HomeKarnatakaBIG NEWS: ಅಡ್ಡಮತದಾನ ಮಾಡಿಲ್ಲ; ಪಕ್ಷಕ್ಕೆ ದ್ರೋಹ ಬಗೆದಿಲ್ಲ: ಬೇಲೂರು ಬಿಜೆಪಿ ಶಾಸಕನಿಂದ ಆಣೆ-ಪ್ರಮಾಣ

BIG NEWS: ಅಡ್ಡಮತದಾನ ಮಾಡಿಲ್ಲ; ಪಕ್ಷಕ್ಕೆ ದ್ರೋಹ ಬಗೆದಿಲ್ಲ: ಬೇಲೂರು ಬಿಜೆಪಿ ಶಾಸಕನಿಂದ ಆಣೆ-ಪ್ರಮಾಣ

ಹಾಸನ: ವಿಧಾನಪರಿಷತ್ ಚುನಾವಣೆಯಲ್ಲಿ ಶಾಸಕರಿಂದ ಅಡ್ಡಮತದಾನ ನಡೆದಿದೆ ಎಂಬ ಆರೋಪಗಳು ಕೇಳಿಬಂದಿದ್ದು, ಭಾರಿ ಚರ್ಚೆಗೆ ಕಾರಣವಾಗಿರುವ ಬೆನ್ನಲ್ಲೇ ಹಾಸನ ಜಿಲ್ಲೆಯ ಬೇಲೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಹೆಚ್.ಕೆ. ಸುರೇಶ್ ಬೇಲೂರು ದೇವಸ್ಥಾನದಲ್ಲಿ ಆಣೆ ಪ್ರಮಾಣ ಮಾಡುವ ಮೂಲಕ ತಾವೊಬ್ಬ ನಿಷ್ಠಾವಂತ ಪಕ್ಷದ ಕಾರ್ಯಕರ್ತ ಎಂಬುದನ್ನು ಸಾಬೀತುಪಡಿಸಿದ್ದಾರೆ.

ಬೇಲೂರಿನ ಐತಿಹಾಸಿಕ ಹಾಗೂ ಪ್ರಸಿದ್ಧ ಶ್ರೀ ಚನ್ನಕೇಶವಸ್ವಾಮಿ ದೇವಾಲಯದ ಆವರಣದಲ್ಲಿ ಕರಿಕಲ್ಲಿನ ಮೇಲೆ ಕೈಯಿಟ್ಟು ಶಾಸಕ ಸುರೇಶ್ ಆಣೆ ಪ್ರಮಾಣ ಮಾಡಿದ್ದಾರೆ.

ಶಾಸಕ ಹೆಚ್.ಕೆ. ಸುರೇಶ್ ಇಂದು ಬೆಳಿಗ್ಗೆ ಬೆಂಬಲಿಗರೊಂದಿಗೆ ಚನ್ನಕೇಶವಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದರು. ಚನ್ನಕೇಶವಸ್ವಾಮಿ, ಸೌಮ್ಯನಾಯಕಿ ಹಾಗೂ ರಂಗನಾಯಕಿ ಅಮ್ಮನವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಚನ್ನಕೇಶವಸ್ವಾಮಿಯ ಪಾದಮುಟ್ಟಿ ಭಕ್ತಿಯಿಂದ ನಮಸ್ಕರಿಸಿದರು. ‘ಪೂರ್ವಜನ್ಮದ ಪುಣ್ಯದಿಂದ ನನಗೆ ಭಗವಂತನ ಬಲಭಾಗದಲ್ಲಿ ವಾಸಮಾಡುವ ಹಾಗೂ ಕ್ಷೇತ್ರದ ಜನರ ಸೇವೆ ಮಾಡುವ ಅಪೂರ್ವ ಅವಕಾಶ ಸಿಕ್ಕಿದೆ’ ಎಂದು ಅವರು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದೇವಾಲಯದ ಆವರಣದ ಎದುರಿನ ಬಲಿಕಲ್ಲು (ಕರಿಕಲ್ಲು) ಮುಟ್ಟಿ ಪ್ರಮಾಣ ಮಾಡಿದ ಶಾಸಕರು, ‘ಈ ಕರಿಕಲ್ಲೇ ಸಾಕ್ಷಿ, ನಾನು ವಿಧಾನಪರಿಷತ್ ಚುನಾವಣೆಯಲ್ಲಿ ಯಾವುದೇ ಅಡ್ಡಮತದಾನ ಮಾಡಿಲ್ಲ’ ಎಂದು ಮೂರು ಬಾರಿ ಗಟ್ಟಿಯಾಗಿ ಉಚ್ಚರಿಸಿದರು. ಅಷ್ಟೇ ಅಲ್ಲದೆ, ‘ನಾನು ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ದ್ರೋಹ ಮಾಡಿಲ್ಲ’ ಎಂದು ಮೂರು ಬಾರಿ ಪುನರುಚ್ಚರಿಸಿದರು.

ಆಣೆ ಪ್ರಮಾಣದ ಬಳಿಕ ಮಾತನಾಡಿದ ಶಾಸಕ ಸುರೇಶ್, ನನ್ನ ವಿರುದ್ಧ ಕೇಳಿಬರುತ್ತಿರುವ ಈ ಅಡ್ಡಮತದಾನದ ಅಪಪ್ರಚಾರ ಈ ಕ್ಷೇತ್ರದ ವಿರುದ್ಧ ನಡೆದಿರುವ ದೊಡ್ಡ ಪಿತೂರಿ ಮತ್ತು ಷಡ್ಯಂತ್ರವಾಗಿದೆ. ನಮ್ಮ ಕ್ಷೇತ್ರಕ್ಕೆ ಖುದ್ದಾಗಿ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರು ಬಂದು ಪ್ರಚಾರ ಮಾಡಿದ್ದರು. ಅಂತಹ ನಾಯಕರಿಗೆ ಹಾಗೂ ಪಕ್ಷಕ್ಕೆ ನಾನು ಅನ್ಯಾಯ ಮಾಡಿದರೆ ಭಗವಂತ ನನ್ನನ್ನು ಎಂದಿಗೂ ಕ್ಷಮಿಸುವುದಿಲ್ಲ. ನಮ್ಮ ಪಕ್ಷದ ವಿರೋಧ ಪಕ್ಷದ ನಾಯಕರು ಸೂಚಿಸಿದಂತೆ ನಾನು ನಿಖರವಾಗಿ ನನ್ನ ಮತ ಚಲಾವಣೆ ಮಾಡಿದ್ದೇನೆ. ಇದಕ್ಕೆ ಆ ಪರಮಾತ್ಮನೇ ಸಾಕ್ಷಿ ಎಂದು ಸ್ಪಷ್ಟಪಡಿಸಿದರು.

ನನ್ನನ್ನು ಹಣದಿಂದಾಗಲಿ ಅಥವಾ ದೌರ್ಜನ್ಯದಿಂದಾಗಲಿ ಯಾರೂ ಖರೀದಿಸಲು ಸಾಧ್ಯವಿಲ್ಲ. ನನ್ನನ್ನು ಕೇವಲ ಜನರ ಪ್ರೀತಿಯಿಂದ ಮಾತ್ರ ಖರೀದಿಸಲು ಸಾಧ್ಯ. ಇಷ್ಟು ಜನರ ಪ್ರೀತಿಯೇ ನನಗೆ ಶ್ರೀರಕ್ಷೆ. ನನ್ನ ವಿರುದ್ಧ ನಡೆದಿರುವ ಈ ಪಿತೂರಿಯ ಹಿಂದಿನ ಷಡ್ಯಂತ್ರವನ್ನು ಆ ಭಗವಂತನೇ ಎಲ್ಲರಿಗೂ ತಿಳಿಸಲಿ ಎಂಬ ಕಾರಣಕ್ಕೆ ನಾನು ಈ ಆಣೆ ಪ್ರಮಾಣ ಮಾಡಿದ್ದೇನೆ ಎಂದು ತಿಳಿಸಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular