ರಾಮನಗರ- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಅವರು ಕಾರಿನಲ್ಲೇ ಬೆಂಗಳೂರು ದಕ್ಷಿಣ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ಜಿಲ್ಲೆಯ ಗ್ರಾಮೀಣ ಪ್ರದೇಶದ ಸಮಸ್ಯೆಗಳ ಕುರಿತಂತೆ ಸಮಾಲೋಚಿಸುವ ಮೂಲಕ ಸಮಯದ ಸದುಪಯೋಗ ಪಡಿಸಿಕೊಂಡಿದ್ದಾರೆ.
ಇಲಾಖೆಯ ಮೈಸೂರು ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಗೆ ತೆರಳುವ ಮಾರ್ಗದಲ್ಲಿ ಬೆಂಗಳೂರು ಗಡಿಯಲ್ಲಿ ಸಿಇಓ ಅನ್ಮೋಲ್ ಜೈನ್ ಅವರನ್ನು ತಮ್ಮ ಕಾರಿಗೆ ಕೂರಿಸಿಕೊಂಡ ಸಚಿವರು ಜಿಲ್ಲಾ ಗಡಿ ಅಂತ್ಯವಾಗುವವರೆಗೆ ಜಿ.ಪಂ., ತಾ.ಪಂ. ಹಾಗೂ ಗ್ರಾಮ ಪಂಚಾಯತಿಗಳಿಗೆ ಸಂಬಂಧಿಸಿದ ವಿವಿಧ ವಿಷಯಗಳ ಬಗ್ಗೆ ಸಮಾಲೋಚನೆ ನಡೆಸಿದರು.
ಗ್ರಾಮಠಾಣಾ ವ್ಯಾಪ್ತಿಯಲ್ಲಿ ದಾಖಲೆ ಇರುವ ಮತ್ತು ದಾಖಲೆ ಇಲ್ಲದ ಆಸ್ತಿಗಳಿಗೆ ಇ-ಸ್ವತ್ತು ನೀಡುವ ಅಭಿಯಾನ ಆರಂಭಿಸಿದ್ದು, ಅರ್ಜಿಗಳು ಬಂದ ಕೂಡಲೇ ಪಿಡಿಓಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿ ಯಾವುದೇ ವಿಳಂಬವಿಲ್ಲದಂತೆ ಇ-ಸ್ವತ್ತು ವಿತರಿಸಲು ಕ್ರಮ ವಹಿಸುವಂತೆ ಸೂಚಿಸಲು ತಿಳಿಸಿದರು.
ಇ-ಸ್ವತ್ತು ಅಭಿಯಾನದಲ್ಲಿ ಯಾವುದೇ ಪಿಡಿಓ ಅಥವಾ ಸಿಬ್ಬಂದಿ ಸಾರ್ವಜನಿಕರಿಂದ ಹಣಕ್ಕೆ ಬೇಡಿಕೆ ಇಟ್ಟರೆ, ಕಠಿಣ ಕ್ರಮ ಜರುಗಿಸುವಂತೆ ನಿರ್ದೇಶನ ನೀಡಿದ ಸಚಿವರು, ಜಿಲ್ಲೆಯಲ್ಲಿನ ಎಲ್ಲ ಗ್ರಾಮಗಳ ಗ್ರಾಮಠಾಣಾ ಆಸ್ತಿಗಳಿಗೆ ಇ-ಸ್ವತ್ತು ನೀಡುವ ಸಂಬಂಧ ವ್ಯಾಪಕಪ್ರಚಾರ ಮಾಡುವಂತೆ, ಗ್ರಾಮಗಳಲ್ಲಿ ಡಂಗೂರ ಹೊಡೆಸುವಂತೆ ಸೂಚಿಸಿದರು..
809 ಎಕರೆ ಕೆರೆ ಒತ್ತುವರಿ ತೆರವಿಗೆ ಈಶ್ವರ ಖಂಡ್ರೆ ಸೂಚನೆ
ಬೆಂಗಳೂರು ದಕ್ಷಿಣ ಜಿಲ್ಲೆಯ ಗ್ರಾ.ಪಂ. ವ್ಯಾಪ್ತಿಯಲ್ಲಿ 1292 ಕೆರೆಗಳಿದ್ದು, 801 ಕೆರೆಗಳ 1014 ಎಕರೆ ಭೂಮಿ ಒತ್ತುವರಿಯಾಗಿತ್ತು. ಈ ಪೈಕಿ 72 ಕೆರೆಗಳ 205 ಎಕರೆ ಒತ್ತುವರಿ ಮಾತ್ರ ತೆರವು ಮಾಡಲಾಗಿದ್ದು, ಇನ್ನೂ 729 ಕೆರೆಗಳ 809 ಎಕರೆ ಭೂಮಿ ಒತ್ತುವರಿ ತೆರವು ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಕ್ರಮ ವಹಿಸಿ ಕೆರೆಗಳ ಸಂರಕ್ಷಣೆ ಮಾಡಿ, ನೀರು ತುಂಬಿಸಿ, ಅಂತರ್ಜಲ ಹೆಚ್ಚಿಸುವಂತೆ ಸೂಚಿಸಿದರು.
ಒಂದೊಮ್ಮೆ ಕೆರೆ ಒತ್ತುವರಿ ಪ್ರದೇಶದಲ್ಲಿ ಮನೆಗಳ ನಿರ್ಮಾಣವಾಗಿದ್ದಲ್ಲಿ, ಮನೆ ಹೊರತು ಪಡಿಸಿ ಉಳಿದ ಒತ್ತುವರಿಯ ಸರ್ವೇ ನಡೆಸಿ ಒತ್ತುವರಿ ತೆರವು ಮಾಡಲು ಮತ್ತು ರಾಜಕಾಲುವೆಗಳ ಅಡೆತಡೆ ನಿವಾರಿಸಿ, ಪುನಶ್ಚೇತನಗೊಳಿಸುವಂತೆಯೂ ಸೂಚಿಸಿದರು.
ವಿಬಿಜಿ ರಾಮ್ ಜಿ ಅಡಿ ವೈಯಕ್ತಿಕ ಕಾಮಗಾರಿಗಳನ್ನು ಕೈಗೊಳ್ಳಲು ಗ್ರಾಮ ಸಭೆ ನಡೆಸಿ ಅರ್ಹ ಫಲಾನುಭವಿಗಳಿಗೆ ದನದ ಕೊಟ್ಟಿಗೆ, ಕುರಿ, ಮೇಕೆ ಕೊಟ್ಟಿಗೆ, ಕೊಳವೆ ಬಾವಿ ಮರುಪೂರಣ ಪಿಟ್, ಕೃಷಿ ಹೊಂಡ ಇತ್ಯಾದಿ ನಿರ್ಮಿಸಿಕೊಳ್ಳಲು ಅವಕಾಶ ಕಲ್ಪಿಸುವಂತೆಯೂ ಸೂಚಿಸಿದರು.
ಜಿಲ್ಲಾ ಪಂಚಾಯತಿ ಸಿಇಓ ಕಡ್ಡಾಯವಾಗಿ ವಾರದಲ್ಲಿ 2 ದಿನ ಕನಿಷ್ಠ 4 ಗ್ರಾಮಗಳಿಗೆ ಭೇಟಿ ನೀಡಿ, ರಸ್ತೆ, ನೀರು, ಬೀದಿ ದೀಪ, ಇ-ಸ್ವತ್ತು, ನಕ್ಷೆ ಮಂಜೂರಾತಿ, ನೈರ್ಮಲ್ಯ, ಕೆರೆ ಅಭಿವೃದ್ಧಿ, ವಿಬಿಜಿ ರಾಮ್ ಜಿ ಪ್ರಗತಿ ಕುರಿತಂತೆ ಸಾರ್ವಜನಿಕರ ಅಹವಾಲು ಆಲಿಸಿ ಸ್ಥಳದಲ್ಲೇ ಪರಿಹಾರ ಒದಗಿಸುವಂತೆಯೂ ಸೂಚಿಸಿದರು.
ಮುಂದಿನ ಬೇಸಿಗೆಯಲ್ಲಿ ನೀರಿನ ತೀವ್ರ ಸಮಸ್ಯೆ ಎದುರಾಗುವ ಸಾಧ್ಯತೆಗಳಿದ್ದು, ಜಲ ಬಜೆಟಿಂಗ್ ಮಾಡಿ, ಯಾವ ಗ್ರಾಮದಲ್ಲಿ ಸಮಸ್ಯೆ ಎದುರಾಗಬಹುದು ಎಂದು ಅಂದಾಜು ಮಾಡಿ, ಈಗಿನಿಂದಲೇ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ, ಜಲ ಮೂಲಗಳನ್ನು ಗುರುತಿಸುವಂತೆ ಸೂಚಿಸಿದರು.
ಟ್ಯಾಂಕರ್ ಮೂಲಕ ಗ್ರಾಮೀಣ ಪ್ರದೇಶಕ್ಕೆ ನೀರು ಪೂರೈಸುವಂತೆ ತಿಳಿಸಿದ ಅವರು, ಈ ಟ್ಯಾಂಕರ್ ಗಳ ಬಾಡಿಗೆಯನ್ನು ಸಕಾಲದಲ್ಲಿ ನಿಯಮಿತವಾಗಿ ಪಾವತಿಸುವಂತೆಯೂ ನಿರ್ದೇಶನ ನೀಡಿದರು.
ವಿಬಿಜಿ ರಾಮ್ ಜಿ ಅಡಿಯಲ್ಲಿ ಕೆಲಸ ಮಾಡಿದ ಅಕುಶಲ ಕಾರ್ಮಿಕರಿಗೆ 15 ದಿನಗಳ ಒಳಗಾಗಿ ಕೂಲಿ ಹಣ ಪಾವತಿ ಆಗಬೇಕು. ಈ ಬಗ್ಗೆ ತಾಲೂಕು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ, ಕೂಲಿ ಪಾವತಿ ಆಗುತ್ತಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳುವಂತೆ ತಿಳಿಸಿದರು.

