ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ಭದ್ರತಾ ಲೋಪದ ಆತಂಕ ಮೂಡಿಸುವ ಘಟನೆಯೊಂದು ನಡೆದಿದೆ. ವಿಮಾನಗಳ ಹಾರಾಟದ ನಡುವೆಯೇ ಎರಡು ಬೀದಿ ನಾಯಿಗಳು ವಿಮಾನ ನಿಲ್ದಾಣದ ಅತ್ಯಾಧುನಿಕ ಟರ್ಮಿನಲ್-2 (T2) ರ ಒಳಗೆ ನುಗ್ಗಿ ಭೀತಿ ಸೃಷ್ಟಿಸಿವೆ.
ನಡೆದಿದ್ದೇನು ?
ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಓಡಾಟ ಹಾಗೂ ವಿಮಾನಗಳ ಹಾರಾಟ ಪ್ರಕ್ರಿಯೆ ನಡೆಯುತ್ತಿದ್ದ ಸಮಯದಲ್ಲಿ ಈ ಘಟನೆ ಸಂಭವಿಸಿದೆ. ಹೈಟೆಕ್ ಸೌಲಭ್ಯ ಹೊಂದಿರುವ ಟರ್ಮಿನಲ್-2ರ ಒಳಭಾಗಕ್ಕೆ ಇದ್ದಕ್ಕಿದ್ದಂತೆ ನುಗ್ಗಿದ ಎರಡು ನಾಯಿಗಳು ಅಲ್ಲಿನ ಸಿಬ್ಬಂದಿ ಮತ್ತು ಪ್ರಯಾಣಿಕರನ್ನು ಆತಂಕಕ್ಕೀಡುಮಾಡಿದವು.
ವಿಮಾನವು ಹಾರಾಟಕ್ಕೆ ಸಿದ್ದವಾಗುವ ವೇಳೆ 2 ಬೀದಿನಾಯಿಗಳು ನುಗ್ಗಿದೆ. ಕೂಡಲೇ ಅಲರ್ಟ್ ಆದ ಸಿಬ್ಬಂದಿ ನಾಯಿಯನ್ನು ಅಲ್ಲಿಂದ ಓಡಿಸಿದ್ದಾರೆ. ನಾಯಿಗಳನ್ನು ಕಂಡ ತಕ್ಷಣ ಅಲರ್ಟ್ ಆದ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಮತ್ತು ಕಾರ್ಯಾಚರಣೆ ತಂಡವು ತಕ್ಷಣವೇ ಕಾರ್ಯಪ್ರವೃತ್ತರಾದರು. ಸುಮಾರು ಸಮಯದ ಕಾರ್ಯಾಚರಣೆಯ ನಂತರ, ಸಿಬ್ಬಂದಿಗಳು ಆ ಎರಡು ಬೀದಿನಾಯಿಗಳನ್ನು ಸೆರೆಹಿಡಿದು ಹೊರಹಾಕುವಲ್ಲಿ ಯಶಸ್ವಿಯಾದರು.
ಕಾರಣವೇನು?
ಕೆಂಪೇಗೌಡ ವಿಮಾನ ನಿಲ್ದಾಣವು ಸುತ್ತಮುತ್ತಲಿನ ಹಳ್ಳಿಗಳು ಮತ್ತು ಕಾಡುಪ್ರದೇಶಕ್ಕೆ ಹತ್ತಿರವಿರುವ ಕಾರಣ, ಆಗೊಮ್ಮೆ ಈಗೊಮ್ಮೆ ಇಂತಹ ಪ್ರಾಣಿಗಳು ರನ್ವೇ ಅಥವಾ ಆವರಣದ ಒಳಗೆ ಕಾಣಿಸಿಕೊಳ್ಳುತ್ತಿರುತ್ತವೆ. ವಿಮಾನ ನಿಲ್ದಾಣದ ಸುತ್ತಲ ಬೇಲಿಗಳಲ್ಲಿನ ಸಣ್ಣ ಹಾದಿಗಳು ಅಥವಾ ಗೇಟ್ಗಳ ಮೂಲಕ ಇವು ಒಳಬಂದಿರಬಹುದು ಎಂದು ಶಂಕಿಸಲಾಗಿದೆ.
ರನ್ವೇನಲ್ಲಿ ಅಥವಾ ವಿಮಾನ ನಿಲ್ದಾಣದ ಒಳಗೆ ನಾಯಿಗಳು ಬರುವುದು ದೊಡ್ಡ ಅಪಾಯಕ್ಕೆ ಕಾರಣವಾಗಬಹುದು. ವಿಮಾನಗಳ ಟೇಕ್-ಆಫ್ ಅಥವಾ ಲ್ಯಾಂಡಿಂಗ್ ಸಮಯದಲ್ಲಿ ಇವು ಅಡ್ಡಿಯಾದಲ್ಲಿ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗುತ್ತದೆ. ಈ ಹಿಂದೆಯೂ ರನ್ವೇ ಮೇಲೆ ನಾಯಿಗಳು ಕಾಣಿಸಿಕೊಂಡು ವಿಮಾನಗಳ ಲ್ಯಾಂಡಿಂಗ್ ವಿಳಂಬವಾದ ಉದಾಹರಣೆಗಳಿವೆ.ಟರ್ಮಿನಲ್-2ರಂತಹ ಸುಸಜ್ಜಿತ ಪ್ರದೇಶಕ್ಕೆ ನಾಯಿಗಳು ನುಗ್ಗಿರುವುದು ಈಗ ವಿಮಾನ ನಿಲ್ದಾಣದ ಭದ್ರತೆಯ ಬಗ್ಗೆ ಪ್ರಶ್ನೆಗಳನ್ನು ಎಬ್ಬಿಸಿದೆ. ಈ ಘಟನೆಯ ನಂತರ ಬಿಐಎಎಲ್ (BIAL) ಅಧಿಕಾರಿಗಳು ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲು ಮುಂದಾಗಿದ್ದಾರೆ.

