ಬೆಂಗಳೂರು: ರಾಜ್ಯ ಸರ್ಕಾರಿ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವ ಸಾವಿರಾರು ದಿನಗೂಲಿ ನೌಕರರಿಗೆ ಸರ್ಕಾರವು ಸಿಹಿಸುದ್ದಿ ನೀಡಿದೆ. ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರಿಗೆ ಮಾತ್ರ ಸೀಮಿತವಾಗಿದ್ದ 5 ಲಕ್ಷ ರೂಪಾಯಿ ವರೆಗಿನ ನಗದು ರಹಿತ ಆರೋಗ್ಯ ವಿಮಾ ಯೋಜನೆಯನ್ನು (Cashless Health Scheme) ಈಗ ಅರ್ಹ ದಿನಗೂಲಿ ನೌಕರರಿಗೂ ವಿಸ್ತರಿಸಿ ಅಧಿಕೃತ ಆದೇಶ ಹೊರಡಿಸಲಾಗಿದೆ.
ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅರ್ಹ ದಿನಗೂಲಿ ನೌಕರರು ಮತ್ತು ಅವರ ಕುಟುಂಬದ ಅವಲಂಬಿತರು ಈ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ.ವಾರ್ಷಿಕವಾಗಿ ಪ್ರತಿ ಕುಟುಂಬಕ್ಕೆ 5 ಲಕ್ಷ ರೂಪಾಯಿ ವರೆಗೆ ನಗದು ರಹಿತ (Cashless) ವೈದ್ಯಕೀಯ ಚಿಕಿತ್ಸೆ ಲಭ್ಯವಿರುತ್ತದೆ.ಗುತ್ತಿಗೆ ನೌಕರರಂತೆ ತಮಗೂ ಈ ಸೌಲಭ್ಯ ನೀಡಬೇಕೆಂದು ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಸಂಘವು ಮನವಿ ಸಲ್ಲಿಸಿತ್ತು. ಇದನ್ನು ಪುರಸ್ಕರಿಸಿದ ಸರ್ಕಾರ, ಮಾರ್ಚ್ 31ರಂದು ಈ ಐತಿಹಾಸಿಕ ಆದೇಶ ಹೊರಡಿಸಿದೆ.ಈ ಯೋಜನೆಯಡಿ ನೌಕರರಿಂದ ನಿರ್ದಿಷ್ಟ ಮಾಸಿಕ ವಂತಿಗೆಯನ್ನು ಪಡೆಯಲಾಗುತ್ತದೆ ಮತ್ತು ಉಳಿದ ಮೊತ್ತವನ್ನು ಸರ್ಕಾರವೇ ಭರಿಸಲಿದೆ. ಈ ನಿರ್ಧಾರದಿಂದಾಗಿ ರಾಜ್ಯದಾದ್ಯಂತ ಇರುವ ಸಾವಿರಾರು ದಿನಗೂಲಿ ನೌಕರರ ಕುಟುಂಬಗಳಿಗೆ ಆರೋಗ್ಯ ತುರ್ತು ಸಂದರ್ಭದಲ್ಲಿ ದೊಡ್ಡ ಮಟ್ಟದ ಆರ್ಥಿಕ ಭರವಸೆ ಸಿಕ್ಕಂತಾಗಿದೆ.
ಪ್ರಸ್ತಾವನೆ: ಮೇಲೆ ಓದಲಾದ ಕ್ರಮ ಸಂಖ್ಯೆ (1)ರ ಆದೇಶದಲ್ಲಿ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಗುತ್ತಿಗೆ/ಹೊರಗುತ್ತಿಗೆ ಹಾಗೂ ಗೌರವಧನದ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ 3 ಲಕ್ಷ ಸಿಬ್ಬಂದಿಗಳು ಮತ್ತು ಅವರ ಅವಲಂಬಿತರಿಗೆ ನಗದು ರಹಿತ ಆರೋಗ್ಯ ಭರವಸೆ ಯೋಜನೆಯನ್ನು ಮಾರ್ಗಸೂಚಿಗಳೊಂದಿಗೆ ಅನುಷ್ಠಾನಗೊಳಿಸುವ ಸಂಬಂಧ ನೌಕರರಿಂದ ಮಾಸಿಕ ಕೊಡಿಗೆ ಮತ್ತು ಬಾಕಿ ಉಳಿದ ಹಣವನ್ನು ರಾಜ್ಯ ಖಜಾನೆಯಿಂದ ಪಾವತಿಸಲು ಅನುಮೋದನೆ ನೀಡಿ ಆದೇಶಿಸಲಾಗಿರುತ್ತದೆ.
ಮೇಲೆ ಓದಲಾದ ಕ್ರಮ ಸಂಖ್ಯೆ (2)ರ ಮನವಿಯಲ್ಲಿ, ಕರ್ನಾಟಕ ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಸಂಘದವರು, ಗುತ್ತಿಗೆ/ಹೊರಗುತ್ತಿಗೆ ನೌಕರರಿಗೆ ನೀಡಲಾದ 5 ಲಕ್ಷ ರೂ. ವರೆಗಿನ ನಗದು ರಹಿತ ಆರೋಗ್ಯ ಯೋಜನೆಯನ್ನು ಅರ್ಹ ದಿನಗೂಲಿ ನೌಕರರಿಗೂ ಸಹ ವಿಸ್ತರಿಸುವಂತೆ ಕೋರಿರುತ್ತಾರೆ.
ಸರ್ಕಾರವು ದಿನಾಂಕ: 24.06.2025ರ ಆದೇಶದ ಉದ್ದೇಶವು ಎಲ್ಲಾ ತಾತ್ಕಾಲಿಕ ಉದ್ಯೋಗಿಗಳಿಗೆ ವಾರ್ಷಿಕ ರೂ. 5,00,000/- ಗಳವರೆಗೆ ಆರೋಗ್ಯ ವಿಮಾ ಸೌಲಭ್ಯವನ್ನು ವಿಸ್ತರಿಸುವುದಾಗಿರುವುದರಿಂದ, ಸದರಿ ದಿನಗೂಲಿ ನೌಕರರಿಗೂ ಸಹ ಆರೋಗ್ಯ ವಿಮಾ ಸೌಲಭ್ಯವನ್ನು ವಿಸ್ತರಿಸುವ ಸಂಬಂಧ ಈ ಕೆಳಕಂಡಂತೆ ಆದೇಶಿಸಿದೆ.
ಸರ್ಕಾರದ ಆದೇಶ ಸಂಖ್ಯೆ: ಆಕುಕ 36 ಸಿಜಿಇ 2026, ಬೆಂಗಳೂರು, ದಿನಾಂಕ: 31.03.2026
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಸರ್ಕಾರದ ಆದೇಶ ಸಂಖ್ಯೆ: ಆಕುಕ 324 ಸಿಜಿಇ 2025, ದಿನಾಂಕ: 24.06.2025ರನ್ವಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಗುತ್ತಿಗೆ, ಹೊರಗುತ್ತಿಗೆ ಹಾಗೂ ಗೌರವಧನದ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳು ಮತ್ತು ಅವರ ಅವಲಂಬಿತರಿಗೆ ಜಾರಿಗೊಳಿಸಿರುವ ನಗದು ರಹಿತ ಆರೋಗ್ಯ ಭರವಸೆ ಯೋಜನೆಯ ಸೌಲಭ್ಯಗಳನ್ನು ದಿನಗೂಲಿ ನೌಕರರು ಮತ್ತು ಅವರ ಅವಲಂಬಿತರಿಗೂ ಸಹ ವಿಸ್ತರಿಸಿ ಆದೇಶಿಸಲಾಗಿದೆ.



