ಬೆಂಗಳೂರು: ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 249 ಅತಿಥಿ ಉಪನ್ಯಾಸಕರ ಡಾಕ್ಟರೇಟ್ ಪ್ರಮಾಣ ಪತ್ರ ನಕಲಿ ಎನ್ನುವುದು ಸಾಬೀತಾಗಿದ್ದು, ವಾರದೊಳಗೆ ಕ್ರಿಮಿನಲ್ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ.
249 ಅತಿಥಿ ಉಪನ್ಯಾಸಕರು ನಕಲಿ ಪಿಎಚ್‌ಡಿ ಪ್ರಮಾಣ ಪತ್ರ ನೀಡಿರುವ ಆಘಾತಕಾರಿ ಸಂಗತಿ ಕಾಲೇಜು ಮಟ್ಟದ ಸಮಿತಿ ಪರಿಶೀಲನೆಯ ವೇಳೆ ಬೆಳಕಿಗೆ ಬಂದಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಕಾಲೇಜು ಶಿಕ್ಷಣ ಇಲಾಖೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಜೊತೆಗೆ ಮುಂದಿನ ಶೈಕ್ಷಣಿಕ ವರ್ಷದಿಂದ ಎಲ್ಲರನ್ನು ನೇಮಕಾತಿ ಪ್ರಕ್ರಿಯೆಯಿಂದ ಹೊರಗಿಡಲು ಆದೇಶ ಹೊರಡಿಸಿದೆ.
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ಹುದ್ದೆ ಪಡೆಯಲು ಯುಜಿಸಿ ನಿಯಮಗಳ ಪ್ರಕಾರ ನೆಟ್, ಕೆ-ಸೆಟ್, ಪಿಎಚ್ ಡಿಗಳಲ್ಲಿ ಒಂದನ್ನು ಪೂರ್ಣಗೊಳಿಸಿರುವುದು ಕಡ್ಡಾಯವಾಗಿದೆ. ಈ ಹಿನ್ನೆಲೆಯಲ್ಲಿ ಅತಿಥಿ ಉಪನ್ಯಾಸಕರ ಹುದ್ದೆಗೆ ಬಹುತೇಕ ಅಭ್ಯರ್ಥಿಗಳು ನಕಲಿ ಪಿಎಚ್ ಡಿಗಳನ್ನು ಸಲ್ಲಿಸಿ ಹುದ್ದೆ ಗಿಟ್ಟಿಸಿಕೊಂಡಿದ್ದು, ಈ ಬಗ್ಗೆ ಇಲಾಖೆಗೆ ದೂರು ಸಲ್ಲಿಕೆಯಾಗಿತ್ತು.
ಕಾಲೇಜು ಶಿಕ್ಷಣ ಇಲಾಖೆ ಪಿಎಚ್‌ಡಿ, ನೆಟ್, ಕೆ-ಸೆಟ್ ಪ್ರಮಾಣ ಪತ್ರಗಳ ನೈಜತೆಯನ್ನು ಪರಿಶೀಲಿಸಲು ನಿರ್ಧರಿಸಿತ್ತು. ಅತಿಥಿ ಉಪನ್ಯಾಸಕರ ಹುದ್ದೆಗೆ ಅಭ್ಯರ್ಥಿಗಳು ಸಲ್ಲಿಸಿದ ಪ್ರಮಾಣ ಪತ್ರಗಳ ನೈಜತೆ ವರದಿಯನ್ನು ಕಡ್ಡಾಯವಾಗಿ ಸಂಬಂಧಿಸಿದ ವಿವಿ ಮತ್ತು ಸಂಸ್ಥೆಗಳಿಂದ ಪಡೆದುಕೊಳ್ಳುವಂತೆ ಪದವಿ ಕಾಲೇಜುಗಳ ಪ್ರಾಚಾರ್ಯರಿಗೆ ಸೂಚಿಸಲಾಗಿತ್ತು.
ಪ್ರಾಚಾರ್ಯರು ಪರಿಶೀಲಿಸಿದಾಗ 249 ಅತಿಥಿ ಉಪನ್ಯಾಸಕರು ನಕಲಿ ಪಿಎಚ್‌ಡಿ ಪ್ರಮಾಣ ಪತ್ರ ಸಲ್ಲಿಸಿರುವುದು ಸಾಬೀತಾಗಿದೆ. ಕಲ್ಯಾಣ ಕರ್ನಾಟಕದಲ್ಲಿ 154, ಬೆಂಗಳೂರು 24, ಮೈಸೂರು 22, ಶಿವಮೊಗ್ಗ 17, ಧಾರವಾಡ 30 ಸೇರಿದಂತೆ ಒಟ್ಟು 249 ಅತಿಥಿ ಉಪನ್ಯಾಸಕರು ನಕಲಿ ಪಿಎಚ್‌ಡಿ ಪ್ರಮಾಣ ಪತ್ರ ಸಲ್ಲಿಸಿರುವುದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ 249 ಅತಿಥಿ ಉಪನ್ಯಾಸಕರ ವಿರುದ್ಧ ಎಫ್ಐಆರ್ ದಾಖಲಿಸಲು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರು ಸೂಚಿಸಿದ್ದಾರೆ.

