ಮಧುಮೇಹ (Diabetes) ಇರುವವರಿಗೆ ಕಳೆದ 2-3 ತಿಂಗಳ ರಕ್ತದ ಸರಾಸರಿ ಸಕ್ಕರೆ ಮಟ್ಟವನ್ನು ಅಳೆಯುವ ಪರೀಕ್ಷೆಯೇ ‘HbA1c’. ಸಾಮಾನ್ಯವಾಗಿ ಈ ಮಟ್ಟ 5.7% ಗಿಂತ ಕೆಳಗಿದ್ದರೆ ಸಹಜ, 6.5% ದಾಟಿದರೆ ಮಧುಮೇಹ ಎನ್ನಲಾಗುತ್ತದೆ. ಆದರೆ, ಈ ಮಟ್ಟ ಬರೋಬ್ಬರಿ 10.6% ಗೆ ಏರಿದರೆ ಪರಿಸ್ಥಿತಿ ತೀವ್ರ ಅಪಾಯದ ಹಂತ ತಲುಪಿದೆ ಎಂದೇ ಅರ್ಥ.
ಇತ್ತೀಚೆಗೆ ಮಧುಮೇಹಿಯೊಬ್ಬರು, “ನನ್ನ HbA1c ಮಟ್ಟ 10.6% ಇದೆ. ಮಾತ್ರೆಗಳ ಜೊತೆಗೆ ಇದನ್ನು ಕಡಿಮೆ ಮಾಡಲು ಯಾವುದಾದರೂ ನೈಸರ್ಗಿಕ ಮಾರ್ಗಗಳಿವೆಯೇ?” ಎಂದು ಆನ್‌ಲೈನ್‌ನಲ್ಲಿ ಅಳಲು ತೋಡಿಕೊಂಡಿದ್ದರು. ಇಂತಹ ಗಂಭೀರ ಪರಿಸ್ಥಿತಿಯಲ್ಲಿ ಕೇವಲ ಮಾತ್ರೆಗಳ ಮೇಲೆ ಅವಲಂಬಿತರಾಗದೆ, ಜೀವನಶೈಲಿಯಲ್ಲಿ ಯಾವ ಬದಲಾವಣೆಗಳನ್ನು ಮಾಡಿಕೊಳ್ಳಬೇಕು ಎಂಬುದರ ಕುರಿತು ಪ್ರಮುಖ ಮಧುಮೇಹ ಮತ್ತು ಬೊಜ್ಜು ತಜ್ಞ ಡಾ. ರಾಜೀವ್ ಕೋವಿಲ್ ಅವರು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.
HbA1c 10.6% ಎಂದರೆ ಅದರ ಗಂಭೀರತೆ ಏನು ?
ಡಾ. ರಾಜೀವ್ ಕೋವಿಲ್ ಅವರ ಪ್ರಕಾರ, HbA1c 10.6% ಇರುವುದು ರಕ್ತದಲ್ಲಿ ಸಕ್ಕರೆ ಪ್ರಮಾಣ ತೀವ್ರವಾಗಿ ನಿಯಂತ್ರಣ ತಪ್ಪಿರುವುದನ್ನು ಸೂಚಿಸುತ್ತದೆ. ಇದರರ್ಥ ಕಳೆದ ಮೂರು ತಿಂಗಳಿನಿಂದ ವ್ಯಕ್ತಿಯ ಸರಾಸರಿ ರಕ್ತದ ಗ್ಲೂಕೋಸ್ ಮಟ್ಟ ಸುಮಾರು 258 mg/dL ಆಸುಪಾಸಿನಲ್ಲಿದೆ.
ಈ ಮಟ್ಟದಲ್ಲಿ ಕೇವಲ ಮುಂದಿನ ಪರೀಕ್ಷೆಯ ದಿನಾಂಕಕ್ಕಾಗಿ ಕಾಯುತ್ತಾ ಕೂರುವುದು ಅತ್ಯಂತ ಅಪಾಯಕಾರಿ. ತಕ್ಷಣವೇ ವೈದ್ಯರನ್ನು ಭೇಟಿ ಮಾಡಿ:
-
ಪ್ರಸ್ತುತ ತೆಗೆದುಕೊಳ್ಳುತ್ತಿರುವ ಮಾತ್ರೆಗಳ ಡೋಸ್ ಸರಿಯಾಗಿದೆಯೇ ಎಂದು ಮರುಪರಿಶೀಲಿಸಬೇಕು.
-
ಊಟಕ್ಕೆ ಮುನ್ನ (Fasting) ಮತ್ತು ಊಟದ ನಂತರದ (PP) ಸಕ್ಕರೆ ಮಟ್ಟವನ್ನು ನಿಖರವಾಗಿ ಗಮನಿಸಬೇಕು.
-
ದೈಹಿಕ ತೂಕ, ನಿದ್ರೆಯ ಮಾದರಿ ಹಾಗೂ ಆಹಾರ ಪದ್ಧತಿಯನ್ನು ಸಮಗ್ರವಾಗಿ ಪರಿಶೀಲಿಸಬೇಕು.
ಮಾತ್ರೆಗಳ ಜೊತೆಗೆ ಜೀವನಶೈಲಿಯಲ್ಲಿ ಏನು ಬದಲಾವಣೆ ಮಾಡಬೇಕು ?
“ಔಷಧ ಮತ್ತು ಜೀವನಶೈಲಿ ಎರಡೂ ಒಂದಕ್ಕೊಂದು ಪೂರಕವಾಗಿರಬೇಕೇ ಹೊರತು, ಒಂದಕ್ಕೆ ಮತ್ತೊಂದು ಪರ್ಯಾಯವಲ್ಲ” ಎಂದು ಡಾ. ಕೋವಿಲ್ ಎಚ್ಚರಿಸುತ್ತಾರೆ.
‘ಕಾರ್ಬ್-ಲಾಸ್ಟ್’ (Carb-Last) ಊಟದ ಸೂತ್ರ: ಊಟ ಮಾಡುವಾಗ ಮೊದಲು ತರಕಾರಿಗಳು, ನಾರಿನಂಶ (Fibre) ಹಾಗೂ ಪ್ರೋಟೀನ್ (Protein) ಅಂಶವಿರುವ ಪದಾರ್ಥಗಳನ್ನು ತಿನ್ನಬೇಕು. ಕೊನೆಯಲ್ಲಿ ಮಾತ್ರ ಅನ್ನ ಅಥವಾ ರೊಟ್ಟಿಯಂತಹ ಕಾರ್ಬೋಹೈಡ್ರೇಟ್‌ಗಳನ್ನು ಸೇವಿಸಬೇಕು. ಈ ಕ್ರಮವು ಊಟದ ನಂತರ ರಕ್ತದಲ್ಲಿ ಸಕ್ಕರೆ ಪ್ರಮಾಣ ಏಕಾಏಕಿ ಹೆಚ್ಚಾಗುವುದನ್ನು ಗಣನೀಯವಾಗಿ ತಡೆಯುತ್ತದೆ.
ಸಂಜೆಯ ಊಟ ಹಗುರವಾಗಿರಲಿ: ರಾತ್ರಿಯ ಊಟವನ್ನು ಆದಷ್ಟು ಬೇಗ ಮುಗಿಸಬೇಕು. ತಡರಾತ್ರಿ ಆಹಾರ ಸೇವಿಸುವುದು ಹಾಗೂ ಸಂಸ್ಕರಿಸಿದ ಜಂಕ್ ಫುಡ್, ಸಿಹಿ ಪಾನೀಯಗಳನ್ನು ಸಂಪೂರ್ಣವಾಗಿ ತ್ಯಜಿಸಬೇಕು.
ಊಟದ ನಂತರ 15 ನಿಮಿಷ ವಾಕಿಂಗ್: ಪ್ರತಿಯೊಂದು ಊಟದ ನಂತರ ಕೇವಲ 10 ರಿಂದ 15 ನಿಮಿಷಗಳ ಕಾಲ ಲಘುವಾಗಿ ನಡೆಯುವುದರಿಂದ (Post-meal walk) ರಕ್ತದಲ್ಲಿ ಗ್ಲೂಕೋಸ್ ಮಟ್ಟ ತಕ್ಷಣವೇ ನಿಯಂತ್ರಣಕ್ಕೆ ಬರುತ್ತದೆ.
ವ್ಯಾಯಾಮದ ಸಂಯೋಜನೆ: ನಿತ್ಯ ನಿಯಮಿತ ನಡಿಗೆಯ ಜೊತೆಗೆ ಸ್ನಾಯುಗಳನ್ನು ಬಲಪಡಿಸುವ ಸರಳ ವ್ಯಾಯಾಮಗಳನ್ನು (Resistance training) ರೂಢಿಸಿಕೊಳ್ಳುವುದು ದೇಹದ ಇನ್ಸುಲಿನ್ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ.
ನೈಸರ್ಗಿಕ ಮನೆಮದ್ದುಗಳು ಕೆಲಸ ಮಾಡುತ್ತವೆಯೇ ?
ಅನೇಕರು ಮಧುಮೇಹ ನಿಯಂತ್ರಣಕ್ಕೆ ಕಷಾಯಗಳು, ಗಿಡಮೂಲಿಕೆಗಳು ಅಥವಾ ಜಾಹೀರಾತುಗಳಲ್ಲಿ ಬರುವ “ನೈಸರ್ಗಿಕ ಡಯಾಬಿಟಿಸ್ ಪರಿಹಾರ”ಗಳನ್ನು ನಂಬಿ ಮೋಸಹೋಗುತ್ತಾರೆ.
ಇದಕ್ಕೆ ಸ್ಪಷ್ಟನೆ ನೀಡುವ ಡಾ. ಕೋವಿಲ್, “ಯಾವುದೇ ಎಲೆ, ಜ್ಯೂಸ್ ಅಥವಾ ಗಿಡಮೂಲಿಕೆಗಳ ಸಪ್ಲಿಮೆಂಟ್ ವೈದ್ಯಕೀಯ ಚಿಕಿತ್ಸೆಗೆ ಪರ್ಯಾಯವಾಗಲು ಸಾಧ್ಯವೇ ಇಲ್ಲ. ನೈಸರ್ಗಿಕ ಪರಿಹಾರ ಎಂದರೆ ವೈಜ್ಞಾನಿಕ ಆಧಾರಿತ ಜೀವನಶೈಲಿಯ ಬದಲಾವಣೆಯಷ್ಟೇ. ಹೊಟ್ಟೆಯ ಸುತ್ತಲಿನ ಕೊಬ್ಬು ಕರಗಿಸುವುದು, ಉತ್ತಮ ನಿದ್ರೆ, ಒತ್ತಡ ನಿರ್ವಹಣೆ ಹಾಗೂ ಸಂಸ್ಕರಿಸದ ನೈಸರ್ಗಿಕ ಆಹಾರ ಸೇವನೆಯೇ ನಿಜವಾದ ನೈಸರ್ಗಿಕ ಚಿಕಿತ್ಸೆ” ಎಂದು ಸ್ಪಷ್ಟಪಡಿಸಿದ್ದಾರೆ.
ಕೇವಲ ಸಕ್ಕರೆ ಪರೀಕ್ಷೆಯಷ್ಟೇ ಸಾಲದು
ಮಧುಮೇಹವು ಕೇವಲ ರಕ್ತದ ಸಕ್ಕರೆ ಕಾಯಿಲೆಯಲ್ಲ, ಇದು ಇಡೀ ದೇಹದ ರಕ್ತನಾಳಗಳು ಮತ್ತು ಪ್ರಮುಖ ಅಂಗಗಳ ಮೇಲೆ ಪರಿಣಾಮ ಬೀರುವ ಚಯಾಪಚಯ ಅಸ್ವಸ್ಥತೆ (Metabolic Disorder).
ಆದ್ದರಿಂದ HbA1c ಮಟ್ಟ ಇಷ್ಟು ಹೆಚ್ಚಿದ್ದಾಗ ತಕ್ಷಣವೇ ಈ ಕೆಳಗಿನ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು ಕಡ್ಡಾಯ:
-
ಕಿಡ್ನಿ ಆರೋಗ್ಯ: ಮೂತ್ರಪಿಂಡದ ಕ್ರಿಯೇಟಿನೈನ್ ಮತ್ತು ಯೂರಿನ್ ಅಲ್ಬುಮಿನ್ ಪರೀಕ್ಷೆ.
-
ಕಣ್ಣುಗಳ ತಪಾಸಣೆ: ರೆಟಿನಾದ ಆರೋಗ್ಯದ ತಪಾಸಣೆ (Diabetic Retinopathy).
-
ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್: ಹೃದಯಾಘಾತದ ಅಪಾಯ ತಡೆಯಲು ಲಿಪಿಡ್ ಪ್ರೊಫೈಲ್ ಪರೀಕ್ಷೆ.
-
ಪಾದಗಳ ತಪಾಸಣೆ: ನರಗಳ ದೌರ್ಬಲ್ಯ (Neuropathy) ಮತ್ತು ರಕ್ತ ಸಂಚಾರದ ಪರೀಕ್ಷೆ.
ಅಂತಿಮ ಕಿವಿಮಾತು: HbA1c 10.6% ಇರುವಾಗ ಕೇವಲ ಮನೆಮದ್ದುಗಳ ಮೇಲೆ ಅವಲಂಬಿತರಾಗದೆ, ತಜ್ಞ ವೈದ್ಯರ ಮಾರ್ಗದರ್ಶನದಲ್ಲಿ ಔಷಧದ ಪ್ರಮಾಣವನ್ನು ಸರಿಹೊಂದಿಸಿಕೊಂಡು, ಶಿಸ್ತುಬದ್ಧ ಆಹಾರ ಹಾಗೂ ನಡಿಗೆಯನ್ನು ರೂಢಿಸಿಕೊಳ್ಳುವುದೇ ಕಿಡ್ನಿ, ಕಣ್ಣು ಹಾಗೂ ಹೃದಯವನ್ನು ದೀರ್ಘಕಾಲದ ಹಾನಿಯಿಂದ ರಕ್ಷಿಸುವ ಏಕೈಕ ಮಾರ್ಗ.

