HomeKarnatakaಇಡಿ ದೂರುದಾರರ ಮಾಹಿತಿ ಸಿಎಂಗೆ ನೀಡಿದ್ದೇನೆ: ಸತೀಶ್ ಜಾರಕಿಹೊಳಿ

ಇಡಿ ದೂರುದಾರರ ಮಾಹಿತಿ ಸಿಎಂಗೆ ನೀಡಿದ್ದೇನೆ: ಸತೀಶ್ ಜಾರಕಿಹೊಳಿ

ಬೆಂಗಳೂರು- ಜಾರಿ ನಿರ್ದೇಶನಾಲಯ (ಇಡಿ) ತಮ್ಮ ವಿರುದ್ಧ ದೂರು ನೀಡಿದವರು ಯಾರು ಎಂಬ ಮಾಹಿತಿ ತಮಗೆ ತಿಳಿದಿದ್ದು, ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈಗಾಗಲೇ ಮಾಹಿತಿ ನೀಡಿರುವುದಾಗಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ವಿರುದ್ಧ ದೂರು ನೀಡಬಾರದು ಎಂದು ತಾವು ಹೇಳುತ್ತಿಲ್ಲ. ಆರೋಪ ಮಾಡಲು ಎಲ್ಲರಿಗೂ ಹಕ್ಕಿದೆ. ಆದರೆ ದೂರು ನೀಡಿದವರ ಹಿನ್ನೆಲೆ ಮತ್ತು ರಾಜಕೀಯ ನಂಟಿನ ಬಗ್ಗೆ ತಮಗೆ ಮಾಹಿತಿ ಇದೆ ಎಂದು ಹೇಳಿದರು.

ದೂರು ನೀಡಿರುವ ವ್ಯಕ್ತಿಗಳಿಗೆ ಕಾಂಗ್ರೆಸ್ ಪಕ್ಷದೊಂದಿಗೆ ನಂಟಿದೆ. ಆದರೆ ಅವರ ಮತದಾರರು ಬಿಜೆಪಿಯಲ್ಲಿದ್ದಾರೆ ಎಂಬ ಕುತೂಹಲಕಾರಿ ಹೇಳಿಕೆಯನ್ನು ಸತೀಶ್ ಜಾರಕಿಹೊಳಿ ನೀಡಿದರು. ಆದರೆ ಅವರು ಕಾಂಗ್ರೆಸ್‌ನವರೋ, ಬೇರೆ ಪಕ್ಷದವರೋ ಎಂಬುದನ್ನು ಬಹಿರಂಗಪಡಿಸುವುದಿಲ್ಲ. ಈ ವಿಚಾರವನ್ನು ಮುಖ್ಯಮಂತ್ರಿ ನೋಡಿಕೊಳ್ಳುತ್ತಾರೆ. ಹೆಸರು ಬಹಿರಂಗಪಡಿಸಿದರೆ ಅನಗತ್ಯ ಸಮಸ್ಯೆಗಳು ಎದುರಾಗಬಹುದು ಎಂದು ಅವರು ಸ್ಪಷ್ಟಪಡಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದಾಖಲೆಗಳೊಂದಿಗೆ ಉತ್ತರಿಸುವ ಭರವಸೆ

ದಾಖಲೆಗಳೊಂದಿಗೆ ಉತ್ತರಿಸುವ ಭರವಸೆ

ಸತೀಶ್ ಜಾರಕಿಹೊಳಿ ಮತ್ತು ಅವರ ಕುಟುಂಬಕ್ಕೆ ಸಂಬಂಧಿಸಿದ ಆಸ್ತಿಗಳು, ಹೂಡಿಕೆಗಳು ಹಾಗೂ ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ವಿಚಾರಗಳ ಹಿನ್ನೆಲೆಯಲ್ಲಿ ಇಡಿ ಶೋಧ ಕಾರ್ಯಾಚರಣೆ ನಡೆಸಿರುವುದು ರಾಜ್ಯ ರಾಜಕಾರಣದಲ್ಲಿ ಚರ್ಚೆಗೆ ಕಾರಣವಾಗಿದೆ.

ಇಡಿ ಕ್ರಮ ರಾಜಕೀಯ ಪ್ರೇರಿತ ಎಂದು ಕಾಂಗ್ರೆಸ್ ವಲಯದಿಂದ ಆರೋಪಗಳು ಕೇಳಿಬಂದಿದ್ದರೆ, ತನಿಖಾ ಸಂಸ್ಥೆಯ ಕ್ರಮವನ್ನು ಸಮರ್ಥಿಸಿಕೊಂಡು ಬಿಜೆಪಿ ನಾಯಕರು ಪ್ರತಿಕ್ರಿಯಿಸಿರುವುದು ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದೆ. ಈ ನಡುವೆ ಪ್ರತಿಭಟನೆ, ಆರೋಪ–ಪ್ರತ್ಯಾರೋಪಗಳು ನಡೆದಿವೆ.

ಈ ಕುರಿತು ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, ತನಿಖಾ ಸಂಸ್ಥೆ ನೋಟಿಸ್ ನೀಡಿದ ಬಳಿಕ ವಿಚಾರಣೆಗೆ ಹಾಜರಾಗಿ ಎಲ್ಲ ಪ್ರಶ್ನೆಗಳಿಗೆ ದಾಖಲೆಗಳ ಸಮೇತ ಉತ್ತರ ನೀಡುವುದಾಗಿ ಹೇಳಿದರು.

“ಅವರು ತಮ್ಮ ದಾಖಲೆಗಳನ್ನು ನೀಡುತ್ತಾರೆ. ನಾವು ನಮ್ಮ ದಾಖಲೆಗಳನ್ನು ನೀಡುತ್ತೇವೆ. ವಿಚಾರಣೆ ಮತ್ತು ಪ್ರಕ್ರಿಯೆ ನಡೆಯಲು ಇನ್ನೂ ಸಮಯವಿದೆ. ಪದೇಪದೇ ಮಾಧ್ಯಮಗಳ ಮುಂದೆ ಹೇಳಿಕೆ ನೀಡುವುದಕ್ಕಿಂತ ತನಿಖಾ ಸಂಸ್ಥೆಯ ಮುಂದೆ ಹಾಜರಾಗಿ ಸ್ಪಷ್ಟನೆ ನೀಡುವುದು ಸೂಕ್ತ.”

ಇಡಿ ಬಿಡುಗಡೆ ಮಾಡಿರುವ ಪ್ರೆಸ್‌ನೋಟ್‌ನಲ್ಲಿ ಹೂಡಿಕೆ ಮತ್ತು ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ಅಂಶಗಳನ್ನು ಉಲ್ಲೇಖಿಸಲಾಗಿದೆ. ಆದರೆ ಪ್ರಕರಣದ ಅಂತಿಮ ಸ್ವರೂಪ ಇನ್ನೂ ಸ್ಪಷ್ಟವಾಗಿಲ್ಲ ಎಂಬುದು ಸಚಿವರ ವಾದವಾಗಿದೆ.

‘ಲಂಚ ಪಡೆದ ಆರೋಪ ಅಂತಿಮವಾಗಿಲ್ಲ’

‘ಲಂಚ ಪಡೆದ ಆರೋಪ ಅಂತಿಮವಾಗಿಲ್ಲ’

ಲೋಕೋಪಯೋಗಿ ಇಲಾಖೆಯಲ್ಲಿ ಲಂಚ ಪಡೆದಿರುವ ಆರೋಪಗಳ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇಡಿ ತನ್ನ ಹೇಳಿಕೆಯಲ್ಲಿ ಅನುಮಾನಾಸ್ಪದ ಆರೋಪಗಳ ಕುರಿತು ಉಲ್ಲೇಖಿಸಿದೆ. ಹೀಗಾಗಿ ಪ್ರಕರಣ ಇನ್ನೂ ಅಂತಿಮ ಹಂತಕ್ಕೆ ಬಂದಿಲ್ಲ ಎಂದು ಹೇಳಿದರು.

“ಇಡಿ ಅಧಿಕಾರಿಗಳು ನೋಟಿಸ್ ನೀಡಿ ವಿಚಾರಣೆಗೆ ಕರೆದರೆ ಹೋಗುತ್ತೇವೆ. ಅವರ ಪ್ರಶ್ನೆಗಳಿಗೆ ಅಲ್ಲಿಯೇ ಉತ್ತರ ನೀಡುತ್ತೇವೆ. ಮೊದಲು ವಿಚಾರಣೆ ನಡೆಯಲಿ, ನಂತರದ ಬೆಳವಣಿಗೆಯನ್ನು ನೋಡೋಣ,” ಎಂದು ಸತೀಶ್ ಜಾರಕಿಹೊಳಿ ಹೇಳಿದರು.

ಇಡಿ ಹೇಳಿಕೆಯಿಂದ ರಾಜಕೀಯವಾಗಿ ಹಾನಿಯಾಗುತ್ತದೆಯೇ ಎಂಬ ಪ್ರಶ್ನೆಗೆ, ಸಾಮಾನ್ಯವಾಗಿ ಇಂತಹ ತನಿಖಾ ಬೆಳವಣಿಗೆಗಳು ರಾಜಕೀಯವಾಗಿ ಪರಿಣಾಮ ಬೀರುತ್ತವೆ ಎಂದು ಒಪ್ಪಿಕೊಂಡ ಅವರು, ಅಂತಿಮವಾಗಿ ಜನರ ತೀರ್ಪೇ ಮುಖ್ಯ ಎಂದರು.

“ನಮಗೆ ಇಡಿಗಿಂತ ಮೊದಲು ಜನತಾ ನ್ಯಾಯಾಲಯ ಇದೆ. ಅವರು ಅವರ ಕೆಲಸ ಮಾಡಲಿ,” ಎಂದು ಅವರು ಹೇಳಿದರು.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೆ ಸ್ಪರ್ಧಿಸಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿರುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರ ಬೆಂಬಲ ಕಾಂಗ್ರೆಸ್‌ಗೆ ಅಗತ್ಯವಿದೆ ಎಂದು ಹೇಳಿದರು.

ಸಿದ್ದರಾಮಯ್ಯ ಅವರು ಚುನಾವಣೆಯಲ್ಲಿ ಸ್ಪರ್ಧಿಸಬೇಕೋ ಅಥವಾ ಬೇಡವೋ ಎಂಬುದು ಅವರ ವೈಯಕ್ತಿಕ ನಿರ್ಧಾರ. ಆದರೆ ಮುಂದಿನ ಚುನಾವಣೆಯ ಸಂದರ್ಭದಲ್ಲಿ ಅವರ ಬೆಂಬಲ ಪಕ್ಷಕ್ಕೆ ಅಗತ್ಯವಿದೆ ಎಂದು ತಾವು ಈಗಾಗಲೇ ಹೇಳಿರುವುದಾಗಿ ಸಚಿವರು ತಿಳಿಸಿದರು

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular