ಉಡುಪಿ : ಸಮುದ್ರದಲ್ಲಿ ‘ಟೂರಿಸ್ಟ್ ಬೋಟ್’ ಮಗುಚಿ ಬಿದ್ದು ನಾಲ್ವರ ಸ್ಥಿತಿ ಗಂಭೀರವಾಗಿ ಹಲವರು ಅಸ್ವಸ್ಥಗೊಂಡ ಘಟನೆ ಇಂದು ಉಡುಪಿಯಲ್ಲಿ ನಡೆದಿದೆ. ಉಡುಪಿ ತಾಲೂಕಿನ ಕೋಡಿಬೆಂಗ್ರೆ ಸಮೀಪ ಈ ಘಟನೆ ನಡೆದಿದೆ. ಅರಬ್ಬಿ ಸಮುದ್ರದಲ್ಲಿ ಬೋಟ್ ಪಲ್ಟಿಯಾಗಿದೆ.
ಟೂರಿಸ್ಟ್ ಬೋಟ್ ನಲ್ಲಿ 15 ಮಂದಿ ಪ್ರವಾಸಿಗರು ಇದ್ದರು ಎನ್ನಲಾಗಿದೆ. ಸಮುದ್ರದಲ್ಲಿ ಅಲೆಯ ಹೊಡೆತಕ್ಕೆ ಏಕಾಏಕಿ ಬೋಟ್ ಮಗುಚಿದೆ. ಪರಿಣಾಮ ಹಲವು ಸಮುದ್ರಕ್ಕೆ ಬಿದ್ದಿದ್ದಾರೆ. ಲೈಫ್ ಜಾಕೆಟ್ ಧರಿಸದೇ ಇದ್ದಿದ್ದರಿಂದ ಹಲವರು ನೀರಿನಲ್ಲಿ ಮುಳುಗಿದ್ದಾರೆ. ಅವಘಡದಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಹಲವರು ಅಸ್ವಸ್ಥಗೊಂಡಿದ್ದಾರೆ ಎನ್ನಲಾಗಿದೆ.
ಪ್ರವಾಸಿಗರು ಮೈಸೂರಿನ ಸರಸ್ವತಿ ಪುರಂನವರು ಎಂದು ತಿಳಿದು ಬಂದಿದೆ. ಅವರು ಕಂಪನಿಯೊಂದರಲ್ಲಿ ಕಾಲ್ ಸೆಂಟರ್ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದರು. 28 ಮಂದಿ 2 ತಂಡಗಳಾಗಿ ತಲಾ 14 ಮಂದಿ ಬೋಟ್ ನಲ್ಲಿ ವಿಹಾರಕ್ಕೆ ತೆರಳಿದ್ದರು. ಬೋಟ್ ನಲ್ಲಿದ್ದ ಯಾರೂ ಕೂಡ ಲೈಫ್ ಜಾಕೆಟ್ ಧರಿಸಿರಲಿಲ್ಲ ಎಂದು ತಿಳಿದು ಬಂದಿದೆ. ಅಸ್ವಸ್ಥಗೊಂಡವರನ್ನು ಕೋಟಾದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

