ಮುಂಬೈ: ಖ್ಯಾತ ಗಾಯಕಿ, ಭಾರತ ರತ್ನ ಲತಾ ಮಂಗೇಶ್ಕರ್(92) ನಿಧನರಾಗಿದ್ದಾರೆ. ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಜನವರಿ 8 ರಿಂದ ಚಿಕಿತ್ಸೆ ಪಡೆಯುತ್ತಿರುವ ಲತಾ ಮಂಗೇಶ್ಕರ್ ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ಚಿತ್ರರಂಗ, ರಾಜಕೀಯ ರಂಗದ ಗಣ್ಯರು, ಕಲಾವಿದರು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು.
ನ್ಯೂಯಾರ್ಕ್ ವಿಶ್ವವಿದ್ಯಾಲಯವೂ ಸೇರಿದಂತೆ 6 ವಿಶ್ವವಿದ್ಯಾಲಯಗಳ ಗೌರವ ಡಾಕ್ಟೊರೇಟ್ ಪಡೆದುಕೊಂಡಿರುವ ಲತಾ ಅನೇಕ ಫಿಲ್ಮ್ ಫೇರ್ ಪ್ರಶಸ್ತಿಗಳು, ಶಾಂತಿನಿಕೇತನದಿಂದ ದೇಶಿಕೋತ್ತಮ ಪ್ರಶಸ್ತಿ, ಆಸ್ಥಾನ ವಿದ್ವಾನ್, ತಿರುಪತಿ ದೇವಸ್ಥಾನಮ್, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ, ಪದ್ಮಭೂಷಣ, ಭಾರತರತ್ನ ಹಾಗೂ ಫ್ರಾನ್ಸ್ ಸರ್ಕಾರ ನೀಡುವ ’ಆಫೀಸರ್ ಆಫ್ ದ ಲೀಜಿಯನ್ ಆಫ್ ಆನರ್’ ಪ್ರತಿಷ್ಠಿತ ಪ್ರಶಸ್ತಿ ಪಡೆದಿದ್ದಾರೆ.
1929 ರ ಸೆಪ್ಟೆಂಬರ್ 28 ರಂದು ಜನಿಸಿದ್ದ ಲತಾ ಮಂಗೇಶ್ಕರ್ ಭಾರತದ ಪ್ರಸಿದ್ಧ ಗಾಯಕಿಯರಲ್ಲಿ ಒಬ್ಬರು. ಹಿಂದಿ ಸೇರಿ 36 ಭಾರತೀಯ ಭಾಷೆಗಳಲ್ಲಿಯೂ ಹಾಡಿದ್ದಾರೆ. ಶಾಸ್ತ್ರೀಯ-ಸಂಗೀತಕಾರ ಮತ್ತು ರಂಗ-ನಟ ಪಂಡಿತ್ ದೀನಾನಾಥ್ ಮಂಗೇಶ್ಕರ್ ಅವರ ಪುತ್ರಿ ಲತಾ ಮಧ್ಯಪ್ರದೇಶದ ಇಂದೋರಿನಲ್ಲಿ ಜನಿಸಿದರು. ಲತಾ ಅವರ ಮೊದಲ ಹೆಸರು ಹೇಮಾ ಎಂದು.
ಇಂದೋರ್ ನಿಂದ ಲತಾ ಪುಣೆಗೆ ಬಂದರು. ಕೊಲ್ಲಾಪುರದಲ್ಲಿ ಸ್ವಲ್ಪ ದಿನವಿದ್ದು, 1947 ರಲ್ಲಿ ಪರಿವಾರದೊಡನೆ ಮುಂಬಯಿನ ನಾನಾ ಚೌಕ್ ನಲ್ಲಿ ನೆಲೆಸಿದ್ದರು. ಕಳೆದ ಜನವರಿಯಿಂದಲೂ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.