ಚೀನಾದ ಹೋಟೆಲ್ ಒಂದರಲ್ಲಿ ಅಕ್ಷರಶಃ ನಂಬಲಾಗದ ಘಟನೆಯೊಂದು ನಡೆದಿದೆ. ಆನ್‌ಲೈನ್ ಗೇಮಿಂಗ್‌ಗೆ ಅತಿಯಾಗಿ ವ್ಯಸನಿಯಾಗಿದ್ದ ಯುವಕನೊಬ್ಬ ಸತತ ಎರಡು ವರ್ಷಗಳ ಕಾಲ ಹೋಟೆಲ್ ಕೊಠಡಿಯಿಂದ ಹೊರಬರದೆ ಅಲ್ಲಿಯೇ ವಾಸವಾಗಿದ್ದ. ಇತ್ತೀಚೆಗೆ ಆತ ಹೋಟೆಲ್‌ನಿಂದ ಹೊರಹೋದ ಬಳಿಕ ರೂಮ್ ಸ್ವಚ್ಛಗೊಳಿಸಲು ಹೋದ ಸಿಬ್ಬಂದಿ ಅಲ್ಲಿನ ಸ್ಥಿತಿ ಕಂಡು ಬೆಚ್ಚಿಬಿದ್ದಿದ್ದಾರೆ.
ಕಸದ ರಾಶಿಯ ನಡುವೆಯೇ ವಾಸ! ಸದರಿ ಹೋಟೆಲ್ ಇ-ಸ್ಪೋರ್ಟ್ಸ್ ಆಟಗಾರರಿಗೆಂದೇ ವಿಶೇಷ ಸೌಲಭ್ಯಗಳನ್ನು ಒದಗಿಸುತ್ತಿತ್ತು. ಇಲ್ಲಿ ಹೈ-ಸ್ಪೀಡ್ ಇಂಟರ್ನೆಟ್ ಮತ್ತು ಗೇಮಿಂಗ್ ಪಿಸಿಗಳ ವ್ಯವಸ್ಥೆ ಇತ್ತು. ಇವುಗಳ ವ್ಯಸನಕ್ಕೆ ಬಿದ್ದ ಈ ವ್ಯಕ್ತಿ, ಕಳೆದ 24 ತಿಂಗಳುಗಳಿಂದ ಕೊಠಡಿಯನ್ನು ಸ್ವಚ್ಛಗೊಳಿಸಲು ಯಾರಿಗೂ ಅವಕಾಶ ನೀಡಿರಲಿಲ್ಲ. ಆತ ಚೆಕ್ ಔಟ್ ಮಾಡಿದ ನಂತರ ಸಿಬ್ಬಂದಿ ಒಳಹೋದಾಗ ಇಡೀ ರೂಮ್ ಕಸದ ಗುಡ್ಡೆಯಾಗಿ ಮಾರ್ಪಟ್ಟಿತ್ತು.
ಬಳಸಿದ ಟಾಯ್ಲೆಟ್ ಪೇಪರ್, ಪ್ಲಾಸ್ಟಿಕ್ ಬಾಟಲಿಗಳು, ತಿಂದು ಎಸೆದ ಆಹಾರದ ಪ್ಯಾಕೆಟ್‌ಗಳು ಕೊಠಡಿಯ ತುಂಬೆಲ್ಲಾ ಹರಡಿಕೊಂಡಿದ್ದವು. ಗೇಮಿಂಗ್ ಚೇರ್ ಮತ್ತು ಟೇಬಲ್ ಇರುವ ಜಾಗ ಕೂಡ ಕಸದ ರಾಶಿಯಿಂದ ಮುಚ್ಚಿಹೋಗಿತ್ತು. ಬಾತ್‌ರೂಮ್‌ನ ಸ್ಥಿತಿಯಂತೂ ವಿವರಿಸಲಾಗದಷ್ಟು ಭೀಕರವಾಗಿತ್ತು ಎಂದು ಹೋಟೆಲ್ ಸಿಬ್ಬಂದಿ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಹೊರಗಿನ ಪ್ರಪಂಚವನ್ನೇ ಮರೆತಿದ್ದ ಗೇಮರ್ ಈ ವ್ಯಕ್ತಿ ಹೋಟೆಲ್‌ನಲ್ಲಿ ತಂಗಿದ್ದ ಸಮಯದಲ್ಲಿ ಹೋಟೆಲ್ ಸಿಬ್ಬಂದಿಗೆ ಕಣ್ಣಿಗೂ ಬೀಳುತ್ತಿರಲಿಲ್ಲವಂತೆ. ದಿನದ 24 ಗಂಟೆಯೂ ಗೇಮಿಂಗ್‌ನಲ್ಲಿ ಮುಳುಗಿದ್ದ ಈತ, ಊಟಕ್ಕಾಗಿ ಮಾತ್ರ ಆನ್‌ಲೈನ್ ಆರ್ಡರ್ ಮಾಡುತ್ತಿದ್ದ ಎಂದು ವರದಿಯಾಗಿದೆ. ರೂಮ್ ಒಳಗಡೆ ಅಡಿ ಇಡಲು ಜಾಗವಿಲ್ಲದಷ್ಟು ಗಲೀಜು ಮಾಡಿಕೊಂಡಿದ್ದರೂ, ಅದರ ನಡುವೆಯೇ ಈತ ವಾಸವಿದ್ದುದು ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದು, ಗೇಮಿಂಗ್ ವ್ಯಸನ ಮನುಷ್ಯನನ್ನು ಹೇಗೆ ಬದಲಿಸುತ್ತದೆ ಎಂಬುದಕ್ಕೆ ಇದೊಂದು ಆಘಾತಕಾರಿ ಉದಾಹರಣೆಯಾಗಿದೆ.


