ವಿಮಾನ ಪ್ರಯಾಣಿಕರ ಪಾಲಿಗೆ ಕೇಂದ್ರ ಸರ್ಕಾರವು ಸಿಹಿ ಸುದ್ದಿಯೊಂದನ್ನು ನೀಡಿದ್ದು, ವಿಮಾನ ಟಿಕೆಟ್ ರದ್ದತಿ ಮತ್ತು ಮರುಪಾವತಿ ಪ್ರಕ್ರಿಯೆಯಲ್ಲಿ ಡಿಜಿಸಿಎ (DGCA) ಮಹತ್ವದ ಬದಲಾವಣೆಗಳನ್ನು ತಂದಿದೆ. ಇನ್ಮುಂದೆ ಟಿಕೆಟ್ ಬುಕ್ ಮಾಡಿದ 48 ಗಂಟೆಗಳ ಒಳಗೆ ಪ್ರಯಾಣ ರದ್ದುಗೊಳಿಸಿದರೆ ಯಾವುದೇ ಹೆಚ್ಚುವರಿ ಶುಲ್ಕ ಪಾವತಿಸಬೇಕಿಲ್ಲ. ಅಷ್ಟೇ ಅಲ್ಲದೆ, ಟಿಕೆಟ್‌ನಲ್ಲಿನ ಹೆಸರಿನ ತಪ್ಪು ತಿದ್ದುಪಡಿ ಹಾಗೂ ಮರುಪಾವತಿ ವಿಳಂಬದ ಸಮಸ್ಯೆಗಳಿಗೂ ಈಗ ಹೊಸ ನಿಯಮಗಳ ಮೂಲಕ ಅಂಕುಶ ಹಾಕಲಾಗಿದ್ದು, ಪ್ರಯಾಣಿಕರ ಹಿತರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
ಹೌದು.ವಿಮಾನ ಪ್ರಯಾಣಿಕರ ಹಿತದೃಷ್ಟಿಯಿಂದ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು (DGCA) ಗುರುವಾರದಂದು ಟಿಕೆಟ್ ರದ್ದತಿ, ಬದಲಾವಣೆ ಮತ್ತು ಮರುಪಾವತಿಗೆ ಸಂಬಂಧಿಸಿದ ನಿಯಮಗಳನ್ನು ಪರಿಷ್ಕರಿಸಿದೆ. ಈ ಹೊಸ ನಿಯಮಗಳು ಪ್ರಕ್ರಿಯೆಯನ್ನು ಹೆಚ್ಚು ಸರಳ ಮತ್ತು ವೇಗಗೊಳಿಸುವ ಗುರಿಯನ್ನು ಹೊಂದಿವೆ.
48 ಗಂಟೆಗಳ ಉಚಿತ ರದ್ದತಿ: ಕೆಲವು ಷರತ್ತುಗಳಿಗೆ ಒಳಪಟ್ಟು, ವಿಮಾನ ಟಿಕೆಟ್ ಬುಕ್ ಮಾಡಿದ 48 ಗಂಟೆಗಳ ಒಳಗೆ ಟಿಕೆಟ್ ರದ್ದುಗೊಳಿಸಿದರೆ ಅಥವಾ ಬದಲಾವಣೆ ಮಾಡಿದರೆ ಪ್ರಯಾಣಿಕರು ಯಾವುದೇ ಹೆಚ್ಚುವರಿ ಶುಲ್ಕ ಪಾವತಿಸಬೇಕಿಲ್ಲ.
ಹೆಸರು ತಿದ್ದುಪಡಿ: ಏರ್‌ಲೈನ್ ವೆಬ್‌ಸೈಟ್ ಮೂಲಕ ನೇರವಾಗಿ ಟಿಕೆಟ್ ಬುಕ್ ಮಾಡಿದ್ದರೆ, ಬುಕಿಂಗ್ ಮಾಡಿದ 24 ಗಂಟೆಗಳ ಒಳಗೆ ಹೆಸರಿನಲ್ಲಿನ ತಪ್ಪುಗಳನ್ನು ಯಾವುದೇ ಶುಲ್ಕವಿಲ್ಲದೆ ಉಚಿತವಾಗಿ ಸರಿಪಡಿಸಿಕೊಳ್ಳಬಹುದು.
ಏಜೆಂಟ್ ಮೂಲಕ ಬುಕಿಂಗ್: ಟ್ರಾವೆಲ್ ಏಜೆಂಟ್ ಅಥವಾ ಪೋರ್ಟಲ್ ಮೂಲಕ ಟಿಕೆಟ್ ಖರೀದಿಸಿದ್ದರೂ ಸಹ, ಮರುಪಾವತಿ ಮಾಡುವ ಜವಾಬ್ದಾರಿ ವಿಮಾನಯಾನ ಸಂಸ್ಥೆಗಳದ್ದೇ ಆಗಿರುತ್ತದೆ. ಏಕೆಂದರೆ ಏಜೆಂಟ್‌ಗಳು ಸಂಸ್ಥೆಯ ಪ್ರತಿನಿಧಿಗಳಾಗಿರುತ್ತಾರೆ.
14 ದಿನಗಳ ಮರುಪಾವತಿ: ಟಿಕೆಟ್ ರದ್ದುಗೊಂಡ ನಂತರ ಏರ್‌ಲೈನ್ ಸಂಸ್ಥೆಗಳು 14 ಕೆಲಸದ ದಿನಗಳೊಳಗೆ ಮರುಪಾವತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
ತುರ್ತು ವೈದ್ಯಕೀಯ ಪರಿಸ್ಥಿತಿ: ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ಟಿಕೆಟ್ ರದ್ದುಗೊಳಿಸಬೇಕಾದಲ್ಲಿ, ವಿಮಾನಯಾನ ಸಂಸ್ಥೆಗಳು ಅಂತಹ ವಿನಂತಿಗಳನ್ನು ಪಾರದರ್ಶಕವಾಗಿ ಮತ್ತು ಶೀಘ್ರವಾಗಿ ನಿರ್ವಹಿಸಬೇಕು ಎಂಬ ನಿಬಂಧನೆಯನ್ನು ಸೇರಿಸಲಾಗಿದೆ.
ಕಳೆದ ಡಿಸೆಂಬರ್ 2025 ರಲ್ಲಿ ಇಂಡಿಗೋ (IndiGo) ವಿಮಾನ ಸಂಸ್ಥೆಯ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾದಾಗ ಮರುಪಾವತಿ ವಿಳಂಬದ ಬಗ್ಗೆ ಸಾಕಷ್ಟು ದೂರುಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ನಾಗರಿಕ ವಿಮಾನಯಾನ ಸಚಿವಾಲಯವು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಈಗ ಈ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ.

