ಧಾರವಾಡ : ಸರ್ಕಾರಿ ಆಸ್ಪತ್ರೆಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವುದು ವೈದ್ಯರು ಮತ್ತು ಸಿಬ್ಬಂದಿಯ ಪ್ರಮುಖ ಜವಾಬ್ದಾರಿಯಾಗಿದೆ. ಸಣ್ಣಪುಟ್ಟ ಲೋಪದೋಷಗಳಿಂದ ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಸಾರ್ವಜನಿಕರಲ್ಲಿ ತಪ್ಪು ಅಭಿಪ್ರಾಯ ಮೂಡದಂತೆ ಎಚ್ಚರ ವಹಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಪ್ ಇಲಾಖೆ ಸಚಿವರಾದ ಯು. ಟಿ. ಖಾದರ್ ಫರೀದ್ ಅವರು ಹೇಳಿದರು.
ಅವರು ಇಂದು (ಸೆ.12) ಬೆಳಿಗ್ಗೆ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ಉದ್ಘಾಟಿಸಿ ಮಾತನಾಡಿದರು.
ಪ್ರಾಥಮಿಕ ಆರೋಗ್ಯ ಕೇಂದದ್ರ ವೈದ್ಯರು ತಮ್ಮ ಕೇಂದ್ರವನ್ನು ಸ್ವಂತ ಸಂಸ್ಥೆಯಂತೆ ಭಾವಿಸಿ, ಸಮರ್ಪಕವಾಗಿ ಕಾರ್ಯ ನಿರ್ವಹಿಸಬೇಕು. ವೈದ್ಯರು ಸಮಯಪಾಲನೆಗೆ ಆದ್ಯತೆ ನೀಡಿ, ಸಿಬ್ಬಂದಿಗೂ ಮಾದರಿಯಾಗಬೇಕು. ಆಸ್ಪತ್ರೆಗಳಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯ ಕಾಪಾಡಬೇಕು. ರೋಗಿಗಳಿಗೆ ಧೈರ್ಯ ಹಾಗೂ ನಂಬಿಕೆ ಮೂಡುವ ವಾತಾವರಣ ನಿರ್ಮಿಸಬೇಕು. ವೈದ್ಯರ ವರ್ಗಾವಣೆ ಸಮಾಲೋಚನೆಯಲ್ಲಿ ಪತಿ-ಪತ್ನಿ ಒಂದೇ ಜಿಲ್ಲೆಯಲ್ಲಿ ಸೇವೆ ಸಲ್ಲಿಸಲು ಅನುಕೂಲವಾಗುವಂತೆ ಕೆಲವು ಬದಲಾವಣೆ ತರಲಾಗುವುದು. ಉತ್ತಮ ಸೇವೆ ಸಲ್ಲಿಸಿರುವ ವೈದ್ಯರಿಗೆ ಅದೇ ಸ್ಥಳದಲ್ಲಿ ಮುಂದುವರಿಯಲು ಅವಕಾಶ ನೀಡುವ ಬಗ್ಗೆಯೂ ಕ್ರಮ ಕೈಗೊಳ್ಳಲಾಗುವುದು. ಗುತ್ತಿಗೆ ಆಧಾರದ ಮೇಲೆ 3 ರಿಂದ 5 ವರ್ಷ ಸೇವೆ ಸಲ್ಲಿಸಿರುವ ವೈದ್ಯರನ್ನು ಖಾಯಂಗೊಳಿಸುವ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ತಾಲೂಕು ಮಟ್ಟದಲ್ಲಿ ಸಂಘ-ಸಂಸ್ಥೆಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ವೈದ್ಯರು ನಿರಂತರ ಸಂಪರ್ಕದಲ್ಲಿದ್ದು, ಆಸ್ಪತ್ರೆಗಳಿಗೆ ಅಗತ್ಯವಿರುವ ಸೌಲಭ್ಯಗಳನ್ನು ಪಡೆಯಲು ನಾಯಕತ್ವ ವಹಿಸಬೇಕು. ಆಸ್ಪತ್ರೆಗಳ ಸ್ವಚ್ಛತೆ, ಪೇಂಟಿಂಗ್ ಸೇರಿದಂತೆ ಸಣ್ಣಪುಟ್ಟ ಅಗತ್ಯಗಳಿಗೆ ಸ್ಥಳೀಯ ಸಂಘ-ಸಂಸ್ಥೆಗಳು, ದಾನಿಗಳು ಹಾಗೂ ಕಾಲೇಜುಗಳ ಎನ್.ಸಿ.ಸಿ ತಂಡಗಳ ಸಹಕಾರ ಪಡೆಯಬೇಕು. ವೈದ್ಯರು ತಮ್ಮ ವೃತ್ತಿಯ ಜೊತೆಗೆ ನಿರ್ವಹಣಾ ಕೌಶಲ್ಯಕ್ಕೂ ಹೆಚ್ಚಿನ ಒತ್ತು ನೀಡಬೇಕು. ವೈದ್ಯರು ಹಾಗೂ ಸಿಬ್ಬಂದಿ ತಂಡವಾಗಿ, ಕುಟುಂಬದ ರೀತಿಯಲ್ಲಿ ಪರಸ್ಪರ ಸಹಕಾರದಿಂದ ಕೆಲಸ ಮಾಡಿದಾಗ ಮಾತ್ರ ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆ ನೀಡಲು ಸಾಧ್ಯ ಎಂದು ತಿಳಿಸಿದರು.
ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಉತ್ತಮ ಪ್ರಾಥಮಿಕ ಚಿಕಿತ್ಸೆ ನೀಡಿ, ಅಗತ್ಯವಿರುವ ರೋಗಿಗಳನ್ನು 108 ಆಂಬುಲೆನ್ಸ್ ಮೂಲಕ 20–30 ನಿಮಿಷಗಳಲ್ಲಿ ತಾಲೂಕು ಆಸ್ಪತ್ರೆಗೆ ತಲುಪಿಸುವ ವ್ಯವಸ್ಥೆ ಕಲ್ಪಿಸಬೇಕು. ತಾಲೂಕು ಆಸ್ಪತ್ರೆಗಳಲ್ಲೇ ಮರಣೋತ್ತರ ಪರೀಕ್ಷೆ ಸೇರಿದಂತೆ ಪ್ರಮುಖ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸಿ, ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳನ್ನು ಸುಸಜ್ಜಿತಗೊಳಿಸಬೇಕು ಎಂದು ಅವರು ಹೇಳಿದರು.
ಜಿಲ್ಲೆಯ ಸರ್ಕಾರಿ ಆರೋಗ್ಯ ವ್ಯವಸ್ಥೆಯಲ್ಲಿ ಬಹುತೇಕ ಹುದ್ದೆಗಳು ಭರ್ತಿಯಾಗಿದ್ದು, ಕೆಲವೆಡೆ ಮಾತ್ರ ಎಂ.ಬಿ.ಬಿ.ಎಸ್ ವೈದ್ಯರ ಕೊರತೆ ಇದೆ. ಈ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಲು ಈಗಾಗಲೇ ಆದೇಶ ನೀಡಲಾಗಿದೆ. ತಾಲೂಕು ಆಸ್ಪತ್ರೆಯಲ್ಲಿನ ಡಯಾಲಿಸಿಸ್ ಕೊರತೆಯನ್ನೂ ತಕ್ಷಣ ಸರಿಪಡಿಸಲಾಗುವುದು. ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಾಮಥ್ರ್ಯ ವಿಸ್ತರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಎಲ್ಲಾ ಅಗತ್ಯ ಸೌಲಭ್ಯಗಳೊಂದಿಗೆ ಹೊಸ ಆಸ್ಪತ್ರೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುತ್ತಿದೆ ಎಂದು ಅವರು ಹೇಳಿದರು. ನಕಲಿ ವೈದ್ಯರು ಪತ್ತೆಯಾದರೆ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ನಕಲಿ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಸಂಬಂಧಪಟ್ಟ ಡಿಎಚ್‍ಒ ಮತ್ತು ಟಿಎಚ್‍ಒಗಳ ನಿರ್ಲಕ್ಷ್ಯ ಕಂಡುಬಂದರೆ ಅವರ ಮೇಲೂ ಕ್ರಮ ಕೈಗೊಳ್ಳುವ ಕುರಿತು ಶೀಘ್ರ ಆದೇಶ ಹೊರಡಿಸಲಾಗುವುದು ಎಂದು ಅವರು ತಿಳಿಸಿದರು.
ಧಾರವಾಡ ಶಾಸಕರಾದ ವಿನಯ ಕುಲಕರ್ಣಿ, ಹುಬ್ಬಳ್ಳಿ-ಧಾರವಾಡ ಪೂರ್ವ ಶಾಸಕರಾದ ಪ್ರಸಾದ ಅಬ್ಬಯ್ಯ, ನವಲಗುಂದ ವಿಧಾನಸಭಾ ಕ್ಷೇತ್ರದ ಶಾಸಕರಾದ ಎನ್.ಎಚ್.ಕೋನರೆಡ್ಡಿ ಅವರು ಮಾತನಾಡಿದರು.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ:
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಪ್ ಇಲಾಖೆ ಸಚಿವರಾದ ಯು. ಟಿ. ಖಾದರ್ ಫರೀದ್ ಶಾಸಕರು ಸಭೆಯಲ್ಲಿ ಮಾತನಾಡಿ, ಶಿಕ್ಷಕರಿಗೆ ಶೀಘ್ರದಲ್ಲೇ 15 ದಿನಗಳ ಕಠಿಣ ತರಬೇತಿ ಆಯೋಜಿಸಲಾಗುವುದು. ದೈಹಿಕ ಶಿಕ್ಷಕರು ದೈಹಿಕವಾಗಿ ಸದೃಢ ಮತ್ತು ಚಟುವಟಿಕೆಯಿಂದ ಇದ್ದರೆ, ಶಾಲೆಯ ಶೇ. 50 ರಷ್ಟು ವಾತಾವರಣ ಮತ್ತು ಮಕ್ಕಳು ಸರಿಯಾದ ದಾರಿಯಲ್ಲಿ ಇರುತ್ತಾರೆ. ವಿದ್ಯಾರ್ಥಿಗಳಲ್ಲಿ ಕೇವಲ ಕ್ರೀಡೆ ಮಾತ್ರವಲ್ಲದೆ, ಅವರನ್ನು ನಿರ್ವಹಿಸುವ ಮತ್ತು ಅವರ ಪ್ರತಿಭೆಯನ್ನು ಗುರುತಿಸುವ ಕೌಶಲ್ಯಗಳನ್ನು ಶಿಕ್ಷಕರು ಬೆಳೆಸಿಕೊಳ್ಳಬೇಕು. ಪ್ರತಿಯೊಂದು ಶಾಲೆಯಲ್ಲೂ ಫುಟ್‍ಬಾಲ್, ಕ್ರಿಕೆಟ್, ಹಾಕಿ, ಕಬಡ್ಡಿ, ಖೋ-ಖೋ ಮುಂತಾದ ತಂಡಗಳನ್ನು ಕಡ್ಡಾಯವಾಗಿ ರಚಿಸಬೇಕು ಎಂದು ಅವರು ಹೇಳಿದರು.
ಶಿಕ್ಷಕರು ಶಾಲಾ ಮಟ್ಟದಿಂದ ಅತ್ಯುತ್ತಮ ಆಟಗಾರರ ತಂಡವನ್ನು ಆಯ್ಕೆ ಮಾಡಿ ತಾಲೂಕು ಮಟ್ಟದ ತಂಡಗಳನ್ನು ರಚಿಸಬೇಕು. ತಾಲೂಕು ಮಟ್ಟದಿಂದ ಆಯ್ಕೆಯಾದವರನ್ನು ಸೇರಿಸಿ ಜಿಲ್ಲಾ ಮಟ್ಟದ ತಂಡ ಹಾಗೂ ಕೊನೆಗೆ ರಾಜ್ಯ ಮಟ್ಟದ ಪ್ರತಿಭಾವಂತ ತಂಡವನ್ನು ಸಿದ್ಧಪಡಿಸಬೇಕು. ಸರ್ಕಾರಿ ಹಾಗೂ ಅಲ್ಪಸಂಖ್ಯಾತರ ಇಲಾಖೆ ಶಾಲೆಗಳಲ್ಲಿ ಉತ್ತಮ ಪಥ ಸಂಚಲನ ತಂಡವನ್ನು ಬೆಳೆಸಬೇಕು. ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವದಂತಹ ದೊಡ್ಡ ಸಮಾರಂಭಗಳಲ್ಲಿ ನಮ್ಮ ಶಾಲಾ ಮಕ್ಕಳು ಭಾಗವಹಿಸಿ ಗೌರವ ತರಬೇಕು. ಖಾಸಗಿ ಶಾಲೆಗಳ ಮಾದರಿಯಲ್ಲಿಯೇ ಪ್ರತಿಯೊಂದು ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಅತ್ಯುತ್ತಮ ಶಾಲಾ ಬ್ಯಾಂಡ್ ತಂಡವನ್ನು ರಚಿಸಬೇಕು. ಅದಕ್ಕೆ ಬೇಕಾದ ಆರ್ಥಿಕ ನೆರವು ಮತ್ತು ಉಪಕರಣಗಳನ್ನು ಸರ್ಕಾರ ನೀಡಲಿದೆ ಎಂದು ಅವರು ಹೇಳಿದರು.
ತಾಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಸಾಂಸ್ಕೃತಿಕ ಮತ್ತು ಪ್ರತಿಭಾ ಸ್ಪರ್ಧೆಗಳನ್ನು ಆಯೋಜಿಸಿ, ಮಕ್ಕಳ ಹಾಗೂ ಸಿಬ್ಬಂದಿಯ ಅಡಗಿರುವ ಪ್ರತಿಭೆಗೆ ವೇದಿಕೆ ಕಲ್ಪಿಸಬೇಕು. ಮಕ್ಕಳು ಕೇವಲ ತರಗತಿಯ ಒಳಗೆ ಮಾತ್ರವಲ್ಲ, ಹೊರಗಿನ ಸಮಾಜದಲ್ಲೂ ಚುರುಕಾಗಿ ಮತ್ತು ಜಾಣರಾಗಿ ಇರಬೇಕು. ಶಾಲಾ ಹಂತದಲ್ಲೇ ಪ್ರತಿಭೆಯನ್ನು ಗುರುತಿಸಿ, ಅಲ್ಪಸಂಖ್ಯಾತರ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಹೆಮ್ಮೆ ತರುವ ರೀತಿಯಲ್ಲಿ ಬೆಳೆಸಬೇಕು. ಈ ಯೋಜನೆಗಳಿಗೆ ಹೆಚ್ಚುವರಿ ಶ್ರಮ ಮತ್ತು ಕೆಲಸದ ಅಗತ್ಯವಿದೆ ಎಂದು ತಿಳಿಸಿದರು.
ಸಭೆಯಲ್ಲಿ ಯಾಸ್ಮಿನ್ ಬೇಗಂ ವಾಲಿಕಾರ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಯಮ ಹಾಗೂ ಸೇವಾ ಮನೋಭಾವವನ್ನು ಮೂಡಿಸುವ ಉದ್ದೇಶದಿಂದ ಸೌಟ್ಸ್ ಮತ್ತು ಗೈಡ್ಸ್, ಎನ್.ಸಿ.ಸಿ ತರಬೇತಿ ನೀಡಬೇಕು. ಇಂದಿನ ಕಾಲಘಟ್ಟದಲ್ಲಿ ಮಕ್ಕಳು ದಾರಿ ತಪ್ಪುವ ಸಾಧ್ಯತೆಗಳಿದ್ದು, ಅವರಲ್ಲಿ ಹಿರಿಯರು-ಕಿರಿಯರು ಎಂಬ ಗೌರವ, ನಮ್ಮ ಸಂಸ್ಕøತಿ ಮತ್ತು ಸಮಾಜ ಸೇವೆಯ ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿದೆ. ನಮ್ಮ ಶಾಲಾ-ವಸತಿ ನಿಲಯಗಳ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಲು ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಎನ್.ಸಿ.ಸಿ ಯ ಶಿಸ್ತು ಮತ್ತು ತರಬೇತಿ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಅಧಿಕಾರಿಗಳು ಇಲಾಖೆಯ ದೈಹಿಕ ಶಿಕ್ಷಣ ಶಿಕ್ಷಕರಿಗೆ ವಿಶೇಷ ತರಬೇತಿ ನೀಡಲಿದ್ದಾರೆ. ತರಬೇತಿ ಪಡೆದ ಶಿಕ್ಷಕರು ಮುಂದೆ ಶಾಲೆ ಮತ್ತು ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಶಿಸ್ತು ಹಾಗೂ ಸಂಯಮದ ತರಬೇತಿಯನ್ನು ತಲುಪಿಸಬೇಕು. ಈ ಯೋಜನೆಗೆ ಸ್ಕೌಟ್ಸ್ ಮತು ಗೈಡ್ಸ್ ಹಾಗೂ ಎನ್.ಸಿ.ಸಿ ಇಲಾಖೆಯ ಅಧಿಕಾರಿಗಳು ಸಂಪೂರ್ಣ ಸಹಕಾರ ನೀಡಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಪೂರ್ಣಿಮಾ ಚೂರಿ ಉಪಸ್ಥಿತರಿದ್ದರು. ಸಭೆಯಲ್ಲಿ ಅಲ್ಪಸಂಖ್ಯಾತರ ವಸತಿ ಶಾಲೆಯ ಅಧಿಕಾರಿಗಳು, ಸೌಟ್ಸ್ ಮತ್ತು ಗೈಡ್ಸ್, ಎನ್.ಸಿ.ಸಿಯ ಅಧಿಕಾರಿಗಳು, ಶಿಕ್ಷಕರು, ಸಿಬ್ಬಂದಿಗಳು ಭಾಗವಹಿಸಿದ್ದರು.

