಇಂದು ಮತ್ತು ನಾಳೆ ( ಮಾ.20, & 21 ) ರಾಜ್ಯದ ಹಲವು ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಕೋಲಾರ, ಮೈಸೂರು, ಹಾಸನ, ಕೊಡಗು, ರಾಮನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಮಳೆಯ ನಿರೀಕ್ಷೆಯಿದೆ.ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಸಾಧಾರಣ ಮಳೆಯಾಗಬಹುದು. ಬೆಳಗಾವಿ, ಧಾರವಾಡ, ಹಾವೇರಿ ಮತ್ತು ಗದಗದ ಕೆಲವು ಭಾಗಗಳಲ್ಲಿ ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತ್ರ ಒಣ ಹವೆ ಮುಂದುವರಿಯಲಿದೆ.
ಗಾಳಿಯ ವೇಗ: ಮಳೆಯ ಸಂದರ್ಭದಲ್ಲಿ ಗಂಟೆಗೆ 30 ರಿಂದ 40 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆಯಿದೆ.
ತಾಪಮಾನ: ಮುಂದಿನ ಮೂರು ದಿನಗಳ ಕಾಲ ರಾಜ್ಯದಾದ್ಯಂತ ಗರಿಷ್ಠ ತಾಪಮಾನದಲ್ಲಿ ಇಳಿಕೆಯಾಗಲಿದ್ದು, ಬಿಸಿಲಿನ ಬೇಗೆಯಿಂದ ಜನರಿಗೆ ಸ್ವಲ್ಪ ಮಟ್ಟಿನ ಮುಕ್ತಿ ಸಿಗಲಿದೆ. ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿರಲಿದ್ದು, ಸಂಜೆ ಅಥವಾ ರಾತ್ರಿ ವೇಳೆ ಹಗುರ ಮಳೆಯಾಗುವ ಸಂಭವವಿದೆ. ಬಂಗಾಳ ಕೊಲ್ಲಿ ಮತ್ತು ಅರಬ್ಬಿ ಸಮುದ್ರದಿಂದ ಬೀಸುತ್ತಿರುವ ತೇವಾಂಶಭರಿತ ಗಾಳಿ ಹಾಗೂ ಸೈಕ್ಲೋನಿಕ್ ಚಲನೆಗಳು ಈ ಹಠಾತ್ ಹವಾಮಾನ ಬದಲಾವಣೆಗೆ ಕಾರಣವಾಗಿವೆ.

