ಕೆಲವೊಂದು ವ್ಯಕ್ತಿತ್ವಗಳೇ ಹಾಗೆ. ನೀವು ಅವರನ್ನ ಬೇಕಿದ್ದರೆ ಇಷ್ಟ ಪಡದೇ ಇರಬಹುದು. ಆದರೆ ಮರೆಯೋಕಂತೂ ಸಾಧ್ಯವೇ ಇಲ್ಲ. ಚಿತ್ರರಂಗದಲ್ಲಿ ಅಭಿಮಾನಿಗಳಿಗೆ ಈ ರೀತಿಯ ಭಾವನೆ ಮೂಡಿಸಿದ ಕಲಾವಿದರ ಪೈಕಿ ಶಕೀಲಾ ಕೂಡ ಒಬ್ಬರು.
ಶಕೀಲಾ ಜೀವನ ಆಧಾರಿತ ಸಿನಿಮಾ ಶುಕ್ರವಾರ ತೆರೆಕಾಣಲಿದೆ. ರಿಚಾ ಚಡ್ಡಾ ಹಾಗೂ ಪಂಕಜ್ ತ್ರಿಪಾಠಿ ಮುಖ್ಯ ಭೂಮಿಕೆಯಲ್ಲಿರುವ ಈ ಸಿನಿಮಾ ಈಗಾಗಲೇ ಚಿತ್ರೀಕರಣದ ಮೂಲಕವೇ ಸಾಕಷ್ಟು ಬಾರಿ ಸುದ್ದಿ ಮಾಡಿತ್ತು. ಡೆಕ್ಕನ್ ಹೆರಾಲ್ಡ್ನ ರೇಡಿಯೋ ಶೋನಲ್ಲಿ ಭಾಗಿಯಾದ ಶಕೀಲಾ ಸಿನಿಮಾದ ಬಗ್ಗೆ ತಮ್ಮ ಸಿನಿ ಜೀವನದ ಬಗ್ಗೆ ಸಾಕಷ್ಟು ಮಾತುಗಳನ್ನ ಆಡಿದ್ದಾರೆ.
ನಾಳೆ ತೆರೆಕಾಣಲಿರುವ ಸಿನಿಮಾದ ಬಗ್ಗೆ ಮಾತನಾಡಿದ ಶಕೀಲಾ, ಸಿನಿಮಾದ ಕೆಲ ಕ್ಲಿಪ್ಗಳನ್ನ ನೋಡುತ್ತಿದ್ದಂತೆಯೇ ಅದು ನನ್ನನ್ನ ಕೆಲ ವರ್ಷಗಳ ಹಿಂದಿನ ನೆನಪನ್ನ ಹಸಿಯಾಗಿಸಿತು. ಅದರಲ್ಲೂ ತಮಿಳು ಭಾಷೆಯಲ್ಲಿ ನೋಡಿದಾಗ ನನಗೆ ಸಾಕಷ್ಟು ನೆನಪುಗಳನ್ನ ಈ ಸಿನಿಮಾ ಹೊತ್ತು ತಂದಿದೆ ಎಂದೆನಿಸಿದೆ ಎಂದಿದ್ದಾರೆ.
ಅಲ್ಲದೇ ಕನ್ನಡ ಚಿತ್ರರಂಗದ ಬಗ್ಗೆಯೂ ಮಾತನಾಡಿರುವ ಶಕೀಲಾ, ಕನ್ನಡ ಬಿಗ್ಬಾಸ್ನಲ್ಲಿ ತಾವಿದ್ದ ದಿನಗಳನ್ನ ನೆನೆದಿದ್ದಾರೆ.