ಶ್ರೀನಗರ- ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ನಾಪತ್ತೆಯಾಗಿದ್ದ ಇಬ್ಬರು ವಿಶೇಷ ಪೊಲೀಸ್ ಅಧಿಕಾರಿಗಳ (ಎಸ್ಪಿಒ) ಗುಂಡೇಟಿನಿಂದ ಛಿದ್ರಗೊಂಡ ಮೃತದೇಹಗಳು ಪತ್ತೆಯಾಗಿವೆ. ರಿಷಿಪಾಲ್ ಸಿಂಗ್ (45) ಮತ್ತು ಬಾಬಿ ಚಂದ್ (57) ಅವರು ಬುಧವಾರ ಅರಣ್ಯ ಪ್ರದೇಶದಲ್ಲಿ ಗುಂಡಿನ ದಾಳಿ ನಡೆದ ಬಳಿಕ ನಾಪತ್ತೆಯಾಗಿದ್ದರು.
ಡೆಹರ್ನಾ–ಡಚನ್ ಅರಣ್ಯ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ ಭದ್ರತಾ ಪಡೆಗಳು ಇಬ್ಬರ ಮೃತದೇಹಗಳನ್ನು ಪತ್ತೆಹಚ್ಚಿವೆ. ಇಬ್ಬರಿಗೂ ಹಲವು ಬಾರಿ ಗುಂಡು ಹಾರಿಸಲಾಗಿದ್ದು, ಅವರ ಸೇವಾ ಶಸ್ತ್ರಾಸ್ತ್ರಗಳು ಕೂಡ ಕಾಣೆಯಾಗಿವೆ ಎಂದು ಮೂಲಗಳು ತಿಳಿಸಿವೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಇಬ್ಬರು ಎಸ್ಪಿಒಗಳು ಸೇನೆಯ 17 ರಾಷ್ಟ್ರೀಯ ರೈಫಲ್ಸ್ ತಂಡವನ್ನು ಬಿಡುಗಡೆ ಮಾಡಲು ತೆರಳುತ್ತಿದ್ದಾಗ ದಾಳಿ ನಡೆದಿತ್ತು. ಘಟನೆಯ ಬಳಿಕ ಭದ್ರತಾ ಪಡೆಗಳು ಪ್ರದೇಶವನ್ನು ಸುತ್ತುವರಿದು ಬೃಹತ್ ಶೋಧ ಕಾರ್ಯಾಚರಣೆ ಆರಂಭಿಸಿವೆ.
ದಾಳಿಯಲ್ಲಿ ಭಯೋತ್ಪಾದಕರ ಕೈವಾಡದ ಸಾಧ್ಯತೆಯನ್ನು ತನಿಖಾ ಸಂಸ್ಥೆಗಳು ಪರಿಶೀಲಿಸುತ್ತಿದ್ದು, ಕನಿಷ್ಠ ಮೂವರು ಉಗ್ರರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಅವರಲ್ಲಿ ಇಬ್ಬರು ವಿದೇಶಿ ಉಗ್ರರಾಗಿರಬಹುದು ಎಂದು ಶಂಕಿಸಲಾಗಿದೆ. ಲಷ್ಕರ್-ಎ-ತೊಯ್ಬಾ ಜಾಲದ ಸಂಪರ್ಕದ ಬಗ್ಗೆಯೂ ತನಿಖೆ ನಡೆಯುತ್ತಿದೆ.
ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಶಂಕಿತರನ್ನು ಪತ್ತೆಹಚ್ಚಲು ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ. ಮೂವರು ಶಂಕಿತ ಭೂಗತ ಕಾರ್ಯಕರ್ತರನ್ನು ವಿಚಾರಣೆ ನಡೆಸಲಾಗುತ್ತಿದೆ. ಪ್ರದೇಶದಲ್ಲಿ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.

