ಬೆಂಗಳೂರು: ಆದಾಯ ಮೀರಿದ ಅಕ್ರಮ ಆಸ್ತಿ ಗಳಿಕೆ ಆರೋಪ ಪ್ರಕರಣದಲ್ಲಿ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಮತ್ತು ಅವರ ಕುಟುಂಬಕ್ಕೆ ಸಂಕಷ್ಟ ಎದುರಾಗಿದೆ.
ಈಶ್ವರಪ್ಪ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಲೋಕಾಯುಕ್ತ ಪೊಲೀಸರಿಗೆ ಸೂಚನೆ ನೀಡಿದ್ದ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಪ್ರಕರಣ ರದ್ದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಜಾಗೊಳಿಸಿದೆ.
ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ಕೆ.ಎಸ್. ಈಶ್ವರಪ್ಪ ಮತ್ತು ಅವರ ಪುತ್ರ ಕೆ.ಇ. ಕಾಂತೇಶ್, ಸೊಸೆ ಶಾಲಿನಿ ಸಲ್ಲಿಸಿದ ಅರ್ಜಿ ವಜಾಗೊಳಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ನ್ಯಾಯಪೀಠ ಈ ಆದೇಶ ನೀಡಿದೆ. ಆದೇಶದ ವಿಸ್ತೃತ ಪ್ರಕರಣಕ್ಕೆ ಸಂಬಂಧಪಟ್ಟಂತೆ ದೂರು ದಾಖಲಾಗಿ 12 ವರ್ಷ ಕಳೆಯುತ್ತಿದೆ. ಅಪರಾಧ ಪ್ರಕ್ರಿಯಾ ಸಂಹಿತೆ ಅಡಿಯಲ್ಲಿ ತನಿಖೆ ನಡೆಸಲು ನಿರ್ದೇಶನ ನೀಡಿರುವ ವಿಶೇಷ ನ್ಯಾಯಾಲಯದ ಆದೇಶದಲ್ಲಿ ಯಾವುದೇ ಕಾನೂನು ಲೋಪವಿಲ್ಲವೆಂದು ಹೈಕೋರ್ಟ್ ಹೇಳಿದೆ.
ತನಿಖೆಗೆ ಸಹಕರಿಸಿದರೆ ಅರ್ಜಿದಾರರನ್ನು ಬಂಧಿಸುವುದಿಲ್ಲ ಎಂಬುದಾಗಿ ಲೋಕಾಯುಕ್ತ ವಕೀಲರು ವಾಗ್ದಾನ ನೀಡಿದ್ದಾರೆ. ಇದನ್ನು ಪರಿಗಣಿಸಿದ ನ್ಯಾಯಪೀಠ ಅರ್ಜಿದಾರರು ತನಿಖೆಗೆ ಸಹಕರಿಸಬೇಕು ತನಿಖೆಗೆ ಸಹಕರಿಸಿದರೆ ಅವರನ್ನು ಬಂಧಿಸಬಾರದು ಎಂದು ಲೋಕಾಯುಕ್ತ ಪೊಲೀಸರಿಗೆ ಸೂಚನೆ ನೀಡಿದೆ.
2006ರಲ್ಲಿ ಈಶ್ವರಪ್ಪ ಜಲ ಸಂಪನ್ಮೂಲ ಸಚಿವರಾದ ನಂತರ ತಮ್ಮ ಪುತ್ರ ಕಾಂತೇಶ್ ಮತ್ತು ಸೊಸೆ ಶಾಲಿನಿ ಹೆಸರಲ್ಲಿ ಕೋಟ್ಯಂತರ ರೂಪಾಯಿ ಬೆಲೆಬಾಳುವ ಚರ ಮತ್ತು ಸ್ಥಿರಾಸ್ತಿ ಖರೀದಿಸಿದ್ದಾರೆ. ಈ ಮೂವರು ಜಂಟಿಯಾಗಿ ಅನೇಕ ಹಲವು ಶೈಕ್ಷಣಿಕ ಸಂಸ್ಥೆಗಳು ಕೈಗಾರಿಕೆಗಳು ಆಟೋಮೊಬೈಲ್ ಶೋರೂಮ್ ಗಳನ್ನು ನಡೆಸುತ್ತಿದ್ದಾರೆ. ಈಶ್ವರಪ್ಪ ಸಚಿವರಾದ ನಂತರ ಕೇವಲ ಮೂರೂವರೆ ವರ್ಷದಲ್ಲಿ ಶೇಕಡ 100ಕ್ಕೂ ಹೆಚ್ಚು ಆಸ್ತಿ ಸಂಪಾದಿಸಿದ್ದಾರೆ ಹಾಗಾಗಿ ತನಿಖೆ ನಡೆಸಲು ಲೋಕಾಯುಕ್ತಕ್ಕೆ ಆದೇಶಿಸುವಂತೆ ಕೋರಿ ವಕೀಲ ಬಿ. ವಿನೋದ್ 2021ರಲ್ಲಿ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು.

