ಅಹ್ಮದಾಬಾದ್ – ಕೊನೆಯ ಓವರ್‌ನಲ್ಲಿ ಕರಾರುವಕ್ಕಾದ ಬೌಲಿಂಗ್ ದಾಳಿ ನಡೆಸಿದ ತುಷಾರ್ ಪಾಂಡೆ ಅತಿಥೇಯ ಗಜರಾತ್ ಟೈಟನ್ಸ್ ತಂಡದ ವಿರುದ್ಧ ರಾಜಸ್ತಾನ್‌ಗೆ ೬ ರನ್‌ಗಳ ಭರ್ಜರಿ ಗೆಲುವು ತಂದುಕೊಟ್ಟರು.
ರಣರೋಚಕತೆಯಿಂದ ಕೂಡಿದ್ದ ಐಪಿಎಲ್-೨೦೨೬ರ ೮ನೇ ಪಂದ್ಯದಲ್ಲಿ ರೋಚಕ ಗೆಲುವು ದಾಖಲಿಸಿದ ರಾಜಸ್ತಾನ್ ರಾಯಲ್ಸ್ ೨೦೨೪ರ ಸೋಲಿಗೆ ಸೇಡು ತೀರಿಸಿಕೊಂಡಿತು.
ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಶನಿವಾರ ಸಂಜೆ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ತಾನ್ ರಾಯಲ್ಸ್ ನಿಗದಿತ ೨೦ ಓವರ್‌ಗಳಲ್ಲಿ ೬ ವಿಕೆಟ್ ಕಳೆದುಕೊಂಡು ೨೧೦ ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಈ ಮೊತ್ತ ಬೆನ್ನತ್ತುವಲ್ಲಿ ವಿಫಲವಾದ ಗುಜರಾತ್ ಟೈಟನ್ಸ್ ನಿಗದಿತ ೨೦ ಓವರ್‌ಗಳಲ್ಲಿ ೮ ವಿಕೆಟ್ ನಷ್ಟಕ್ಕೆ ೨೦೪ರನ್ ಗಳಿಸಿ ಸೋಲನನುಭವಿಸಿತು.
ರಾಜಸ್ತಾನ್ ಇನ್ನಿಂಗ್ಸ್: ಮೊದಲು ಬ್ಯಾಟ್ ಮಾಡಿದ ರಾಜಸ್ತಾನ್ ರಾಯಲ್ಸ್ ತಂಡ ಬೃಹತ್ ಮೊತ್ತ ಪೇರಿಸಿತು. ಜೈಸ್ವಾಲ್ ಹಾಗೂ ವೈಭವ್ ಸೂರ್ಯವಂಶಿ ಜೋಡಿ ಮೊದಲ ವಿಕೆಟ್‌ಗೆ ೭೦ರನ್‌ಗಳ ಜೊತೆಯಾಟ ನೀಡಿದರು. ಸೂರ್ಯವಂಶಿ ೧೦ ಎಸೆತಗಳಲ್ಲಿ ೩೧ ರನ್ ಬಾರಿಸಿದರೆ, ಜೈಸ್ವಾಲ್ ೩೬ ಎಸೆತಗಳಲ್ಲಿ ೬ ಬೌಂಡರಿ, ೩ ಸಿಕ್ಸರ್ ಸಹಿತ ೫೫ ರನ್ ಚಚ್ಚಿದರು.
ನಾಯಕ ರಿಯಾನ್ ಪರಾಗ್ ೮, ಶಿಮ್ರಾನ್ ಹೆಟ್ಮಯರ್ ೧೮ ಹಾಗು ಫೆರಿರಾ ೧ ರನ್ ಗಳಿಸಿ, ವೇಗವಾಗಿ ವಿಕೆಟ್ ಒಪ್ಪಿಸಿ ಹೊರನಡೆದರು. ಒಂದೆಡೆ ವಿಕೆಟ್ ಬೀಳುತ್ತಿದ್ದರೂ ಮತ್ತೊಂದೆಡೆ ಸುಭದ್ರವಾಗಿ ನಿಂತು ಇನ್ನಿಂಗ್ಸ್ ಕಟ್ಟಿದ ಧ್ರುವ್ ಜುರೆಲ್ ತಂಡದ ಮೊತ್ತ ಇನ್ನೂರರ ಗಡಿ ದಾಟಲು ಸಹಕರಿಸಿದರು. ೪೨ ಎಸೆತ ಎದುರಿಸಿ ತಲಾ ೫ ಬೌಂಡರಿ ಹಾಗೂ ಸಿಕ್ಸರ್ ಒಳಗೊಂಡಂತೆ ೭೫ರನ್ ಗಳಿಸಿದರು.
ಉಳಿದಂತೆ ರವೀಂದ್ರ ಜಡೇಜಾ ಅಜೇಯ ೭, ಜೋಫ್ರಾ ಆರ್ಚರ್ ೧ ರನ್ ಗಳಿಸಿ ಅಜೇರಾಗಿ ಉಳಿದರು.
ಗುಜರಾತ್ ಪರ ಕಗಿಸೋ ರಬಾಡ ೨ ವಿಕೆಟ್, ಮೊಹಮ್ಮದ್ ಶಮಿ, ಅಶೋಕ್ ಶರ್ಮಾ, ರಶೀದ್ ಖಾನ್ ಹಾಗೂ ಪ್ರಸಿದ್ಧ್ ಕೃಷ್ಣ ತಲಾ ಒಂದೊಂದು ವಿಕೆಟ್ ಪಡೆದರು.
ಗುಜರಾತ್ ಇನ್ನಿಂಗ್ಸ್: ಬೃಹತ್ ಮೊತ್ತ ಬೆನ್ನತ್ತಿದ ಗುಜರಾತ್‌ಗೆ ಸಾಯ್ ಸುದರ್ಶನ್ ಉತ್ತಮ ಆರಂಭ ಒದಗಿಸಿದರು. ೪೪ ಎಸೆತಗಳಲ್ಲಿ ೯ ಬೌಂಡರಿ, ೩ ಸಿಕ್ಸರ್ ಸೇರಿದಂತೆ ೭೩ ರನ್ ಗಳಿಸಿ ಔಟಾದರು. ಕುಮಾರ್ ಕುಶಾರ್ಗ೧೮, ಜೋಸ್ ಬಟ್ಲರ್ ೨೬ ರನ್ ಗಳಿಸಿದರು.
ಗ್ಲೇನ್ ಫಿಲಿಪ್ಸ್ ೩, ವಾಷಿಂಗ್ಟನ್ ಸುಂದರ್ ೪, ರಾಹುಲ್ ತೆವಾಟಿಯಾ ೧೨, ಶಾರುಖ್ ಖಾನ್ ೧೧ ರನ್ ಗಳಿಸಿ ಬಂದಷ್ಟೆ ವೇಗವಾಗಿ ಹಿಂತಿರುಗಿದರು. ಮಧ್ಯಮ ಕ್ರಮಾಂಕದ ದಿಢೀರ್ ಕುಸಿತದಿಂದ ತಂಡ ಸಂಕಷ್ಟಕ್ಕೆ ಸಿಲುಕಿತು.
ಕೊನೆಯ ೪ ಓವರ್‌ಗಳಿಗೆ ೪೦ ರನ್ ಬೇಕಿದ್ದ ವೇಳೆ ಒಂದಾದ ನಾಯಕ ರಶೀದ್ ಖಾನ್ ಹಾಗೂ ರಬಾಡ ಸಮಯೋಚಿತ ಆಟ ಆಡಿ, ಕೊನೆಯ ೬ ಎಸೆತಗಳಿಗೆ ೧೧ ರನ್ ಕೂರಿಸಿದರು.
ಕೊನೆಯ ಓವರ್‌ನಲ್ಲಿ ಯಾರ್ಕರ್‌ಗಳ ಸುರಿಮಳೆಗೈದ ತುಷಾರ್ ಪಾಂಡೆ ಗುಜರಾತ್ ಬ್ಯಾಟರ್‌ಗಳನ್ನು ಕಾಡಿದರು. ತಮ್ಮ ೬ ಎಸೆತಗಳಲ್ಲಿ ಕೇವಲ ೪ ರನ್ ಬಿಟ್ಟುಕೊಟ್ಟು ೬ ರನ್‌ಗಳಿಂದ ರಾಜಸ್ತಾನ್ ತಂಡಕ್ಕೆ ಗೆಲುವು ತಂದುಕೊಟ್ಟರು. ಇತ್ತ ಗುಜರಾತ್ ಪರ ರಶೀದ್ ಖಾನ್ ೨೪ ರನ್ ಗಳಿಸಿದರೆ, ರಬಾಡ ಅಜೇಯ ೨೩ರನ್ ಗಳಿಸಿಯೂ ತಂಡವನ್ನು ಗೆಲ್ಲಿಸಿಕೊಡಲು ಆಗಲಿಲ್ಲ.
ರಾಜಸ್ತಾನ್ ಪರ ರವಿ ಬಿಷ್ಣೋಯ್ ಪ್ರಮುಖ ೪ ವಿಕೆಟ್ ಕಬಳಿಸಿ ಮಿಂಚಿದರು. ಬರ್ಗರ್, ದೇಶ್‌ಪಾಂಡೆ ಹಾಗೂ ರಿಯಾನ್ ಪರಾಗ್ ತಲಾ ಒಂದೊಂದು ವಿಕೆಟ್ ಪಡೆದರು.

