ರಾಯಚೂರು: ವಂಚಕರು, ಕಳ್ಳ-ಖದೀಮರಿಗೆ ದೇವರ ಬಗ್ಗೆಯೂ ಭಯವಿಲ್ಲ. ದೇವರು, ಪ್ರಸಿದ್ಧ ದೇವಸ್ಥಾನ, ಮಠ-ಮಂದಿರಗಳ ಹೆಸರಲ್ಲಿಯೂ ಆನ್ ಲೈನ್ ಮೂಲಕ ವಂಚಿಸುತ್ತಿರುವ ಘಟನೆ ಬೆಳಕಿಗೆ ಬರುತ್ತಿದೆ. ಇದೀಗ ಕಲಿಯುಗದ ಕಾಮಧೇನು ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಹೆಸರಿನಲ್ಲಿ ಆನ್‌ಲೈನ್ ವಂಚನೆ ನಡೆಯುತ್ತಿರುವ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಭಕ್ತರು ಎಚ್ಚರಿಕೆಯಿಂದ ಇರಬೇಕೆಂದು ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಎಚ್ಚರಿಕೆ ಸಂದೇಶ ನೀಡಿದ್ದಾರೆ.
ಇತ್ತೀಚೆಗಷ್ಟೇ ಮಂತ್ರಾಲಯದಲ್ಲಿ ಗುರು ರಾಯರ 355ನೇ ಆರಾಧಾನ ಮಹೋತ್ಸವ ವಿಜೃಂಭಣೆಯಿಂದ ಜರುಗಿತು. ಇದರ ಬೆನ್ನಲ್ಲೇ ಕೆಲ ವಂಚಕರು ಮಂತ್ರಾಲಯದ ಮಠದ ಹೆಸರಿನಲ್ಲಿ ಆನ್ ಲೈನ್ ಮೂಲಕ ವಂಚಿಸುತ್ತಿರುವ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಭಕ್ತರು ಎಚ್ಚರಿಕೆ ವಹಿಸುವಂತೆ ಶ್ರೀಗಳು ಸೂಚಿಸಿದ್ದಾರೆ.
ಆರಾಧನಾ ಮಹೋತ್ಸವ, ಗುರು ವೈಭವೋತ್ಸವ ಸೇರಿದಂತೆ ವಿಶೇಷ ದಿನಗಳಲ್ಲಿ ಮಾತ್ರವಲ್ಲದೆ ಸಾಮಾನ್ಯ ದಿನಗಳಲ್ಲೂ ರಾಯರ ಭಕ್ತರನ್ನು ಗುರಿಯಾಗಿಸಿಕೊಂಡು ಸೈಬರ್ ವಂಚನೆ ನಡೆಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ರೂಂ ಬುಕ್ಕಿಂಗ್, ಆನ್‌ಲೈನ್‌ನಲ್ಲಿ ಪರಿಮಳ ಪ್ರಸಾದ ಒದಗಿಸುವುದು ಹಾಗೂ ದೇಣಿಗೆ ಸಂಗ್ರಹದ ಹೆಸರಿನಲ್ಲಿ ವಂಚನೆ ನಡೆಸುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಈ ಬಗ್ಗೆ ಭಕ್ತರು ಜಾಗೃತೆ ವಹಿಸುವಂತೆ ತಿಳಿಸಲಾಗಿದೆ.
ಮಂತ್ರಾಲಯ ಮಠದ ಹೆಸರಿನಲ್ಲಿ ಕಾರ್ಯನಿರ್ವಹಿಸುವ ಖಾಸಗಿ ವೆಬ್‌ಸೈಟ್‌ಗಳು, ವಾಟ್ಸ್‌ಆಪ್ ಖಾತೆಗಳು ಹಾಗೂ ಖಾಸಗಿ ವ್ಯಕ್ತಿಗಳ ಬಗ್ಗೆ ಭಕ್ತರು ಎಚ್ಚರಿಕೆ ವಹಿಸಬೇಕು ಎಂದು ಶ್ರೀ ಸುಬುಧೇಂದ್ರ ತೀರ್ಥರು ಸೂಚಿಸಿದ್ದಾರೆ. ಮಠದ ಹೆಸರಿನಲ್ಲಿ ಹಣ ಸಂಗ್ರಹಿಸಲು ಯಾರಿಗೂ ಅನುಮತಿ ನೀಡಿಲ್ಲ ಎಂದು ಶ್ರೀಗಳು ಸ್ಪಷ್ಟಪಡಿಸಿದ್ದಾರೆ. ದೇಣಿಗೆ ಕೇಳುವಂತಹ ಯಾವುದೇ ವ್ಯವಸ್ಥೆ ಶ್ರೀಮಠದಿಂದ ಇಲ್ಲ ಎಂದು ತಿಳಿಸಿದ್ದಾರೆ.
ಪರಿಮಳ ಪ್ರಸಾದವನ್ನು ಆನ್‌ಲೈನ್ ಮೂಲಕ ಒದಗಿಸುವ ಯಾವುದೇ ಅಧಿಕೃತ ಸೇವೆ ಮಠದಿಂದ ಇಲ್ಲ ಎಂದು ಶ್ರೀಗಳು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಇಂತಹ ಸೇವೆಗಳ ಹೆಸರಿನಲ್ಲಿ ಯಾರಾದರೂ ಹಣ ಕೇಳಿದರೆ ಭಕ್ತರು ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡಿದ್ದಾರೆ. ಅದೇ ರೀತಿ ಮಠದಲ್ಲಿ ರೂಂ ಬುಕ್ಕಿಂಗ್ ಅಥವಾ ಇತರ ಸೇವೆಗಳ ಹೆಸರಿನಲ್ಲಿ ಖಾಸಗಿ ವ್ಯಕ್ತಿಗಳು ಹಣ ಕೇಳಿದರೆ ಪರಿಶೀಲನೆ ನಡೆಸದೆ ಹಣ ಪಾವತಿಸಬಾರದು ಎಂದು ಎಚ್ಚರಿಸಲಾಗಿದೆ.
ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಸಂಬಂಧಿಸಿದ ಯಾವುದೇ ಸೇವೆ ಅಥವಾ ಮಾಹಿತಿ ಅಗತ್ಯವಿದ್ದರೆ ಭಕ್ತರು ನೇರವಾಗಿ ಮಠದ ಕಾರ್ಯಾಲಯ ಅಥವಾ ರಾಘವೇಂದ್ರ ಸ್ವಾಮಿ ಮಠದ ಆಡಳಿತ ಮಂಡಳಿಯನ್ನು ಸಂಪರ್ಕಿಸುವಂತೆ ಶ್ರೀ ಸುಬುಧೇಂದ್ರ ತೀರ್ಥರು ಸಲಹೆ ನೀಡಿದ್ದಾರೆ.
ದೇಣಿಗೆ ನೀಡುವವರು ಹಾಗೂ ವಿವಿಧ ಸೇವೆಗಳನ್ನು ಪಡೆಯಲು ಮುಂದಾಗುವ ಭಕ್ತರು ಖಾಸಗಿ ವ್ಯಕ್ತಿಗಳು ಅಥವಾ ಅನಧಿಕೃತ ಆನ್‌ಲೈನ್ ವೇದಿಕೆಗಳನ್ನು ನಂಬಿ ಹಣ ಕಳೆದುಕೊಳ್ಳಬಾರದು. ಯಾವುದೇ ಅನುಮಾನವಿದ್ದರೂ ಮೊದಲು ಮಠದ ಅಧಿಕೃತ ಕಚೇರಿಯನ್ನು ಸಂಪರ್ಕಿಸಿ ಮಾಹಿತಿ ಖಚಿತಪಡಿಸಿಕೊಳ್ಳಬೇಕು ಎಂದು ಸುಬುಧೇಂದ್ರ ತೀರ್ಥರು ಶ್ರೀಗಳು ತಿಳಿಸಿದ್ದಾರೆ.

