HomeInternationalಇಂಡೋನೇಷ್ಯಾದಲ್ಲಿ ಅಗ್ನಿಪರ್ವತ ಸ್ಪೋಟ .. 8 ವಿಮಾನ ನಿಲ್ದಾಣಗಳು ಬಂದ್.. 1.70 ಲಕ್ಷ ಪ್ರಯಾಣಿಕರು ಅತಂತ್ರ

ಇಂಡೋನೇಷ್ಯಾದಲ್ಲಿ ಅಗ್ನಿಪರ್ವತ ಸ್ಪೋಟ .. 8 ವಿಮಾನ ನಿಲ್ದಾಣಗಳು ಬಂದ್.. 1.70 ಲಕ್ಷ ಪ್ರಯಾಣಿಕರು ಅತಂತ್ರ

ಇಂಡೋನೇಷ್ಯಾದ ‘ಅನಕ್ ಕ್ರಕಟೋವಾ’ ಅಗ್ನಿಪರ್ವತ ಮತ್ತೆ ಸ್ಫೋಟಗೊಂಡಿದೆ. ಭಾನುವಾರ ಸಂಭವಿಸಿದ ಭಾರೀ ಜ್ವಾಲಾಮುಖಿ ಸ್ಫೋಟದಿಂದಾಗಿ ದಟ್ಟವಾದ ಬೂದಿ ಆಕಾಶಕ್ಕೆ ಚಿಮ್ಮಿದ್ದು, ವಿಮಾನ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿದೆ.

ದೇಶದ ಪ್ರಮುಖ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ಒಟ್ಟು 8 ವಿಮಾನ ನಿಲ್ದಾಣಗಳಲ್ಲಿ 1,500ಕ್ಕೂ ಹೆಚ್ಚು ವಿಮಾನಗಳ ಸಂಚಾರವನ್ನು ಅಧಿಕಾರಿಗಳು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ. ಇದರಿಂದಾಗಿ ಸುಮಾರು 1.70 ಲಕ್ಷ ಪ್ರಯಾಣಿಕರು ವಿಮಾನ ನಿಲ್ದಾಣಗಳಲ್ಲೇ ಸಿಲುಕಿಕೊಂಡಿದ್ದಾರೆ. ಸ್ಫೋಟದ ತೀವ್ರತೆಯನ್ನು ಗಮನದಲ್ಲಿಟ್ಟುಕೊಂಡು ಜಕಾರ್ತಾದ ಶಾಲೆಗಳಲ್ಲಿ ಸೋಮವಾರದಿಂದ ಆನ್‌ಲೈನ್ ತರಗತಿಗಳನ್ನು ನಡೆಸುವಂತೆ ಸ್ಥಳೀಯ ಆಡಳಿತ ಸೂಚಿಸಿದೆ.

ಜಾವಾ ಮತ್ತು ಸುಮಾತ್ರಾ ದ್ವೀಪಗಳ ನಡುವಿನ ಸುಂಡಾ ಜಲಸಂಧಿಯಲ್ಲಿ ಅನಕ್ ಕ್ರಕಟೋವಾ ಅಗ್ನಿಪರ್ವತವಿದೆ. ಶನಿವಾರ ಮೊದಲ ಬಾರಿಗೆ ಸ್ಫೋಟಗೊಂಡಿದ್ದ ಈ ಜ್ವಾಲಾಮುಖಿ, ಭಾನುವಾರ ಮತ್ತೆ ಎರಡು ಬಾರಿ ಸ್ಫೋಟಗೊಂಡಿದೆ. ಭಾರೀ ಸದ್ದುಗಳೊಂದಿಗೆ ಲಾವಾ ಚಿಮ್ಮಿದ್ದು, ನೂರಾರು ಕಿಲೋಮೀಟರ್‌ಗಳಷ್ಟು ದೂರ ಬೂದಿ ಮೋಡಗಳು ಹರಡಿಕೊಂಡಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಚಟುವಟಿಕೆ ಸೋಮವಾರ ಬೆಳಗ್ಗೆ 8.59 ಗಂಟೆಯವರೆಗೆ ಮುಂದುವರಿಯುವ ಸಾಧ್ಯತೆ ಇರುವುದರಿಂದ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ವಿಮಾನ ನಿಲ್ದಾಣಗಳ ಬಂದ್ ಅವಧಿಯನ್ನು ವಿಸ್ತರಿಸಲಾಗಿದೆ ಎಂದು ಇಂಡೋನೇಷ್ಯಾ ವಿಮಾನ ನಿಲ್ದಾಣ ಪ್ರಾಧಿಕಾರ ತಿಳಿಸಿದೆ.

ದೇಶದ ಪ್ರಮುಖ ವಿಮಾನ ನಿಲ್ದಾಣವಾದ ಜಕಾರ್ತಾದ ಸೂಕರ್ಣೋ-ಹಟ್ಟಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ಬಾಂಡುಂಗ್ ಮತ್ತು ಬಾಂಡರ್ ಲಾಂಪುಂಗ್ ಪ್ರದೇಶಗಳಲ್ಲಿರುವ ಮತ್ತೊಂದು ಏಳು ವಿಮಾನ ನಿಲ್ದಾಣಗಳ ಮೇಲೂ ಪರಿಣಾಮ ಬೀರಿದೆ.

ವಿಮಾನಗಳ ರದ್ದತಿಯಿಂದ ಸಾವಿರಾರು ಪ್ರಯಾಣಿಕರು ಪರ್ಯಾಯ ವ್ಯವಸ್ಥೆಗಾಗಿ ಪರದಾಡುವಂತಾಗಿದೆ. ನೈಸರ್ಗಿಕ ವಿಕೋಪದ ಹಿನ್ನೆಲೆಯಲ್ಲಿ ವಿಮಾನ ಸಂಚಾರ ರದ್ದಾಗಿರುವುದು ಅರ್ಥವಾಗಿದ್ದರೂ, ಪ್ರಯಾಣ ಮುಂದೂಡಲ್ಪಟ್ಟಿರುವುದು ತೀವ್ರ ನಿರಾಸೆ ಮೂಡಿಸಿದೆ ಎಂದು ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ, ಬಾಂಡರ್ ಲಾಂಪುಂಗ್ ನಗರದಲ್ಲಿ ರಸ್ತೆಗಳ ಮೇಲೆ ನಿಲ್ಲಿಸಿದ್ದ ಕಾರುಗಳ ಮೇಲೆ ಅಗ್ನಿಪರ್ವತದ ಬೂದಿಯ ಪದರ ಆವರಿಸಿದೆ. ವಿಮಾನದ ಎಂಜಿನ್‌ಗಳಿಗೆ ಜ್ವಾಲಾಮುಖಿಯ ಬೂದಿ ಅತ್ಯಂತ ಅಪಾಯಕಾರಿ. ಅಲ್ಲದೆ, ಬೂದಿಯಿಂದಾಗಿ ಗೋಚರತೆ ಕಡಿಮೆಯಾಗಿರುವುದರಿಂದ ವಿಮಾನ ಸಂಚಾರ ಸ್ಥಗಿತಗೊಳಿಸುವ ಕಠಿಣ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸುಂಡಾ ಜಲಸಂಧಿಯಲ್ಲಿ ಸಂಚರಿಸುವ ಹಡಗುಗಳು ಹಾಗೂ ನೌಕೆಗಳು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ. ಅಗ್ನಿಪರ್ವತದ ಸುತ್ತ 3 ಕಿಲೋಮೀಟರ್ ವ್ಯಾಪ್ತಿಯನ್ನು ನಿಷೇಧಿತ ವಲಯ ಎಂದು ಘೋಷಿಸಿ ಎಚ್ಚರಿಕೆ ನೀಡಲಾಗಿದೆ.

ಆದರೆ, ಈ ಬಾರಿ ಸಂಭವಿಸಿರುವ ಸ್ಫೋಟದಿಂದ ಸುನಾಮಿ ಉಂಟಾಗುವ ಯಾವುದೇ ಅಪಾಯವಿಲ್ಲ ಎಂದು ಭೂವಿಜ್ಞಾನ ಸಂಸ್ಥೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. 2018ರ ಡಿಸೆಂಬರ್‌ನಲ್ಲಿ ಇದೇ ಅಗ್ನಿಪರ್ವತದ ಒಂದು ಭಾಗ ಸಮುದ್ರಕ್ಕೆ ಕುಸಿದ ಪರಿಣಾಮ ಭಾರೀ ಸುನಾಮಿ ಸಂಭವಿಸಿ 429 ಮಂದಿ ಮೃತಪಟ್ಟಿದ್ದರು. ಆದರೆ, ಸದ್ಯ ಅಂತಹ ಯಾವುದೇ ಅಪಾಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಂಡೋನೇಷ್ಯಾ ಪೆಸಿಫಿಕ್‌ನ ‘ರಿಂಗ್ ಆಫ್ ಫೈರ್’ ಪ್ರದೇಶದಲ್ಲಿರುವುದರಿಂದ ಇಲ್ಲಿ ಭೂಕಂಪಗಳು ಮತ್ತು ಅಗ್ನಿಪರ್ವತ ಸ್ಫೋಟಗಳು ಸಾಮಾನ್ಯವಾಗಿವೆ. ಹೀಗಾಗಿ ಪರಿಸ್ಥಿತಿಯನ್ನು ಅಧಿಕಾರಿಗಳು ನಿರಂತರವಾಗಿ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular