HomeBusiness10 ಸಾವಿರ ಕೋಟಿ ನಷ್ಟ ಭೀತಿ: ನವೆಂಬರ್​ 1 ರಂದು ಘೋಷಿಸಿರುವ ಪ್ರತಿಭಟನೆ ಮುಂದೂಡುವಂತೆ ರಾಹುಲ್...

10 ಸಾವಿರ ಕೋಟಿ ನಷ್ಟ ಭೀತಿ: ನವೆಂಬರ್​ 1 ರಂದು ಘೋಷಿಸಿರುವ ಪ್ರತಿಭಟನೆ ಮುಂದೂಡುವಂತೆ ರಾಹುಲ್ ಗಾಂಧಿಗೆ ಪತ್ರ ಬರೆದ CTI

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಿರಂತರ ಪ್ರತಿಭಟನೆಗಳ ಪರಿಣಾಮವಾಗಿ ವ್ಯಾಪಾರಸ್ಥರು ಕಂಗಾಲಾಗಿದ್ದಾರೆ. ವ್ಯಾಪಾರ-ವಹಿವಾಟುಗಳಿಲ್ಲದೇ ತೀವ್ರ ಸಂಕಷ್ಟ ಎದುರಿಸುತ್ತಿದ್ದು, ನವೆಂಬರ್ 1ರಂದು ಕರೆ ನೀಡಿರುವ ಪ್ರತಿಭಟನೆಯನ್ನು ಮುಂದೂಡುವಂತೆ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ.

ನವೆಂಬರ್​ 1ರಂದು ರಾಮ್​ ಲೀಲಾ ಮೈದಾನದಲ್ಲಿ ಕಾಂಗ್ರೆಸ್​ ನೇತೃತ್ವದ ಇಂಡಿಯಾ ಕೂಟ ಬೃಹತ್​ ರ‍್ಯಾಲಿ ಘೋಷಿಸಿದ್ದು, ಅದನ್ನು ಮುಂದೂಡುವಂತೆ ವ್ಯಾಪಾರಿಗಳ ಸಂಘಟನೆ ಒತ್ತಾಯಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಂದು ನಡೆಸಲು ಉದ್ದೇಶಿಸಿರುವ ಪ್ರತಿಭಟನೆಯನ್ನು ನವೆಂಬರ್​ 10ಕ್ಕೆ ಮುಂದೂಡುವಂತೆ ಕೋರಿ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರಿಗೆ ದೆಹಲಿಯ ಪ್ರಮುಖ ವ್ಯಾಪಾರಿಗಳ ಸಂಘಟನೆಯಾದ ಚೇಂಬರ್ ಆಫ್ ಟ್ರೇಡ್ ಅಂಡ್ ಇಂಡಸ್ಟ್ರಿ (CTI) ಪತ್ರ ಬರೆದಿದೆ.

ಲಕ್ಷ್ಮಿ ಪೂಜೆ ಮತ್ತು ದೀಪಾವಳಿ ಹಬ್ಬ ಸಮೀಪಿಸುತ್ತಿದೆ. ವ್ಯಾಪಾರ-ವಹಿವಾಟು ಹೆಚ್ಚುವ ಸಂದರ್ಭದಲ್ಲಿ ಪ್ರತಿಭಟನೆ, ರ‍್ಯಾಲಿಯಿಂದಾಗಿ ಎಲ್ಲೆಡೆ ನಿರ್ಬಂಧ ವಿಧಿಸಲಾಗುತ್ತದೆ. ಇದರಿಂದ, ಹಬ್ಬದ ಸೀಸನ್​​ನಲ್ಲಿ 10 ಸಾವಿರ ಕೋಟಿ ರೂಪಾಯಿ ವಹಿವಾಟು ನಷ್ಟವಾಗಲಿದೆ. ಹಬ್ಬದ ಋತುವಿನ ನಂತರ ಹೋರಾಟ ಮುಂದುವರೆಸಿ ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.

ಹಬ್ಬದ ಋತುವಿನಲ್ಲಿ ಉತ್ತಮ ವ್ಯಾಪಾರ ನಡೆಯುತ್ತದೆ. ವ್ಯಾಪಾರಿಗಳು ಇದಕ್ಕಾಗಿ ಎಲ್ಲ ಸಿದ್ಧತೆ ಮಾಡಿಕೊಂಡಿದ್ದಾರೆ. ನವೆಂಬರ್ 6 ರಂದು ಧಾಂತೆರಾಸ್​ (ಧನ ತ್ರಯೋದಶಿ), ನವೆಂಬರ್ 8 ರಂದು ದೀಪಾವಳಿ ಮತ್ತು ನವೆಂಬರ್ 10 ರಂದು ಭಾಯಿ ದೂಜ್ ಹಬ್ಬಗಳು ನಡೆಯಲಿದೆ. ಜನರು ಧಾಂತೆರಾಸ್​ ಹಬ್ಬಕ್ಕೂ ಒಂದು ವಾರ ಮುಂಚಿತವಾಗಿಯೇ ಶಾಪಿಂಗ್‌ ನಡೆಸುತ್ತಾರೆ ಎಂದು ಸಿಟಿಐ ಅಧ್ಯಕ್ಷ ಬ್ರಿಜೇಶ್ ಗೋಯಲ್ ಅವರು ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಧಾಂತೇರಸ್​ ಹಬ್ಬದ ದಿನದಂದೇ ದೆಹಲಿಯಲ್ಲಿ ಚಿನ್ನ – ಬೆಳ್ಳಿ, ಎಲೆಕ್ಟ್ರಾನಿಕ್ಸ್, ಜವಳಿ, ವಾಹನಗಳು, ಗೃಹೋಪಯೋಗಿ ಪಾತ್ರೆಗಳು, ಸಿಹಿತಿಂಡಿಗಳು ಮತ್ತು ಉಡುಗೊರೆ ಖರೀದಿಯಿಂದ ಸುಮಾರು 25 ಸಾವಿರ ಕೋಟಿ ರೂಪಾಯಿ ಮೌಲ್ಯದ ವಹಿವಾಟು ನಡೆಯುವ ನಿರೀಕ್ಷೆಯಿದೆ. ಇದು ವ್ಯಾಪಾರಿಗಳಿಗೆ ಮಹತ್ವದ ಹಬ್ಬವಾಗಿದೆ ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ.

ರಾಮ್‌ಲೀಲಾ ಮೈದಾನದ 5 ಕಿಲೋಮೀಟರ್ ವ್ಯಾಪ್ತಿಯಲ್ಲಿ 20 ಪ್ರಮುಖ ಸಗಟು ಮತ್ತು ಚಿಲ್ಲರೆ ಮಾರುಕಟ್ಟೆಗಳಿವೆ. ಇವುಗಳಲ್ಲಿ ಚಾಂದನಿ ಚೌಕ್, ಸಾದರ್ ಬಜಾರ್, ಚಾವ್ರಿ ಬಜಾರ್, ಭಾಗೀರಥ್ ಪ್ಯಾಲೇಸ್, ಖಾರಿ ಬೌಲಿ, ನಯಾ ಬಜಾರ್, ಕರೋಲ್ ಬಾಗ್, ಲಜಪತ್ ರಾಯ್ ಮಾರ್ಕೆಟ್ ಮತ್ತು ಕಾಶ್ಮೀರಿ ಗೇಟ್ ಇವೆ. ಈ ವಾಣಿಜ್ಯ ಕೇಂದ್ರಗಳು ದೆಹಲಿಗೆ ಮಾತ್ರವಲ್ಲದೇ, ದೇಶದ ಇತರ ಭಾಗಗಳಿಗೂ ಸರಕುಗಳನ್ನು ಪೂರೈಸುತ್ತವೆ ಎಂದಿದ್ದಾರೆ.

ನವೆಂಬರ್ 1ರಂದು ರ‍್ಯಾಲಿ ನಡೆದರೆ, ರಸ್ತೆಗಳನ್ನು ಮುಚ್ಚುವುದು, ಮೆಟ್ರೋ ನಿಲ್ದಾಣಗಳಲ್ಲಿ ನಿರ್ಬಂಧ ಮತ್ತು ಭದ್ರತಾ ಕಾರಣಗಳಿಗಾಗಿ ಸಂಚಾರ ಮಾರ್ಗ ಬದಲಾವಣೆಗಳಿಂದಾಗಿ ಈ ಮಾರುಕಟ್ಟೆಗಳಲ್ಲಿನ ವಹಿವಾಟು ಮೂರರಿಂದ ನಾಲ್ಕು ದಿನಗಳ ಕಾಲ ಸಂಪೂರ್ಣವಾಗಿ ಸ್ಥಗಿತಗೊಳ್ಳಬಹುದು ಎಂದು ಸಿಟಿಐ ಆತಂಕ ವ್ಯಕ್ತಪಡಿಸಿದೆ.

ರಾಮ್‌ಲೀಲಾ ಮೈದಾನಕ್ಕೆ ಹತ್ತಿರದಲ್ಲಿಯೇ ಹಳೆಯ ದೆಹಲಿ ಮತ್ತು ನವದೆಹಲಿ ರೈಲು ನಿಲ್ದಾಣಗಳು ಇವೆ. ಪ್ರತಿದಿನ ವ್ಯಾಪಾರಿಗಳು ಮತ್ತು ಗ್ರಾಹಕರು ಈ ನಿಲ್ದಾಣಗಳ ಮೂಲಕವೇ ರಾಜಧಾನಿಗೆ ಆಗಮಿಸುತ್ತಾರೆ. ರ‍್ಯಾಲಿಯಿಂದಾಗಿ ಉಂಟಾಗುವ ಸಂಭಾವ್ಯ ದಟ್ಟಣೆ ಮತ್ತು ಅಡ್ಡಿಯು ಇತರ ನಗರಗಳ ಖರೀದಿದಾರರು ದೆಹಲಿಗೆ ಬರುವುದನ್ನು ತಡೆಯಬಹುದು. ಇದು ವ್ಯಾಪಾರದ ಮೇಲೆ ಪರಿಣಾಮ ಬೀರುತ್ತದೆ ಎಂದು ಸಂಘಟನೆಯು ಕಳವಳ ವ್ಯಕ್ತಪಡಿಸಿದೆ.

ಸೆಂಟ್ರಲ್ ದೆಹಲಿ, ಕನ್ನಾಟ್ ಪ್ಲೇಸ್ ಮತ್ತು ಇಂಡಿಯಾ ಗೇಟ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿವಿಧ ಪ್ರತಿಭಟನೆಗಳು ಮತ್ತು ರ‍್ಯಾಲಿಗಳಿಂದಾಗಿ ಅಕ್ಟೋಬರ್‌ನಲ್ಲಿ ವ್ಯಾಪಾರಿಗಳು ಈಗಾಗಲೇ ಸುಮಾರು 3 ಸಾವಿರ ಕೋಟಿ ರೂಪಾಯಿಗಳ ನಷ್ಟವನ್ನು ಅನುಭವಿಸಿದ್ದಾರೆ ಎಂದು ಸಿಟಿಐ ಹೇಳಿದೆ. ಈ ಹಿನ್ನೆಲೆಯಲ್ಲಿ ನವೆಂಬರ್ 1ರಂದು ಕರೆ ನೀಡಿರುವ ಪ್ರತಿಭಟನೆ ಮುಂದೂಡುವಂತೆ ಮನವಿ ಮಾಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular