ಬೆಂಗಳೂರು: ದೇಶಾದ್ಯಂತ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಮತ್ತು ಅಭಾವದ ಸುದ್ದಿಗಳ ನಡುವೆ ಈಗ ಎಲ್ಲರ ಗಮನ ಸೆಳೆಯುತ್ತಿರುವುದು ಡೆಲಿವರಿ ಬಾಯ್‌ಗಳ ಗಳಿಕೆ ಹೌದು, ನಿಮ್ಮ ಮನೆ ಬಾಗಿಲಿಗೆ ಗ್ಯಾಸ್ ಹೊತ್ತು ತರುವ ವ್ಯಕ್ತಿ ಪ್ರತಿ ಸಿಲಿಂಡರ್ ಮೇಲೆ ಎಷ್ಟು ಕಮಿಷನ್ ಪಡೆಯುತ್ತಾರೆ? ಅವರ ತಿಂಗಳ ಆದಾಯ ಎಷ್ಟು? ಈ ಬಗ್ಗೆ ಆಸಕ್ತಿದಾಯಕ ಮಾಹಿತಿ ಇಲ್ಲಿದೆ.
ಡಿಸ್ಟ್ರಿಬ್ಯೂಟರ್ ಕಂಪನಿಗೆ ಸಿಗುವ ಲಾಭ ಎಷ್ಟು?
ಮೊದಲಿಗೆ, ಈ ವ್ಯವಹಾರದ ದೊಡ್ಡ ಪಾಲನ್ನು ತಿಳಿಯೋಣ. ಗ್ಯಾಸ್ ವಿತರಿಸುವ ಡಿಸ್ಟ್ರಿಬ್ಯೂಟರ್ ಕಂಪನಿಗೆ ಪ್ರತಿ 14.2 ಕೆಜಿ ಗೃಹಬಳಕೆಯ ಸಿಲಿಂಡರ್ ಮೇಲೆ ಸುಮಾರು 80 ರಿಂದ 88 ರೂಪಾಯಿ ಲಾಭ ಸಿಗುತ್ತದೆ. ಇದು ಗೋದಾಮಿನ ನಿರ್ವಹಣೆ ಮತ್ತು ವಿತರಣಾ ವೆಚ್ಚವನ್ನು ಒಳಗೊಂಡಿರುತ್ತದೆ. ಇನ್ನು ಹೋಟೆಲ್‌ಗಳಲ್ಲಿ ಬಳಸುವ ವಾಣಿಜ್ಯ ಸಿಲಿಂಡರ್‌ಗಳ ಮೇಲೆ ಇವರಿಗೆ ಸುಮಾರು 100 ರೂಪಾಯಿ ಕಮಿಷನ್ ದೊರೆಯುತ್ತದೆ.
ಡೆಲಿವರಿ ಬಾಯ್ ಗಳಿಕೆ: ಪ್ರತಿ ಸಿಲಿಂಡರ್‌ಗೆ ಎಷ್ಟು?
ನಿಮ್ಮ ಮನೆಗೆ ಸಿಲಿಂಡರ್ ತಲುಪಿಸುವ ವ್ಯಕ್ತಿಗೆ ಪ್ರತಿ ಸಿಲಿಂಡರ್ ಮೇಲೆ ಸುಮಾರು 20 ರಿಂದ 25 ರೂಪಾಯಿ ಕಮಿಷನ್ ಸಿಗುತ್ತದೆ. ಒಬ್ಬ ಡೆಲಿವರಿ ಬಾಯ್ ದಿನವೊಂದಕ್ಕೆ ಸರಾಸರಿ 30 ಸಿಲಿಂಡರ್ ವಿತರಿಸಿದರೆ, ದಿನಕ್ಕೆ 600 ರಿಂದ 750 ರೂಪಾಯಿ ಸಂಪಾದಿಸುತ್ತಾನೆ.
ತಿಂಗಳಿಗೆ 65,000 ರೂ. ಗಳಿಸುವುದು ಹೇಗೆ?
ಸಾಮಾನ್ಯವಾಗಿ ಒಬ್ಬ ಡೆಲಿವರಿ ಬಾಯ್ ತಿಂಗಳಿಗೆ 15,600 ರಿಂದ 19,500 ರೂಪಾಯಿ ಗಳಿಸುತ್ತಾನೆ. ಆದರೆ, ಹಬ್ಬ ಹರಿದಿನಗಳಲ್ಲಿ ಬೇಡಿಕೆ ಹೆಚ್ಚಿದ್ದಾಗ ಅಥವಾ ಕೆಲಸದ ವೇಗ ಹೆಚ್ಚಾದಾಗ ಇವರ ಆದಾಯ ಗಗನಕ್ಕೇರುತ್ತದೆ:
ಬೇಡಿಕೆ ಹೆಚ್ಚಿದ್ದಾಗ: ದಿನಕ್ಕೆ 50 ಸಿಲಿಂಡರ್ ತಲುಪಿಸಿದರೆ ದಿನದ ಆದಾಯ 1,250 ರೂಪಾಯಿ ದಾಟುತ್ತದೆ.
ಗರಿಷ್ಠ ಗಳಿಕೆ: ಕೆಲವು ಚುರುಕಾದ ಡೆಲಿವರಿ ಬಾಯ್‌ಗಳು ದಿನಕ್ಕೆ 100 ಸಿಲಿಂಡರ್‌ಗಳನ್ನು ವಿತರಿಸುವ ಸಾಮರ್ಥ್ಯ ಹೊಂದಿರುತ್ತಾರೆ. ಅಂತಹ ಸಂದರ್ಭದಲ್ಲಿ ಅವರ ದೈನಂದಿನ ಆದಾಯ 2,500 ರೂಪಾಯಿ ಆಗುತ್ತದೆ. ಈ ಲೆಕ್ಕಾಚಾರದ ಪ್ರಕಾರ ಅವರು ತಿಂಗಳಿಗೆ ಗರಿಷ್ಠ 65,000 ರೂಪಾಯಿ ವರೆಗೂ ಸಂಪಾದನೆ ಮಾಡಬಹುದು

