ಗೌರಿ, ಗಣೇಶ ಹಬ್ಬಕ್ಕೆ ಎಲ್ಲೆಡೆ ಸಂಭ್ರಮದ ಸಿದ್ಧತೆ ನಡೆದಿದೆ. ಜಿಲ್ಲಾಡಳಿತದ ಮಾರ್ಗಸೂಚಿ ಅನ್ವಯದಂತೆ ಗಣೇಶನ ಆಗಮನಕ್ಕೆ ಭರ್ಜರಿ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ನಡುವೆಯೂ ನಡುವೆಯೂ, ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಜನ ತಯಾರಿ ನಡೆಸಿದ್ದಾರೆ.
ಹಬ್ಬದ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಜನಸಂದಣಿ ಎಂದಿಗಿಂತ ಹೆಚ್ಚಾಗಿತ್ತು. ಹಬ್ಬಕ್ಕೆ ಬೇಕಾದ ಸಾಮಾಗ್ರಿಯನ್ನುಕೊಂಡುಕೊಳ್ಳಲು ಮಾರುಕಟ್ಟೆಯತ್ತ ಮುಖ ಮಾಡಿದ್ದರು.
ಶಿವಮೊಗ್ಗ ನಗರದ ಪ್ರಮುಖ ವ್ಯಾಪಾರ ಸ್ಥಳಗಳಾದ ಗಾಂಧಿ ಬಜಾರ್, ನೆಹರು ರಸ್ತೆ, ದುರ್ಗಿಗುಡಿ, ಸವಳಂಗ ರಸ್ತೆ, ಬಿ.ಹೆಚ್. ರಸ್ತೆಯಲ್ಲಿ ಜನ ಸಂಚಾರ ಅಧಿಕವಾಗಿತ್ತು. ಹೂ, ಹಣ್ಣು ಮತ್ತು ಪೂಜಾ ಸಾಮಗ್ರಿಗಳನ್ನು ಕೊಳ್ಳುವ ದೃಶ್ಯ ಸಾಮಾನ್ಯವಾಗಿತ್ತು. ದಿನಸಿ ಅಂಗಡಿ, ಬಟ್ಟೆ ಅಂಗಡಿಗಳಲ್ಲಿ ಭರ್ಜರಿ ವ್ಯಾಪಾರ ಕಂಡುಬಂದಿತು.
ಪ್ರತಿ ಬಡಾವಣೆಗಳಲ್ಲೂ ಗಣಪತಿ ಕೂರಿಸಲು ತಯಾರಿ ನಡೆಯುತಿತ್ತು. ಮನೆಗಳಲ್ಲೂ ಕೂಡ ಗಣೇಶ ಮತ್ತು ಗೌರಿ ಸ್ವಾಗತಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹಲವು ಆಕರ್ಷಕ ಪೆಂಡಾಲ್ ಮಂಟಪ ನಿರ್ಮಿಸಲಾಗಿದೆ. ಜೊತೆಗೆ ಚಕ್ಕಲಿ, ಕೋಡುಬಳೆ, ಕಡುಬು, ಉಂಡೆಗಳು, ಸಿಹಿ ತಿನಿಸುಗಳ ತಯಾರಿ ಕೂಡ ಭರ್ಜರಿಯಾಗಿಯೇ ನಡೆದಿದೆ.
ಹಬ್ಬದ ಹಿನ್ನೆಲೆಯಲ್ಲಿ ದೂರದ ಊರುಗಳಲ್ಲಿ ನೆಲೆಸಿರುವ ಸ್ಥಳೀಯರು ಊರಿಗೆ ಆಗಮಿಸುತ್ತಿದ್ದಾರೆ. ಹೀಗಾಗಿ ರೈಲು, ಬಸ್ ಹಾಗೂ ಖಾಸಗಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿದೆ. ಹಬ್ಬದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸ್ ಭದ್ರತೆ ಒದಗಿಸಿದೆ.
ಪೂಜೆಗೆ ಅಗತ್ಯವಾದ ಹೂವು, ಹಣ್ಣು, ಬಾಳೆ ದಿಂಡು, ಮಾವಿನ ತೋರಣ, ತೆಂಗಿನ ಕಾಯಿ ಹಾಗೂ ಇನ್ನಿತರ ವಸ್ತುಗಳನ್ನು ಗಾಂಧಿ ಬಜಾರ್, ಹೂವಿನ ಮಾರುಕಟ್ಟೆಯಲ್ಲಿ ಖರೀದಿಸಲು ಗ್ರಾಹಕರು ಮುಗಿಬಿದ್ದರು. ಹೀಗಾಗಿ ಗಾಂಧಿ ಬಜಾರ್ ಭಾಗದಲ್ಲಿ ಭಾರೀ ಜನದಟ್ಟಣೆ ಕಂಡುಬಂದಿತು. ನಗರದ ಕೆಲವು ಕಡೆ ರಸ್ತೆ ಬದಿಗಳಲ್ಲಿ ಹೂವು, ಬಾಳೆ ದಿಂಡು, ಮಾವಿನ ಸೊಪ್ಪಿನ ರಾಶಿ ರಾಶಿ ಗ್ರಾಹಕರನ್ನು ಸೆಳೆದವು. ಹಬ್ಬದ ಅಂಗವಾಗಿ ಹೂವು, ಹಣ್ಣುಗಳ ಬೆಲೆ ಗಗನಕ್ಕೇರಿದ್ದವು.
ಮಾರುಕಟ್ಟೆಯಲ್ಲಿ ಕೆ.ಜಿ ಸೇಬಿಗೆ ₹200, ಕೆ.ಜಿ ದಾಳಿಂಬೆಗೆ ₹150, ಕೆ.ಜಿ ದ್ರಾಕ್ಷಿ ಬೆಲೆ ₹200, ಕೆ.ಜಿ ಮೋಸಂಬಿಗೆ ₹80, ಕೆ.ಜಿ ಕಿತ್ತಳೆಗೆ ₹ 200, ಬಾಳೆ ಹಣ್ಣಿಗೆ ₹ 100 ದರ ನಿಗದಿ ಮಾಡಲಾಗಿತ್ತು. ವ್ಯಾಪಾರಸ್ಥರು ಎಲ್ಲ ಹಣ್ಣುಗಳನ್ನು ಕೂಡಿಸಿ ಪ್ಯಾಕೇಜ್ ರೂಪದಲ್ಲಿ ಪೂಜೆಗಾಗಿ ಸಿದ್ಧಪಡಿಸಿದ್ದ ಬುಟ್ಟಿಗೆ ₹150 ದರ ನಿಗದಿ ಮಾಡಿದ್ದರು.
ಎರಡು ಬಾಳೆ ದಿಂಡಿಗೆ ₹ 30, ಮಾವಿನ ತೋರಣಕ್ಕೆ ₹ 10 ನಿಗದಿ ಮಾಡಿದ್ದರು. ಮಲ್ಲಿಗೆ ಹೂವು ಒಂದು ಮಾರು ₹100, ಮೊಗ್ಗಿನ ಒಂದು ಹಾರಕ್ಕೆ ₹ 300, ಕೆ.ಜಿ ಚೆಂಡು ಹೂವಿನ ಬೆಲೆ ₹ 200 ಇತ್ತು. ಒಂದು ತೆಂಗಿನ ಕಾಯಿ ಬೆಲೆ ₹ 25 ಇತ್ತು. ಗೌರಿ ಗಣೇಶ ಹಬ್ಬದ ನಿಮಿತ್ತವಾಗಿ ಮಾರುಕಟ್ಟೆಯಲ್ಲಿ ಎಲ್ಲ ವಸ್ತುಗಳ ಬೆಲೆ ಏರಿಕೆ ಗ್ರಾಹಕರನ್ನು ಕಂಗಾಲು ಮಾಡಿತು.
ಇನ್ನೂ ತರಕಾರಿ ಬೆಲೆ ಕೂಡ ಅಲ್ಪ ಪ್ರಮಾಣದಲ್ಲಿ ಏರಿಕೆ ಆಗಿದೆ. ಕೆ.ಜಿ ಟೊಮೆಟೊಗೆ ₹20- 30, ಕೆ.ಜಿ ಆಲೂಗಡ್ಡೆಗೆ ₹ 40, ಹೀರೇಕಾಯಿ ಕೆ.ಜಿಗೆ ₹ 60, ಸೌತೆಕಾಯಿ ಕೆ.ಜಿಗೆ ₹ 60, ಬಿಟ್ರೂಟ್ ಕೆ.ಜಿ ₹ 50, ಕೆ.ಜಿ ಈರುಳ್ಳಿ ಬೆಲೆ ₹ 60, ಕೆ.ಜಿ ನುಗ್ಗೆಕಾಯಿ ₹ 80 ಹಾಗೂ ಸೊಪ್ಪಿನ ಕಟ್ಟು ಒಂದಕ್ಕೆ ₹ 10 ನಿಗದಿ ಮಾಡಲಾಗಿತ್ತು.
ಗೌರಿ ಮತ್ತು ಗಣಪತಿ ಮೂರ್ತಿ ಖರೀದಿಗೆ ತಾಲೂಕು ಕೇಂದ್ರಗಳಿಂದಲೂ ಜನರು ಸೈನ್ಸ್ ಫೀಲ್ಡ್, ಹಳೆ ಜೈಲು ಆವರಣಕ್ಕೆ ಆಗಮಿಸಿದ್ದರು. ಅಲಂಕಾರ, ಖಾದ್ಯ ಮತ್ತು ಪೂಜಾ ಸಾಮಗ್ರಿಗಳನ್ನು ಖರೀದಿಸಲಾಯಿತು.

