HomeIPL 2026IPL 2026: ವಾಂಖೆಡೆಯಲ್ಲಿ 244 ರನ್ ಚೇಸ್ ಮಾಡಿ ಮುಂಬೈಗೆ ಮಣ್ಣುಮುಕ್ಕಿಸಿದ ಸನ್‌ರೈಸರ್ಸ್ ಹೈದರಾಬಾದ್

IPL 2026: ವಾಂಖೆಡೆಯಲ್ಲಿ 244 ರನ್ ಚೇಸ್ ಮಾಡಿ ಮುಂಬೈಗೆ ಮಣ್ಣುಮುಕ್ಕಿಸಿದ ಸನ್‌ರೈಸರ್ಸ್ ಹೈದರಾಬಾದ್

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಇಂದು ( ಏಪ್ರಿಲ್ 29 ) ಐಪಿಎಲ್ 2026ರ ಲೀಗ್ ಹಂತದ 41ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸನ್ ರೈಸರ್ಸ ಹೈದರಾಬಾದ್ 6 ವಿಕೆಟ್‌ಗಳ ಗೆಲುವನ್ನು ದಾಖಲಿಸಿದೆ.

ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ರಯಾನ್ ರಿಕೆಲ್ಟನ್ ಅಬ್ಬರದ ಶತಕದ ನೆರವಿನಿಂದ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 243 ರನ್ ಕಲೆಹಾಕಿ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ 244 ರನ್‌ಗಳ ಕಠಿಣ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನಟ್ಟಿ ಬೌಂಡರಿಗಳ ಸುರಿಮಳೆಗೈದ ಸನ್ ರೈಸರ್ಸ್ ಹೈದರಾಬಾದ್ 18.4 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 249 ರನ್ ಚಚ್ಚಿತು.

ಮುಂಬೈ ಇಂಡಿಯನ್ಸ್ ಇನ್ನಿಂಗ್ಸ್: ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ರಯಾನ್ ರಿಕೆಲ್ಟನ್ ಹಾಗೂ ವಿಲ್ ಜಾಕ್ಸ್ ಜೋಡಿ 93 ರನ್‌ಗಳ ಜತೆಯಾಟವನ್ನಾಡುವ ಮೂಲಕ ಉತ್ತಮ ಆರಂಭ ಕಟ್ಟಿಕೊಟ್ಟರು. ವಿಲ್ ಜಾಕ್ಸ್ 46 ರನ್‌ಗಳಿಗೆ ವಿಕೆಟ್ ಒಪ್ಪಿಸಿದರೆ, ರಯಾನ್ ರಿಕೆಲ್ಟನ್ ಕೊನೆಯ ಹಂತದವರೆಗೂ ಕಣದಲ್ಲಿದ್ದು, 55 ಎಸೆತಗಳಲ್ಲಿ 10 ಬೌಂಡರಿ ಹಾಗೂ 8 ಸಿಕ್ಸರ್ ಸಹಿತ ಅಜೇಯ 123 ರನ್ ಚಚ್ಚಿದರು. ಇನ್ನುಳಿದಂತೆ ಸೂರ್ಯಕುಮಾರ್ ಯಾದವ್ 5, ನಮನ್ ಧೀರ್ 22, ಹಾರ್ದಿಕ್ ಪಾಂಡ್ಯ 31 (15), ತಿಲಕ್ ವರ್ಮಾ 7 ರನ್ ಹಾಗೂ ರಾಬಿನ್ ಮಿನ್ಜ್ ಅಜೇಯ 1 ರನ್ ಗಳಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸನ್ ರೈಸರ್ಸ್ ಹೈದರಾಬಾದ್ ಪರ ಪ್ರಫುಲ್ ಹಿಂಗೆ ಎರಡು ವಿಕೆಟ್, ಇಶಾನ್ ಮಲಿಂಗ, ಶಕಿಬ್ ಹುಸೈನ್ ಹಾಗೂ ನಿತಿಶ್ ಕುಮಾರ್ ರೆಡ್ಡಿ ತಲಾ ಒಂದೊಂದು ವಿಕೆಟ್ ಪಡೆದರು.

ಸನ್ ರೈಸರ್ಸ್ ಹೈದರಾಬಾದ್ ಇನ್ನಿಂಗ್ಸ್: ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಅಭಿಷೇಕ್ ಶರ್ಮಾ ಹಾಗೂ ಟ್ರಾವಿಸ್ ಹೆಡ್ ಜೋಡಿ 52 ಎಸೆತಗಳಲ್ಲಿ 129 ರನ್‌ಗಳ ಜತೆಯಾಟವನ್ನಾಡಿ ಬೃಹತ್ ಮೊತ್ತ ಬೆನ್ನಟ್ಟಲು ಬೇಕಾದ ಆರಂಭ ಮಾಡಿಕೊಟ್ಟರು. ಅಭಿಷೇಕ್ ಶರ್ಮಾ 24 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 45 ರನ್ ಬಾರಿಸಿದರು. ನಂತರ ಕಣಕ್ಕಿಳಿದ ಇಶಾನ್ ಕಿಶನ್ ಮುಂದಿನ ಎಸೆತದಲ್ಲೇ ಕ್ಲೀನ್ ಬೌಲ್ಡ್ ಆಗಿ ಗೋಲ್ಡನ್ ಡಕ್‌ಔಟ್ ಆದರು. ನಂತರದ ಓವರ್‌ನಲ್ಲಿ ಟ್ರಾವಿಸ್ ಹೆಡ್ 30 ಎಸೆತಗಳಲ್ಲಿ 4 ಬೌಂಡರಿ ಹಾಗೂ 8 ಸಿಕ್ಸರ್ ಸಹಿತ 76 ರನ್ ಚಚ್ಚಿದರು. ಹೀಗೆ 133 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡ ತಂಡಕ್ಕೆ ನಾಲ್ಕನೇ ವಿಕೆಟ್‌ಗೆ ಜತೆಯಾದ ಹೆನ್‌ರಿಚ್ ಕ್ಲಾಸೆನ್ ಹಾಗೂ ನಿತಿಶ್ ಕುಮಾರ್ ರೆಡ್ಡಿ ಜೋಡಿ 80 ರನ್‌ಗಳ ಜತೆಯಾಟವನ್ನಾಡಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ನಿತಿಶ್ ಕುಮಾರ್ ರೆಡ್ಡಿ 21 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಒಂದಾದ ಕ್ಲಾಸೆನ್ ಹಾಗೂ ಸಲೀಲ್ ಅರೋರಾ ಜೋಡಿ 14 ಎಸೆತಗಳಲ್ಲಿ 36 ರನ್‌ಗಳ ಜತೆಯಾಟವಾಡಿ ಅಬ್ಬರಿಸಿತು. ಸಲೀಲ್ ಅರೋರಾ 10 ಎಸೆತಗಳಲ್ಲಿ 2 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ ಅಜೇಯ 30 ರನ್ ಚಚ್ಚಿದರೆ, ಜಾಣ್ಮೆಯ ಅಬ್ಬರದ ಆಟವನ್ನಾಡಿದ ಹೆನ್‌ರಿಚ್ ಕ್ಲಾಸೆನ್ 30 ಎಸೆತಗಳಲ್ಲಿ 7 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ ಅಜೇಯ 65 ರನ್ ಚಚ್ಚಿದರು.

ಮುಂಬೈ ಇಂಡಿಯನ್ಸ್ ಪರ ಎಎಂ ಘಜನ್ಫರ್ ಎರಡು ವಿಕೆಟ್, ಹಾರ್ದಿಕ್ ಪಾಂಡ್ಯ ಹಾಗೂ ಟ್ರೆಂಟ್ ಬೌಲ್ಡ್ ತಲಾ ಒಂದೊಂದು ವಿಕೆಟ್ ಪಡೆದರು.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular