HomeBusinessಸಾಲು ಸಾಲು ಲೇ ಆಫ್ ಗಳಿಂದ ಕಂಗೆಟ್ಟಿದ್ದ ಐಟಿ ವಲಯಕ್ಕೆ ಭರ್ಜರಿ ಸುದ್ದಿ, ಕಾಗ್ನಿಜೆಂಟ್ ನಿಂದ...

ಸಾಲು ಸಾಲು ಲೇ ಆಫ್ ಗಳಿಂದ ಕಂಗೆಟ್ಟಿದ್ದ ಐಟಿ ವಲಯಕ್ಕೆ ಭರ್ಜರಿ ಸುದ್ದಿ, ಕಾಗ್ನಿಜೆಂಟ್ ನಿಂದ 21,000 ಉದ್ಯೋಗಿಗಳ ನೇಮಕ

ಬೆಂಗಳೂರು: ಜಾಗತಿಕ ಆರ್ಥಿಕ ಹಿಂಜರಿತ ಹಾಗೂ ಸಾಲು ಸಾಲು ಲೇ ಆಫ್‌ಗಳಿಂದಾಗಿ ಕಂಗೆಟ್ಟಿದ್ದ ಭಾರತದ ಐಟಿ ಉದ್ಯೋಗಾಕಾಂಕ್ಷಿಗಳಿಗೆ ಜಾಗತಿಕ ಟೆಕ್ ದೈತ್ಯ ‘ಕಾಗ್ನಿಜೆಂಟ್’ ಭರ್ಜರಿ ಸಿಹಿಸುದ್ದಿ ನೀಡಿದೆ.

ಬಹುತೇಕ ಐಟಿ ಕಂಪನಿಗಳು ತಮ್ಮ ಉದ್ಯೋಗಿಗಳ ಸಂಖ್ಯೆಯನ್ನು ಕಡಿತಗೊಳಿಸುತ್ತಿರುವ ಈ ಸಂದರ್ಭದಲ್ಲಿ, ಕಾಗ್ನಿಜೆಂಟ್ ಮಾತ್ರ ಹೊಸ ಉದ್ಯೋಗಿಗಳನ್ನು ನೇಮಿಸಿಕೊಳ್ಳುವ ಮೂಲಕ ತನ್ನ ಒಟ್ಟು ಉದ್ಯೋಗಿಗಳ ಸಂಖ್ಯೆಯನ್ನು 3.5 ಲಕ್ಷದ ಗಡಿ ದಾಟಿಸಿದೆ.

2026ನೇ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದ (ಕ್ಯೂ1) ಆರ್ಥಿಕ ಫಲಿತಾಂಶವನ್ನು ಪ್ರಕಟಿಸಿರುವ ಅಮೆರಿಕ ಮೂಲದ ಕಾಗ್ನಿಜೆಂಟ್, ನಿರೀಕ್ಷೆಗೂ ಮೀರಿದ ಸಾಧನೆ ಮಾಡಿದೆ. ಕ್ಯೂ1 ನಲ್ಲಿ ಕಂಪನಿಯ ಆದಾಯವು ಶೇ. 5.8 ರಷ್ಟು ಏರಿಕೆ ಕಂಡು 5.4 ಬಿಲಿಯನ್ ಡಾಲರ್ (ಸುಮಾರು 51,200 ಕೋಟಿ ರೂ.) ತಲುಪಿದೆ. ಸ್ಥಿರ ಕರೆನ್ಸಿ ಲೆಕ್ಕಾಚಾರದಲ್ಲಿ ಇದು ಶೇ. 3.9ರಷ್ಟು ಬೆಳವಣಿಗೆಯಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆದರೆ, ಕಂಪನಿಯ ಕಾರ್ಯಾಚರಣೆ ಮಾರ್ಜಿನ್ ಈ ತ್ರೈಮಾಸಿಕದಲ್ಲಿ ಶೇ. 15.6ರಷ್ಟಿದ್ದು, ಹೊಂದಾಣಿಕೆಯ ಆಧಾರದ ಮೇಲೆ ಸ್ಥಿರವಾಗಿದ್ದರೂ, ವಾರ್ಷಿಕ ಲೆಕ್ಕಾಚಾರದಲ್ಲಿ 110 ಮೂಲಾಂಶಗಳಷ್ಟು ಕುಸಿತ ಕಂಡಿದೆ.

ಫೈನಾನ್ಶಿಯಲ್‌ ವಲಯದಲ್ಲಿ ಭರ್ಜರಿ ಬೆಳವಣಿಗೆ

ಫೈನಾನ್ಶಿಯಲ್‌ ಸರ್ವಿಸ್ ವಲಯ ಶೇ. 12.4ರಷ್ಟು ವೃದ್ಧಿ ಸಾಧಿಸಿ ಅತ್ಯುತ್ತಮ ಕಾರ್ಯಕ್ಷಮತೆ ತೋರಿದ್ದರೆ, ಕಮ್ಯುನಿಕೇಶನ್ ಮತ್ತು ಮೀಡಿಯಾ ವಲಯ ಶೇ. 8.1ರಷ್ಟು ಹಾಗೂ ಪ್ರಾಡಕ್ಟ್ಸ್ ವಲಯ ಶೇ. 3.4ರಷ್ಟು ಬೆಳವಣಿಗೆ ದಾಖಲಿಸಿವೆ. ಭೌಗೋಳಿಕವಾಗಿ ನೋಡುವುದಾದರೆ, ಉತ್ತರ ಅಮೆರಿಕಾದಲ್ಲಿ ಶೇ. 5.1ರಷ್ಟು ಹಾಗೂ ಯುರೋಪ್ ಮಾರುಕಟ್ಟೆ ಶೇ. 3.5ರಷ್ಟು ಬೆಳವಣಿಗೆ ಕಂಡು ಬಂದಿದೆ.

ಎರಡನೇ ತ್ರೈಮಾಸಿಕದಲ್ಲಿ (ಕ್ಯೂ2) ಆದಾಯ ಶೇ. 3.8 ರಿಂದ ಶೇ. 5.3ರಷ್ಟು ವೃದ್ಧಿಯಾಗುವ ನಿರೀಕ್ಷೆಯನ್ನು ಕಾಗ್ನಿಜೆಂಟ್ ವ್ಯಕ್ತಪಡಿಸಿದ್ದು, 2026ರ ಪೂರ್ಣ ಆರ್ಥಿಕ ವರ್ಷದಲ್ಲಿ ಆದಾಯದ ಬೆಳವಣಿಗೆ ಶೇ. 4.8 ರಿಂದ ಶೇ. 7.3ರಷ್ಟಿರಲಿದೆ (ಸ್ಥಿರ ಕರೆನ್ಸಿಯಲ್ಲಿ ಶೇ. 4 ರಿಂದ ಶೇ. 6.5) ಎಂದು ಅಂದಾಜಿಸಿದೆ.

ಐಟಿ ವಲಯಕ್ಕೆ ನೆಮ್ಮದಿ ತಂದ ಕಾಗ್ನಿಜೆಂಟ್

ಟಿ‌ಸಿ‌ಎಸ್, ಇನ್ಫೋಸಿಸ್, ವಿಪ್ರೋದಂತಹ ಭಾರತೀಯ ಐಟಿ ದೈತ್ಯ ಕಂಪನಿಗಳು ಉದ್ಯೋಗ ನೇಮಕಾತಿಯನ್ನು ತಗ್ಗಿಸುತ್ತಿರುವ ಹೊತ್ತಿನಲ್ಲೇ, ಕಾಗ್ನಿಜೆಂಟ್ ಹೊಸ ನೇಮಕಾತಿಯಲ್ಲಿ ಮುಂಚೂಣಿಯಲ್ಲಿದೆ. ಕ್ಯೂ1 ಅಂತ್ಯದ ವೇಳೆಗೆ ಅಂದರೆ ಮಾರ್ಚ್ 31, 2026ರ ಕೊನೆಗೆ ಕಂಪನಿಯ ಒಟ್ಟು ಉದ್ಯೋಗಿಗಳ ಸಂಖ್ಯೆ ಬರೋಬ್ಬರಿ 3,57,600ಕ್ಕೆ ತಲುಪಿದೆ.

ಕಳೆದ ಒಂದೇ ತ್ರೈಮಾಸಿಕದಲ್ಲಿ 6,000 ಹೊಸ ಉದ್ಯೋಗಿಗಳನ್ನು ಸೇರ್ಪಡೆ ಮಾಡಿಕೊಳ್ಳಲಾಗಿದೆ. ಕಳೆದ ವರ್ಷಕ್ಕೆ (2025ರ ಕ್ಯೂ1) ಹೋಲಿಸಿದರೆ ಉದ್ಯೋಗಿಗಳ ಸಂಖ್ಯೆಯಲ್ಲಿ 21,300ರಷ್ಟು ಭಾರಿ ಏರಿಕೆ ಕಂಡಿದೆ. ಕಾಗ್ನಿಜೆಂಟ್‌ನ ಹೆಚ್ಚಿನ ಉದ್ಯೋಗಿಗಳು ಭಾರತದಲ್ಲೇ ಇರುವುದರಿಂದ, ಇದು ದೇಶದ ಐಟಿ ಉದ್ಯೋಗಾಕಾಂಕ್ಷಿಗಳಿಗೆ ದೊಡ್ಡ ರಿಲೀಫ್ ನೀಡಿದೆ.

ಇನ್ನು ಕಂಪನಿ ಬಿಟ್ಟು ಹೋಗುವ ಉದ್ಯೋಗಿಗಳ ಪ್ರಮಾಣ (ಅಟ್ರಿಷನ್‌ ದರ) ಶೇ. 12.3ರಷ್ಟಿದ್ದು ಸ್ಥಿರವಾಗಿದೆ.

ಭಾರಿ ಒಪ್ಪಂದ, ಎಐನತ್ತ ಕಂಪನಿ ಚಿತ್ತ

ಕ್ಯೂ1 ನಲ್ಲಿ ಕಾಗ್ನಿಜೆಂಟ್‌ನ ಬುಕಿಂಗ್‌ಗಳಲ್ಲಿ ಶೇ. 21ರಷ್ಟು ಭಾರಿ ಏರಿಕೆ ಕಂಡುಬಂದಿದೆ. ಕಳೆದ 12 ತಿಂಗಳ ಒಟ್ಟು ಬುಕಿಂಗ್ ಮೌಲ್ಯ 29.6 ಬಿಲಿಯನ್ ಡಾಲರ್ ತಲುಪಿದೆ. ಈ ತ್ರೈಮಾಸಿಕದಲ್ಲಿ ಕಂಪನಿಯು 7 ಬೃಹತ್ ಡೀಲ್‌ಗಳಿಗೆ ಸಹಿ ಹಾಕಿದ್ದು, ಅದರಲ್ಲಿ ಒಂದು 500 ಮಿಲಿಯನ್ ಡಾಲರ್‌ಗೂ ಅಧಿಕ ಮೌಲ್ಯದ ಮೆಗಾ ಡೀಲ್ ಕೂಡ ಸೇರಿದೆ.

“ನಮ್ಮ ಎಐ ಆಧಾರಿತ ಕಾರ್ಯತಂತ್ರವು ಉತ್ತಮ ಫಲಿತಾಂಶ ನೀಡುತ್ತಿದೆ. ಪ್ರಸ್ತುತ 5,000ಕ್ಕೂ ಹೆಚ್ಚು ಎಐ ಪ್ರಾಜೆಕ್ಟ್‌ಗಳು ನಡೆಯುತ್ತಿದ್ದು, ಶೇ. 40ರಷ್ಟು ಕೋಡಿಂಗ್ ಕೆಲಸಗಳನ್ನು ಎಐ ನೆರವಿನಿಂದಲೇ ಮಾಡಲಾಗುತ್ತಿದೆ” ಎಂದೂ ಕಂಪನಿಯ ಸಿಇಒ ರವಿ ಕುಮಾರ್ ಎಸ್ ತಿಳಿಸಿದ್ದಾರೆ.

ಆಸ್ಟ್ರೇಯಾ ಕಂಪನಿ ಖರೀದಿಸಲಿದೆ ಕಾಗ್ನಿಜೆಂಟ್‌

ತನ್ನ ಕೃತಕ ಬುದ್ಧಿಮತ್ತೆ ಮತ್ತು ಡೇಟಾ ಸೆಂಟರ್ ಸೇವೆಗಳನ್ನು ಇನ್ನಷ್ಟು ಬಲಪಡಿಸುವ ಉದ್ದೇಶದಿಂದ ಕಾಗ್ನಿಜೆಂಟ್, ಐಟಿ ಸೇವಾ ಪೂರೈಕೆದಾರ ಕಂಪನಿಯಾದ ‘ಆಸ್ಟ್ರೇಯಾ’ವನ್ನು ಸುಮಾರು 600 ಮಿಲಿಯನ್ ಡಾಲರ್ (5,700 ಕೋಟಿ ರೂ.) ಮೌಲ್ಯದಲ್ಲಿ ಖರೀದಿಸಲು ಒಪ್ಪಂದ ಮಾಡಿಕೊಂಡಿದೆ. ಈ ಪ್ರಕ್ರಿಯೆ 2026ರ ಎರಡನೇ ತ್ರೈಮಾಸಿಕದ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಒಟ್ಟಾರೆಯಾಗಿ, ಜಾಗತಿಕ ಆರ್ಥಿಕ ಅನಿಶ್ಚಿತತೆ ಹಾಗೂ ಎಐ ತಂತ್ರಜ್ಞಾನದಿಂದ ಉದ್ಯೋಗ ಕಡಿತದ ಭೀತಿ ಎದುರಾಗಿರುವ ಈ ಸಮಯದಲ್ಲಿ, ಕಾಗ್ನಿಜೆಂಟ್‌ನ ಈ ಪಾಸಿಟಿವ್ ಬೆಳವಣಿಗೆ ಭಾರತೀಯ ಐಟಿ ಕ್ಷೇತ್ರಕ್ಕೆ ಹೊಸ ಆಶಾಕಿರಣವಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular