ಚಿನ್ನದ ದರವು ದಿನದಿಂದ ದಿನಕ್ಕೆ ಹೊಸ ದಾಖಲೆಗಳನ್ನು ನಿರ್ಮಿಸುತ್ತಿದೆ. ಆದರೆ ಈ ಏರಿಕೆಯ ಹಿಂದೆ ದೊಡ್ಡ ಮಟ್ಟದ ವಂಚನೆ ಅಥವಾ ಮಾರುಕಟ್ಟೆಯ ಮ್ಯಾನಿಪ್ಯುಲೇಷನ್ ಇರುವ ಸಾಧ್ಯತೆ ಇದೆ ಎಂದು ಆರ್ಥಿಕ ತಜ್ಞರು ಎಚ್ಚರಿಸಿದ್ದಾರೆ. ಸಾಮಾನ್ಯ ಜನರು ಈ ಬೆಲೆ ಏರಿಕೆಯ ಬಲೆಗೆ ಬೀಳದಂತೆ ಅವರು ಸೂಚನೆ ನೀಡಿದ್ದಾರೆ.
ಹೌದು. ಕಳೆದ ಕೆಲವು ದಿನಗಳಿಂದ ಗಗನಕ್ಕೇರುತ್ತಿದ್ದ ಚಿನ್ನದ ಬೆಲೆಯಲ್ಲಿ ಈಗ ದೊಡ್ಡ ಮಟ್ಟದ ಬದಲಾವಣೆಗಳು ಕಂಡುಬರುತ್ತಿವೆ. ಜಾಗತಿಕ ಮಾರುಕಟ್ಟೆಯ ಅನಿಶ್ಚಿತತೆ ಮತ್ತು ಆರ್ಥಿಕ ಬದಲಾವಣೆಗಳಿಂದಾಗಿ ಬಂಗಾರದ ದರವು ಏಕಾಏಕಿ ಕುಸಿಯುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿದೆ.
ಹೂಡಿಕೆದಾರರು ಲಾಭಾಂಶ ಪಡೆಯಲು ಚಿನ್ನವನ್ನು ಮಾರಾಟ ಮಾಡುತ್ತಿರುವುದು (Profit Booking) ಬೆಲೆ ಇಳಿಕೆಗೆ ಪ್ರಮುಖ ಕಾರಣವಾಗಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಬೆಲೆ ಇನ್ನೂ ಕುಸಿಯಬಹುದು ಎಂದು ಅಂದಾಜಿಸಲಾಗಿದೆ.
ಇದು ನಿಜವಾದ ಬೇಡಿಕೆಯೇ ಅಥವಾ ಕುತಂತ್ರವೇ?
1) ಅಸಾಧಾರಣ ಏರಿಕೆ – ಇದು ‘ಬಬಲ್’?: 2025ರಲ್ಲಿ ಚಿನ್ನದ ದರವು ಬರೋಬ್ಬರಿ 60 ಪ್ರತಿಶತ ಏರಿಕೆಯಾಗಿದೆ. ಇದು ಸಾಮಾನ್ಯ ಏರಿಕೆಯಲ್ಲ. ಇಂತಹ ಅತಿಯಾದ ಏರಿಕೆಯನ್ನು ತಜ್ಞರು ‘ಬಬಲ್’ (ಗುಳ್ಳೆ) ಎಂದು ಕರೆಯುತ್ತಾರೆ. ಈ ಗುಳ್ಳೆ ಯಾವುದೇ ಕ್ಷಣದಲ್ಲಿ ಒಡೆದು ದರವು ಪಾತಾಳಕ್ಕೆ ಕುಸಿಯಬಹುದು.
2)ವಿದೇಶಿ ಸಂಸ್ಥೆಗಳ ‘ರಿಪೋರ್ಟ್’ ಮಾಯಾಜಾಲ: ಮಾರುಕಟ್ಟೆಯು ಗರಿಷ್ಠ ಮಟ್ಟದಲ್ಲಿದ್ದಾಗ, ಗೋಲ್ಡ್ಮನ್ ಸ್ಯಾಚ್ಸ್ ಮತ್ತು ಜೆ.ಪಿ. ಮಾರ್ಗನ್ನಂತಹ ದೊಡ್ಡ ಸಂಸ್ಥೆಗಳು “ಚಿನ್ನದ ಬೆಲೆ ಇನ್ನೂ ಏರಲಿದೆ” ಎಂದು ಪಾಸಿಟಿವ್ ವರದಿಗಳನ್ನು ನೀಡುತ್ತವೆ. ಇವುಗಳನ್ನು ನಂಬಿ ಸಾಮಾನ್ಯ ಜನರು ಚಿನ್ನ ಖರೀದಿಸಲು ಮುಗಿಬೀಳುತ್ತಾರೆ. ಆದರೆ ಅದೇ ಸಮಯದಲ್ಲಿ ಈ ದೊಡ್ಡ ಸಂಸ್ಥೆಗಳು ತಮ್ಮ ಬಳಿ ಇರುವ ಚಿನ್ನವನ್ನು ಮಾರಿ ಲಾಭ ಮಾಡಿಕೊಳ್ಳುತ್ತವೆ. ಅಂತಿಮವಾಗಿ ಬೆಲೆ ಕುಸಿದಾಗ ಸಾಮಾನ್ಯ ಜನರು ನಷ್ಟ ಅನುಭವಿಸುತ್ತಾರೆ.
3) ಸ್ಪೂಫಿಂಗ್’ ಎಂಬ ವಂಚನೆಯ ತಂತ್ರ: ಬಂಗಾರದ ಬೆಲೆಯನ್ನು ಕೃತಕವಾಗಿ ಹೆಚ್ಚಿಸಲು ಕೆಲವು ಬ್ಯಾಂಕ್ಗಳು ‘ಸ್ಪೂಫಿಂಗ್’ (Spoofing) ಎಂಬ ತಂತ್ರ ಬಳಸುತ್ತವೆ ಎಂಬ ಆರೋಪವಿದೆ. ಅಂದರೆ, ಚಿನ್ನವನ್ನು ಖರೀದಿಸುವ ಉದ್ದೇಶವಿಲ್ಲದಿದ್ದರೂ ಲಕ್ಷಾಂತರ ‘ಫೇಕ್ ಆರ್ಡರ್’ಗಳನ್ನು ಹಾಕಿ ದರ ಹೆಚ್ಚಿಸುವುದು, ನಂತರ ಆ ಆರ್ಡರ್ಗಳನ್ನು ಕ್ಯಾನ್ಸಲ್ ಮಾಡುವುದು. ಈ ಹಿಂದೆ ಜೆ.ಪಿ. ಮಾರ್ಗನ್ ಬ್ಯಾಂಕ್ ಇಂತಹ ಕೆಲಸ ಮಾಡಿ ಬರೋಬ್ಬರಿ ₹ 7,600 ಕೋಟಿ ದಂಡ ಪಾವತಿಸಿದೆ.
4) ಇತಿಹಾಸ ಮರುಕಳಿಸುತ್ತದೆಯೇ?
• 1980: ಚಿನ್ನದ ಬೆಲೆ ಶಿಖರಕ್ಕೇರಿ ನಂತರ 57% ಕುಸಿಯಿತು. ಆ ಹಳೆಯ ದರ ಮತ್ತೆ ಬರಲು 25 ವರ್ಷ ಬೇಕಾಯಿತು.
• 2011: ದರ ಏರಿಕೆಯ ನಂತರ 45% ಕುಸಿತ ಕಂಡಿತು. ಚೇತರಿಸಿಕೊಳ್ಳಲು 4 ವರ್ಷ ತಗುಲಿತು.
• 2026: ಈಗಲೂ ಅದೇ ಪರಿಸ್ಥಿತಿ ಮರುಕಳಿಸುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಎಚ್ಚರಿಸಿದ್ದಾರೆ.
ರಿಟೇಲ್ ಮಾರುಕಟ್ಟೆಯಲ್ಲಿ ಕುಸಿತ: ಪ್ರಸ್ತುತ ಮದುವೆ ಸೀಸನ್ ಇದ್ದರೂ ಸಹ, ಬೆಲೆ ಏರಿಕೆಯಿಂದಾಗಿ ಜನ ಸಾಮಾನ್ಯರು ಚಿನ್ನ ಖರೀದಿಸುವುದನ್ನು ಕಡಿಮೆ ಮಾಡಿದ್ದಾರೆ. ರಿಟೇಲ್ ಮಾರುಕಟ್ಟೆಯಲ್ಲಿ ಖರೀದಿ ಕುಸಿದಿರುವುದು ಬೆಲೆ ಇಳಿಕೆಯ ಮುನ್ಸೂಚನೆಯಾಗಿದೆ (Danger Signal).
ತಜ್ಞರ ಸಲಹೆ: ಚಿನ್ನದ ದರಗಳು ಅತ್ಯಂತ ವೇಗವಾಗಿ ಬದಲಾಗುತ್ತಿರುವುದರಿಂದ, ಹೂಡಿಕೆ ಮಾಡುವ ಮುನ್ನ ಮಾರುಕಟ್ಟೆಯ ಸ್ಥಿತಿಗತಿಗಳನ್ನು ಸರಿಯಾಗಿ ಗಮನಿಸಿ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ.

