ಮಂಗಳೂರು: ಕೌಟುಂಬಿಕ ಕಲಹ, ಆಸ್ತಿ ವಿಚಾರವಾಗಿ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ನಡೆದಿದೆ. 18 ವರ್ಷದ ಮಗಳನ್ನೇ ತಂದೆ ಕೊಲೆಗೈದಿರುವ ಹೃದಯವಿದ್ರಾವಾ ಘಟನೆ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತುಮಿನಾಡಿನಲ್ಲಿ ನಡೆದಿದೆ.
18 ವರ್ಷದ ಜುಮೈಲಾ ಕೊಲೆಯಾದ ಮಗಳು. ಫಾರೂಕ್ ಮಗಳನ್ನೇ ಕೊಂದ ತಂದೆ. ಆಸ್ತಿ ವಿಚಾರವಾಗಿ ಕೌಟುಂಬಿಕ ಕಲಹ ನಡೆದಿತ್ತು. ಆಸ್ತಿಯನ್ನು ತನ್ನ ಹೆಸರಿಗೆ ಮಾಡುವಂತೆ ಪತ್ನಿ ತಾಹಿರಗೆ ಫಾರೂಕ್ ಒತ್ತಾಯಿಸಿದ್ದ. ಇದೇ ವಿಚಾರವಾಗಿ ಪತಿ-ಪತ್ನಿ ನಡುವೆ ಗಲಾಟೆ ತಾರಕಕ್ಕೇರಿದ್ದು, ವಿಚ್ಛೇದನದ ಮಾತುಕತೆವರೆಗೂ ತಲುಪಿತ್ತು.
ಜಗಳವಾಗುತ್ತಿದ್ದರೂ ಪತ್ನಿ ತಾಹಿರ ಹಾಗೂ ಮಗಳು ಜುಮೈಲಾ ಅದೇ ಮನೆಯಲ್ಲಿ ವಾಸವಾಗಿದ್ದರು. ಇಂದು ಮುಂಜಾನೆ ಕೂಡ ಪತಿ-ಪತ್ನಿ ನಡುವೆ ಜಗಳವಾಗಿದೆ. ಕೋಪದ ಬರದಲ್ಲಿ ಫಾರೂಕ್ ಕತ್ತಿ ಹಿಡಿದು ಪತ್ನಿ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಈ ವೇಳೆ ಮಗಳು ಜುಮೈಲಾ ಜಗಳ ಬಿಡಿಸಲು ಯತ್ನಿಸಿದ್ದಾಳೆ. ಜಗಳ ಬಿಡಿಸಲು ಮುಂದಾಗಿದ್ದ ಜಿಮೈಲಾಗೆ ತಂದೆ ಕೈಯಲ್ಲಿದ್ದ ಕತ್ತಿಯ ಏಟು ಬಿದ್ದಿದೆ.
ಗಂಭೀರವಾಗಿ ಗಾಯಗೊಂಡಿದ್ದ ಜುಮೈಲಾ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಜಗಳ ಬಿಡಿಸಲು ಹೋಗಿ ಮಗಳು ತಂದೆಯ ಕತ್ತಿ ದಾಳಿಗೆ ಬಲಿಯಾಗಿದ್ದಾಳೆ. ಘಟನಾ ಸ್ಥಳಕ್ಕೆ ಆಗಮಿಸಿರುವ ಮಂಜೇಸ್ವರ ಪೊಲೀಸರು ಆರೋಪಿ ಫಾರೂಕ್ ನನ್ನು ಬಂಧಿಸಿದ್ದಾರೆ.

