ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಬೆಂಕಿ ಅವಘಡ ಸಂಭವಿಸಿದೆ. ಪ್ಲಾಸ್ಟಿಕ್ ಗೋಡೌನ್ ನಲ್ಲಿ ಕಾಣಿಸಿಕೊಂಡ ಬೆಂಕಿ ಪಕ್ಕದ ಪಿಜಿಗೂ ವ್ಯಾಪಿಸಿದ್ದು, ಪಿಜಿಯಲ್ಲಿದ್ದ ಯುವತಿಯರು ಕಟ್ಟಡದಿಂದ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ.
ಬೆಂಗಳೂರಿನ ನಂದಿನಿ ಲೇಔಟ್ನಲ್ಲಿ ತಡರಾತ್ರಿ ಈ ಗಹ್ಟನೆ ನಡೆದಿದೆ. ಭೀಕರ ಅಗ್ನಿ ಅವಘಡದಲ್ಲಿ ಪ್ಲಾಸ್ಟಿಕ್ ಗೋಡೌನ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಬೆಂಕಿಯ ಕೆನ್ನಾಲಿಗೆ ಪಕ್ಕದ ಲೇಡಿಸ್ ಪಿಜಿಗೂ ಹಬ್ಬಿದ ಪರಿಣಾಮ ಪಿಜಿಯಲ್ಲಿದ್ದ ಯುವತಿಯರು ಕಂಗಾಲಾಗಿದ್ದಾರೆ. ಜೀವ ಉಳಿಸಿಕೊಳ್ಳಲು ಪರದಾಡಿದ್ದಾರೆ.
ಪ್ಲಾಸ್ಟಿಕ್ ಗೋಡೌನ್ ಪಕ್ಕದಲ್ಲೇ ಸುಮಾರು 50 ಯುವತಿಯರು ವಾಸವಿದ್ದ ಲೇಡಿಸ್ ಪಿಜಿ ಇತ್ತು. ಬೆಂಕಿಯಿಂದಾಗಿ ದಟ್ಟ ಹೊಗೆ ಹಾಗೂ ಬೆಂಕಿಯ ಕೆನ್ನಾಲಿಗೆ ಪಿಜಿ ಒಲಗೂ ಆವರಿಸುತ್ತಿದ್ದಂತೆಯೇ ಹೊರಗೆ ಬರಲು ದಾರಿಯಿಲ್ಲದೆ ಆತಂಕಗೊಂಡ ಕೆಲ ಯುವತಿಯರು ಮೊದಲ ಮಹಡಿಯಿಂದ ಕೆಳಕ್ಕೆ ಜಿಗಿದಿದ್ದಾರೆ. ಇನ್ನೂ ಕೆಲವರು ಪ್ರಾಣ ಉಳಿಸಿಕೊಳ್ಳಲು ಪಿಜಿಯ ಕಾಂಪೌಂಡ್ ಗೋಡೆ ಹಾರಿ ಹೊರಬಂದಿದ್ದಾರೆ.
ಘಟನೆಯಲ್ಲಿ ಕೆಲ ಯುವತಿಯರಿಗೆ ಗಾಯಗಳಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ.
ಪ್ಲಾಸ್ಟಿಕ್ ಗೋಡೌನ್ನಲ್ಲಿ ಆಕಸ್ಮಿಕವಾಗಿ ಬೆಂಕಿ ಅವಘಡ ಸಂಭವಿಸಿದ್ದು, ಪ್ಲಾಸ್ಟಿಕ್ ವಸ್ತುಗಳಿದ್ದ ಕಾರಣ ಬೆಂಕಿ ಕ್ಷಣಾರ್ಧದಲ್ಲಿ ಅಕ್ಕಪಕ್ಕದ ಮನೆಗಳಿಗೆ ವ್ಯಾಪಿಸಿದೆ. ಬೆಂಕಿಯ ತೀವ್ರತೆಗೆ ಮನೆಯ ಮುಂಭಾಗದ ಮರಗಳು ಹಾಗೂ ಕಬ್ಬಿಣದ ಗೇಟ್ಗಳು ಕೂಡ ಹೊತ್ತಿ ಉರಿದಿವೆ.

