ನಮ್ಮ ಅಡುಗೆ ಮನೆಯಲ್ಲಿ ಅಗಸೆ ಬೀಜ, ಚಿಯಾ ಸೀಡ್ಸ್ ಅಥವಾ ಕುಂಬಳಕಾಯಿ ಬೀಜಗಳ ಬಳಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಇವುಗಳ ಸಾಲಿಗೆ ಸೇರುವ ಮತ್ತೊಂದು ಅತ್ಯಂತ ಶಕ್ತಿಶಾಲಿ ಹಾಗೂ ಅಷ್ಟೇ ನಿರ್ಲಕ್ಷಿತ ಸೂಪರ್ ಫುಡ್ ಎಂದರೆ ಅದು ‘ಹಲೀಮ್ ಬೀಜಗಳು’ (Haleem Seeds). ಅಲ್ಪ ಪ್ರಮಾಣದಲ್ಲಿ ಇವುಗಳನ್ನು ಸೇವಿಸುವುದರಿಂದ ದೇಹದ ಹಲವು ಗಂಭೀರ ಸಮಸ್ಯೆಗಳನ್ನು ಸುಲಭವಾಗಿ ದೂರ ಮಾಡಬಹುದು ಎಂದು ತಜ್ಞರು ತಿಳಿಸಿದ್ದಾರೆ.
ತಜ್ಞ ವೈದ್ಯರು ಹೇಳುವುದೇನು? ಫೋರ್ಟಿಸ್ ಆಸ್ಪತ್ರೆಯ ಖ್ಯಾತ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಶುಭಂ ವತ್ಸ ಅವರ ಪ್ರಕಾರ, ಹಲೀಮ್ ಬೀಜಗಳು ಕಬ್ಬಿಣದ ಅಂಶ (Iron), ಫೋಲೇಟ್, ಕ್ಯಾಲ್ಸಿಯಂ ಮತ್ತು ಅಗತ್ಯ ಖನಿಜಗಳ ಆಗರವಾಗಿವೆ. ವಿಶೇಷವಾಗಿ ರಕ್ತಹೀನತೆ ಅಥವಾ ಹಿಮೋಗ್ಲೋಬಿನ್ ಕೊರತೆಯಿಂದ ಬಳಲುತ್ತಿರುವವರಿಗೆ ಇದು ವರದಾನವಿದ್ದಂತೆ. ಕೇವಲ ಅರ್ಧ ಟೀ ಚಮಚ ಹಲೀಮ್ ಬೀಜಗಳನ್ನು ಪ್ರತಿದಿನ ಸೇವಿಸುವುದರಿಂದ ದೇಹದಲ್ಲಿನ ಶಕ್ತಿಯ ಮಟ್ಟ ಸುಧಾರಿಸುತ್ತದೆ ಮತ್ತು ಕೂದಲು ಉದುರುವಿಕೆ ಕಡಿಮೆಯಾಗುತ್ತದೆ.
ಯಾವೆಲ್ಲಾ ಸಮಸ್ಯೆಗಳಿಗೆ ಇದು ಪರಿಹಾರ? ನೀವು ಈ ಕೆಳಗಿನ ಸಮಸ್ಯೆಗಳಿಂದ ಬಳಲುತ್ತಿದ್ದರೆ ಹಲೀಮ್ ಬೀಜಗಳನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸಿಕೊಳ್ಳುವುದು ಉತ್ತಮ:
- ತೀವ್ರ ಕೂದಲು ಉದುರುವಿಕೆ: ಇದರಲ್ಲಿರುವ ಪೋಷಕಾಂಶಗಳು ಕೂದಲಿನ ಬುಡವನ್ನು ಗಟ್ಟಿಗೊಳಿಸುತ್ತವೆ.
- ರಕ್ತಹೀನತೆ (Anemia): ಹಿಮೋಗ್ಲೋಬಿನ್ ಪ್ರಮಾಣವನ್ನು ನೈಸರ್ಗಿಕವಾಗಿ ಹೆಚ್ಚಿಸಲು ಇದು ಸಹಕಾರಿ.
- ಮೂಳೆಗಳ ದೌರ್ಬಲ್ಯ: ಇದರಲ್ಲಿ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಸಮೃದ್ಧವಾಗಿದ್ದು, ಮೂಳೆಗಳನ್ನು ಬಲಪಡಿಸುತ್ತದೆ.
- ಜೀರ್ಣಕ್ರಿಯೆ ಮತ್ತು ಮಲಬದ್ಧತೆ: ಅಧಿಕ ನಾರಿನಂಶ (Fibre) ಇರುವುದರಿಂದ ಜೀರ್ಣಕ್ರಿಯೆ ಸರಾಗವಾಗುತ್ತದೆ.
- ಆಯಾಸ ಮತ್ತು ತಲೆಸುತ್ತು: ಕಬ್ಬಿಣದ ಅಂಶ ಹೆಚ್ಚಿರುವುದರಿಂದ ದೇಹಕ್ಕೆ ಚೈತನ್ಯ ನೀಡುತ್ತದೆ.
ಸೇವಿಸುವ ವಿಧಾನ ಹೀಗಿರಲಿ ಹಲೀಮ್ ಬೀಜಗಳನ್ನು ಸೇವಿಸುವಾಗ ಒಂದು ಪ್ರಮುಖ ನಿಯಮವನ್ನು ಪಾಲಿಸಬೇಕು ಎನ್ನುತ್ತಾರೆ ಡಾ. ವತ್ಸ. ಇವುಗಳನ್ನು ಎಂದಿಗೂ ನೇರವಾಗಿ ಅಥವಾ ಒಣದಾಗಿ ಸೇವಿಸಬಾರದು. ಬದಲಾಗಿ, ಇವುಗಳನ್ನು ಹಾಲು, ತುಪ್ಪ ಅಥವಾ ತೆಂಗಿನ ಎಣ್ಣೆಯೊಂದಿಗೆ ಬೆರೆಸಿ ಸೇವಿಸಬೇಕು. ಹೀಗೆ ಮಾಡುವುದರಿಂದ ಬೀಜಗಳಲ್ಲಿರುವ ಪೋಷಕಾಂಶಗಳನ್ನು ದೇಹವು ಸುಲಭವಾಗಿ ಹೀರಿಕೊಳ್ಳಲು ಸಾಧ್ಯವಾಗುತ್ತದೆ ಮತ್ತು ಜೀರ್ಣಕ್ರಿಯೆಯೂ ಸುಲಭವಾಗುತ್ತದೆ.

