ಬೆಂಗಳೂರು- ದೀಪಾವಳಿ ಹಬ್ಬದ ಆಚರಣೆ ಮುಗಿದ ಬಳಿಕ ಬೆಂಗಳೂರಿನ ಹಲವು ರಸ್ತೆ ಬದಿಗಳು ಹಾಗೂ ಪ್ರಮುಖ ಪ್ರದೇಶಗಳಲ್ಲಿ ಕಸದ ರಾಶಿಗಳು ಸಂಗ್ರಹವಾಗಿದ್ದು, ನಗರ ಸ್ವಚ್ಛತೆ ಬಗ್ಗೆ ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಿಬಿಎ (GBA) ಹಲವು ಸ್ವಚ್ಛತಾ ಅಭಿಯಾನಗಳನ್ನು ನಡೆಸಿದ್ದರೂ, ಕಳೆದ ಎರಡು ದಿನಗಳಲ್ಲಿ ಕಸದ ಪ್ರಮಾಣ ಮತ್ತಷ್ಟು ಹೆಚ್ಚಾಗಿದೆ ಎಂದು ಅಧಿಕಾರಿಗಳೇ ಒಪ್ಪಿಕೊಂಡಿದ್ದಾರೆ.
ಹಬ್ಬದ ಸಂದರ್ಭದಲ್ಲಿ ಮನೆಗಳಲ್ಲಿ ನಡೆದ ಪೂಜೆ, ಹೂವು-ಹಣ್ಣು, ಪೂಜಾ ಸಾಮಗ್ರಿಗಳು ಹಾಗೂ ಪಟಾಕಿಗಳಿಂದ ತ್ಯಾಜ್ಯ ಪ್ರಮಾಣ ಹೆಚ್ಚಾಗಿದೆ. ಇದರ ಜೊತೆಗೆ, ಹಬ್ಬಕ್ಕಾಗಿ ತಂದ ಸರಕುಗಳು ಸಂಪೂರ್ಣ ಮಾರಾಟವಾಗದ ಹಿನ್ನೆಲೆಯಲ್ಲಿ ಕೆಲವು ವ್ಯಾಪಾರಿಗಳು ಉಳಿದ ವಸ್ತುಗಳನ್ನು ರಸ್ತೆ ಬದಿಯಲ್ಲೇ ಬಿಟ್ಟು ಹೋಗಿರುವುದರಿಂದಲೂ ಕಸದ ರಾಶಿಗಳು ಹೆಚ್ಚಾಗಿವೆ.
ಸೆಂಟ್ರಲ್ ಬೆಂಗಳೂರಿನ ನಿವಾಸಿ ಕಮಲ್ ಕೆ. ಮಾತನಾಡಿ, ರಸ್ತೆ ಬದಿಗಳಲ್ಲಿ ಬೂದು ಕುಂಬಳಕಾಯಿ, ಬಾಳೆ ದಿಂಡು ಸೇರಿದಂತೆ ಹಲವು ವಸ್ತುಗಳನ್ನು ಹಾಗೆಯೇ ಬಿಟ್ಟು ಹೋಗಲಾಗಿದೆ. ನಗರದ ಬಹುತೇಕ ಪ್ರತಿಯೊಂದು ಮೂಲೆಯಲ್ಲೂ ಕಸದ ರಾಶಿ ಕಂಡುಬರುತ್ತಿದ್ದು, ಶನಿವಾರದಿಂದಲೂ ಕೆಲವು ಕಡೆಗಳಲ್ಲಿ ತ್ಯಾಜ್ಯ ತೆರವುಗೊಂಡಿಲ್ಲ ಎಂದು ದೂರಿದ್ದಾರೆ.
ಹಬ್ಬದ ಅವಧಿಯಲ್ಲಿ ತ್ಯಾಜ್ಯ ಉತ್ಪಾದನೆ ಸಾಮಾನ್ಯ ದಿನಗಳಿಗಿಂತ ಸುಮಾರು 20% ಹೆಚ್ಚಾಗುತ್ತದೆ ಎಂದು ಜಿಬಿಎ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಾರುಕಟ್ಟೆ ಮತ್ತು ವಾಣಿಜ್ಯ ಪ್ರದೇಶಗಳಲ್ಲಿ ಕಸದ ಪ್ರಮಾಣ ಹೆಚ್ಚಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಿ, ಸಂಗ್ರಹವಾಗಿರುವ ತ್ಯಾಜ್ಯ ತೆರವು ಕಾರ್ಯ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ಕೆ.ಆರ್. ಮಾರುಕಟ್ಟೆಯಲ್ಲಿ 150 ಟನ್ ಕಸ ತೆರವು
ಬೆಂಗಳೂರು ಸೆಂಟ್ರಲ್ ಸಿಟಿ ಕಾರ್ಪೊರೇಷನ್ (BCCC) ವತಿಯಿಂದ ನವೆಂಬರ್ 8ರಿಂದ 11ರವರೆಗೆ ಕೆ.ಆರ್. ಮಾರುಕಟ್ಟೆ ಸುತ್ತಮುತ್ತ ವಿಶೇಷ ಸ್ವಚ್ಛತಾ ಅಭಿಯಾನ ನಡೆಸಲಾಗಿದೆ. ಈ ವೇಳೆ ಸುಮಾರು 150 ಟನ್ ತ್ಯಾಜ್ಯವನ್ನು ತೆರವುಗೊಳಿಸಲಾಗಿದೆ.
ಮಾರುಕಟ್ಟೆ ಪ್ರದೇಶದಲ್ಲಿ ಹೂವು, ಹಣ್ಣು, ತರಕಾರಿ, ಪ್ಲಾಸ್ಟಿಕ್ ಹಾಗೂ ಪೂಜಾ ಸಾಮಗ್ರಿ ಸೇರಿದಂತೆ ಹಬ್ಬಕ್ಕೆ ಸಂಬಂಧಿಸಿದ ಹೆಚ್ಚಿನ ಪ್ರಮಾಣದ ತ್ಯಾಜ್ಯ ಸಂಗ್ರಹವಾಗಿತ್ತು. ತ್ಯಾಜ್ಯವನ್ನು ತ್ವರಿತವಾಗಿ ತೆರವುಗೊಳಿಸಲು ಪ್ರತ್ಯೇಕ ತಂಡಗಳು ಹಾಗೂ ಯಂತ್ರೋಪಕರಣಗಳನ್ನು ನಿಯೋಜಿಸಲಾಗಿತ್ತು ಎಂದು BCCC ತಿಳಿಸಿದೆ.
ಇನ್ನೊಂದೆಡೆ, ಕಳೆದ ಮೂರು ದಿನಗಳಿಂದ ಮನೆಗಳಿಂದ ನಿಯಮಿತವಾಗಿ ಕಸ ಸಂಗ್ರಹಿಸುವ ವಾಹನಗಳು ಬಾರದಿರುವುದರಿಂದ ರಸ್ತೆ ಬದಿಗಳಲ್ಲಿ ಕಸದ ರಾಶಿ ಹೆಚ್ಚಾಗಿದೆ ಎಂದು ಹಲವು ನಿವಾಸಿಗಳು ಆರೋಪಿಸಿದ್ದಾರೆ.
ಉತ್ತರ ಬೆಂಗಳೂರಿನ ನಿವಾಸಿಯೊಬ್ಬರು, ಹಬ್ಬದ ವೇಳೆ ಹೂವು ಹಾಗೂ ಪೂಜಾ ಸಾಮಗ್ರಿಗಳ ತ್ಯಾಜ್ಯ ಸಾಮಾನ್ಯಕ್ಕಿಂತ ಹೆಚ್ಚಾಗುತ್ತದೆ. ಆದರೆ ಎರಡು ದಿನಗಳಾದರೂ ಕಸ ಸಂಗ್ರಹಿಸಲು ವಾಹನಗಳು ಬಾರದಿದ್ದರೆ ಸೊಳ್ಳೆ ಹಾಗೂ ಇತರ ಕೀಟಗಳ ಸಮಸ್ಯೆ ಉಂಟಾಗುತ್ತದೆ. ಇದರಿಂದ ಜನರು ಅನಿವಾರ್ಯವಾಗಿ ಅನಧಿಕೃತ ಸ್ಥಳಗಳಲ್ಲಿ ಕಸ ಹಾಕುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹೀಗಾಗಿ, ದೀಪಾವಳಿ ನಂತರದ ತ್ಯಾಜ್ಯವನ್ನು ತ್ವರಿತವಾಗಿ ತೆರವುಗೊಳಿಸುವುದರ ಜೊತೆಗೆ, ಮನೆಗಳಿಂದ ನಿಯಮಿತ ಕಸ ಸಂಗ್ರಹಣೆ ಪುನಃ ಸಮರ್ಪಕವಾಗಿ ನಡೆಯುವಂತೆ ಕ್ರಮ ಕೈಗೊಳ್ಳಬೇಕೆಂಬುದು ನಾಗರಿಕರ ಒತ್ತಾಯವಾಗಿದೆ.

