ಬೆಂಗಳೂರು: ಸಾಲು ಸಾಲು ಹಬ್ಬಗಳ ಹಿನ್ನೆಲೆಯಲ್ಲಿ ಸಿಹಿ ತಿನಿಸುಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಈ ಹಿನ್ನೆಲೆಯಲ್ಲಿ ಸ್ವೀಟ್ಸ್ ತಯಾರಿಕಾ ಘಟಕಗಳ ಮೇಲೆ ಆಹಾರ ಸುರಕ್ಷತಾ ಇಲಾಖೆ (ಎಫ್‌ಡಿಎ) ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ.
ಶ್ರಾವಣಮಾಸ ಎಂದರೆ ಹಬ್ಬಗಳ ಮಾಸ. ಸಿಹಿ ತಿಂಡಿಗಳಿಗೆ ಬೇಡಿಕೆ ಹೆಚ್ಚುವುದು ಸರ್ವೇ ಸಾಮಾನ್ಯ. ಅದರಲಿಯೂ ರಾಜ್ಯರಾಜಧಾನಿ ಬೆಂಗಳೂರಿನಲ್ಲಿ ಹಬ್ಬಗಳ ಸಂದರ್ಭದಲ್ಲಿ ಸ್ವೀಟ್ಸ್ ಅಂಗಡಿಗಳ ಮುಂದೆ ಜನಸಾಗರವೇ ನಿಂತಿರುತ್ತದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಾದ್ಯಂತ ಸ್ವೀಟ್ಸ್ ತಯಾರಿಕಾ ಘಟಕಗಳ ಮೇಲೆ ಎಫ್ ಡಿಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಎಫ್‌ಎಸ್‌ಎಸ್‌ಎಐ ನಿಯಮಗಳನ್ನು ಉಲ್ಲಂಘಿಸಿ, ಕಳಪೆ ಗುಣಮಟ್ಟದ, ಬಣ್ಣಗಳನ್ನು ಹಾಕಿದ ಹಾಗೂ ಅಶುಚಿಯಾದ ವಾತಾವರಣದಲ್ಲಿ ಸಿಹಿ ತಯಾರಿಸುತ್ತಿರುವ ಘಟಕಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ. ಗ್ರಾಹಕರಿಂದ ಬಂದ ದೂರುಗಳ ಆಧಾರದ ಮೇಲೆ ಈ ತಪಾಸಣೆಗಳನ್ನು ಕೈಗೊಳ್ಳಲಾಗಿದೆ. ಅವಧಿ ಮೀರಿದ ಸಿಹಿ ಪದಾರ್ಥಗಳು, ನೊಣಗಳು ಮತ್ತು ಜಿರಳೆಗಳ ಹಾವಳಿ ಹಾಗೂ ಸ್ವಚ್ಛತೆಯ ಕೊರತೆಗಳ ಬಗ್ಗೆ ವ್ಯಾಪಕ ದೂರುಗಳು ಬಂದಿದ್ದವು. ಅಸುರಕ್ಷಿತ ಕೃತಕ ಬಣ್ಣಗಳ ಬಳಕೆ, ವಿಶೇಷವಾಗಿ ಬೃಹತ್ ಪ್ರಮಾಣದಲ್ಲಿ ಸಿಹಿ ತಯಾರಿಸುವಾಗ, ಜನರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂಬ ಆತಂಕ ವ್ಯಕ್ತವಾಗಿದೆ.
ಕೃತಕ ಬಣ್ಣಗಳು ಕ್ಯಾನ್ಸರ್ ಕಾರಕವಾಗಿರುವ ಸಾಧ್ಯತೆಯನ್ನೂ ತಜ್ಞರು ಸೂಚಿಸಿದ್ದಾರೆ. ಎಫ್‌ಡಿಎ ಅಧಿಕಾರಿಗಳು ಸ್ವಚ್ಛತೆ ಕಾಪಾಡಿಕೊಳ್ಳದ ಮತ್ತು ನಿಯಮಗಳನ್ನು ಪಾಲಿಸದ ಅಂಗಡಿಗಳಿಗೆ ಪರವಾನಗಿ ರದ್ದುಗೊಳಿಸುವ ಎಚ್ಚರಿಕೆಯನ್ನೂ ನೀಡಿದ್ದಾರೆ.

