ಬೆಂಗಳೂರು: ರಾಜ್ಯ ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಮತ್ತು ಪಾರದರ್ಶಕ ಆಡಳಿತವನ್ನು ಉತ್ತೇಜಿಸಲು ಕರ್ನಾಟಕ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಇನ್ನು ಮುಂದೆ ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಲೋಕಾಯುಕ್ತ ಸಹಾಯವಾಣಿ ಸಂಖ್ಯೆ ಹಾಗೂ ಲಂಚದ ವಿರುದ್ಧದ ಜಾಗೃತಿ ಫಲಕಗಳನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಆದೇಶಿಸಿದ್ದಾರೆ.
ಯಾವೆಲ್ಲಾ ಕಚೇರಿಗಳಿಗೆ ಅನ್ವಯ? ಸರ್ಕಾರದ ಎಲ್ಲಾ ಸಚಿವಾಲಯಗಳು, ಇಲಾಖೆಗಳು, ಸರ್ಕಾರಿ ಕಚೇರಿಗಳು, ನಿಗಮ ಮಂಡಳಿಗಳು, ಮಹಾನಗರ ಪಾಲಿಕೆಗಳು, ನಗರಸಭೆಗಳು ಮತ್ತು ಸ್ವಾಯತ್ತ ಸಂಸ್ಥೆಗಳಿಗೆ ಈ ನಿಯಮ ಅನ್ವಯವಾಗಲಿದೆ. ಕಚೇರಿಯ ಪ್ರವೇಶ ದ್ವಾರ ಅಥವಾ ಸಾರ್ವಜನಿಕರಿಗೆ ಸುಲಭವಾಗಿ ಕಾಣುವ ಸ್ಥಳಗಳಲ್ಲಿ ಈ ಮಾಹಿತಿ ಫಲಕಗಳನ್ನು ಅಳವಡಿಸಬೇಕು.
ಫಲಕದಲ್ಲಿ ಏನಿರಲಿದೆ? “ಲಂಚ ನೀಡಬೇಡಿ” ಎಂಬ ಸ್ಪಷ್ಟ ಸಂದೇಶದೊಂದಿಗೆ, ಒಂದು ವೇಳೆ ಕಚೇರಿಯಲ್ಲಿ ಯಾರಾದರೂ ಲಂಚ ಕೇಳಿದರೆ ದೂರು ನೀಡಲು ಇಲಾಖಾ ಮುಖ್ಯಸ್ಥರ ವಿವರ ಮತ್ತು ಕರ್ನಾಟಕ ಲೋಕಾಯುಕ್ತದ ಸಂಪರ್ಕ ಸಂಖ್ಯೆಗಳನ್ನು ನೀಡಲಾಗುವುದು. ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಈ ಫಲಕಗಳು ಇರಲಿವೆ.
ಲೋಕಾಯುಕ್ತ ಸಹಾಯವಾಣಿಗಳು: ಸಾರ್ವಜನಿಕರು ಭ್ರಷ್ಟಾಚಾರದ ವಿರುದ್ಧ ದೂರು ನೀಡಲು ಈ ಕೆಳಗಿನ ಸಂಖ್ಯೆಗಳನ್ನು ಬಳಸಬಹುದು:
- ದೂರವಾಣಿ: 080-22375014 / 22011298
- ಟೋಲ್ ಫ್ರೀ: 18004255320
ಪಾರದರ್ಶಕತೆಗೆ ಆದ್ಯತೆ: 2ನೇ ಕರ್ನಾಟಕ ಆಡಳಿತ ಸುಧಾರಣಾ ಆಯೋಗದ ಶಿಫಾರಸಿನಂತೆ ಈ ಕ್ರಮ ಕೈಗೊಳ್ಳಲಾಗಿದ್ದು, ಸಾರ್ವಜನಿಕರಿಗೆ ತಮ್ಮ ಹಕ್ಕುಗಳ ಬಗ್ಗೆ ಅರಿವು ಮೂಡಿಸುವುದು ಮತ್ತು ಭ್ರಷ್ಟಾಚಾರ ಮುಕ್ತ ಸರ್ಕಾರಿ ವ್ಯವಸ್ಥೆಯನ್ನು ನಿರ್ಮಿಸುವುದು ಸರ್ಕಾರದ ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.




