ಮಡಿಕೇರಿ: ದುಬಾರೆ ಆನೆ ಶಿಬಿರದಲ್ಲಿ ಆನೆಗಳ ಸಂಘರ್ಷಕ್ಕೆ ಪ್ರವಾಸಿ ಮಹಿಳೆ ಬಲಿಯಾದ ಘಟನೆ ಬಳಿಕ ಬಂದ್ ಮಾಡಲಾಗಿದ್ದ ಕೊಡಗು ಜಿಲ್ಲೆಯ ಹಾರಂಗಿ ಮತ್ತು ಮತ್ತಿಗೋಡು ಆನೆ ಶಿಬಿರಗಳನ್ನು 5 ತಿಂಗಳ ಬಳಿಕ ಪ್ರವಾಸಿಗರಿಗೆ ಮತ್ತೆ ತೆರೆಯಲಾಗಿದೆ.
ಹಾರಂಗಿ ಹಾಗೂ ಮತ್ತಿಗೋಡು ಆನೆ ಶಿಬಿರ ತೆರೆಯಲಾಗಿದೆ ಆದರೆ ಅರಣ್ಯ ಇಲಾಖೆಯು ಕಠಿಣ ಮಾರ್ಗಸೂಚಿ ಜಾರಿಗೊಳಿಸಿದ್ದು, ಆನೆಗಳನ್ನು ಸ್ಪರ್ಶಿಸುವುದು, ಸೆಲ್ಫಿ, ವಿಡಿಯೋಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ದುಬಾರೆ ಆನೆ ಶಿಬಿರದಲ್ಲಿ ಆನೆಗಳ ನಡುವಿನ ಸಂಘರ್ಷಕ್ಕೆ ಪ್ರವಾಸಿ ಮಹಿಳೆ ಬಲಿಯಾದ ಬಳಿಕ ಭದ್ರತಾ ಹಿತದೃಷ್ಟಿಯಿಂದ ಹಾರಂಗಿ ಹಾಗೂ ಮತ್ತಿಗೋಡು ಆನೆ ಶಿಬಿರಗಳನ್ನೂ ಪ್ರವಾಸಿಗರಿಗೆ ಬಂದ್ ಮಾಡಲಾಗಿತ್ತು. ಬಂದ್ ಮಾಡಲಾಗಿದ್ದ ಕೊಡಗು ಜಿಲ್ಲೆಯ ಹಾರಂಗಿ ಹಾಗೂ ಮತ್ತಿಗೋಡು ಆನೆ ಶಿಬಿರಗಳನ್ನು ಇದೀಗ ಪ್ರವಾಸಿಗರ ಪ್ರವೇಶಕ್ಕೆ ಅವಕಶ ನೀಡಲಾಗಿದೆ.
ಕುಶಾಲನಗರ ತಾಲೂಕಿನ ಹಾರಂಗಿ ಹಾಗೂ ಮತ್ತಿಗೋಡು ಆನೆ ಶಿಬಿರಗಳು ಪ್ರವಾಸಿಗರ ವೀಕ್ಷಣೆಗೆ ಪುನಃ ಮುಕ್ತಗೊಂಡಿವೆ. ಜಿಲ್ಲೆಯ ಪ್ರಸಿದ್ದ ಪ್ರವಾಸಿ ತಾಣವಾದ ದುಬಾರೆ ಆನೆ ಶಿಬಿರದಲ್ಲಿ ಐದು ತಿಂಗಳ ಹಿಂದೆ ಭೀಕರ ದುರಂತವೊಂದು ಸಂಭವಿಸಿತ್ತು. ಆನೆಗಳ ನಡುವೆ ನಡೆದ ದಿಢೀರ್ ಸಂಘರ್ಷದ ವೇಳೆ ಪ್ರವಾಸಿ ಮಹಿಳೆಯೊಬ್ಬರು ಕಾಲ್ತುಳಿತಕ್ಕೆ ಸಿಲುಕಿ ಮೃತಪಟ್ಟಿದ್ದರು. ಈ ಆಘಾತಕಾರಿ ಘಟನೆಯ ನಂತರ ಪ್ರವಾಸಿಗರ ಭದ್ರತೆಯ ಹಿತದೃಷ್ಟಿಯಿಂದ ಅರಣ್ಯ ಇಲಾಖೆಯು ಜಿಲ್ಲೆಯ ಹಾರಂಗಿ ಹಾಗೂ ಮತ್ತಿಗೋಡು ಆನೆ ಶಿಬಿರಗಳನ್ನು ಸಾರ್ವಜನಿಕರ ವೀಕ್ಷಣೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಬಂದ್ ಮಾಡಿ ಆದೇಶಿಸಿತ್ತು. ಇದೀಗ ಆನೆ ಶಿಬಿರಗಳು ತೆರೆದಿದ್ದರೂ ಅರಣ್ಯ ಇಲಾಖೆಯು ಪ್ರವಾಸಿಗರ ಸುರಕ್ಷತೆಗಾಗಿ ಅತ್ಯಂತ ಕಟ್ಟುನಿಟ್ಟಿನ ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತಂದಿದೆ.
10 ಮೀಟರ್ ಅಂತರ ಕಡ್ಡಾಯ: ಪ್ರವಾಸಿಗರು ಆನೆಗಳಿಂದ ಕನಿಷ್ಠ 10 ಮೀಟರ್ ಸುರಕ್ಷಿತ ಅಂತರ ಕಾಯ್ದುಕೊಂಡು ಮಾತ್ರ ವೀಕ್ಷಣೆ ಮಾಡಬೇಕು.
ಆನೆಗಳನ್ನು ಮುಟ್ಟುವಂತಿಲ್ಲ: ಆನೆಗಳನ್ನು ಮುಟ್ಟುವುದು, ಅವುಗಳಿಗೆ ನೀರು ಹಾಕುವುದು ಅಥವಾ ಸ್ನಾನ ಮಾಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಸೆಲ್ಫಿಗೆ ತಡೆ: ಪ್ರವಾಸಿಗರು ಅಪಾಯಕಾರಿಯಾಗಿ ಆನೆಗಳ ತೀರಾ ಹತ್ತಿರ ತೆರಳಿ ಸೆಲ್ಫಿ ಅಥವಾ ಫೋಟೋ ತೆಗೆದುಕೊಳ್ಳಲು ಅವಕಾಶವಿಲ್ಲ.
ಈ ಸುಂದರ ಅನುಭವ ನಿರಂತರವಾಗಿರಬೇಕಾದರೆ, ಪ್ರವಾಸಿಗರು ಇಲಾಖೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಆನೆಗಳಿಂದ ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು ಅತ್ಯಗತ್ಯ ಎಂದು ತಿಳಿಸಲಾಗಿದೆ.

