ಸದಾ ಬಿಂದಾಸ್ ಆಗಿ ಇರುವ ಮೂಲಕವೇ ಬಾಲಿವುಡ್ ಹಿರಿಯ ನಟ ಜಾಕಿ ಶ್ರಾಫ್ ಅಭಿಮಾನಿಗಳಿಗೆ ಹೆಚ್ಚು ಇಷ್ಟವಾಗ್ತಾರೆ. ಸದ್ಯ ಅವರು ಸಲ್ಮಾನ್ ಖಾನ್ ಮುಖ್ಯಭೂಮಿಕೆಯ ʼರಾಧೆʼ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.
ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಜಾಕಿ ಶ್ರಾಫ್ ಒಂದು ಕಾಲದಲ್ಲಿ ತಾನು ಸಂಪೂರ್ಣ ದಿವಾಳಿಯಾಗಿದ್ದೆ ಹಾಗೂ ತಾನು ಆರ್ಥಿಕ ಸಂಕಷ್ಟದಿಂದ ಅಂದು ಮಾರಿದ್ದ ಮನೆಯನ್ನ ಟೈಗರ್ ಶ್ರಾಫ್ ಹೇಗೆ ವಾಪಾಸ್ ಪಡೆದುಕೊಂಡ್ರು ಅನ್ನೋದನ್ನ ಹೇಳಿದ್ದಾರೆ.
ನಾನು ನನ್ನ ಜೀವನದಲ್ಲಿ ಹೆಚ್ಚಿನದನ್ನ ಬಯಸಿದವನಲ್ಲ. ನನ್ನ ಬಳಿ ಏನಿದೆಯೋ ಅದರಲ್ಲೇ ಸಂತಸ ಕಂಡವನು. ನನ್ನ ತಾಯಿ ನನಗೆ ಯಾವುದೇ ಕೊರತೆಯಾಗದಂತೆ ಸಾಕಿದ್ದರು. ಶಿಕ್ಷಣ ಪೂರೈಸಿದ ಬಳಿಕ ಮಾಡೆಲಿಂಗ್ ಲೋಕಕ್ಕೆ ಕಾಲಿಟ್ಟ ನನ್ನ ಬಳಿ ಇದ್ದದ್ದು ತಾಯಿಯ ಆಶೀರ್ವಾದ ಮಾತ್ರ. ಯಶಸ್ಸನ್ನ ಪಡೆಯಬೇಕು ಎಂದು ನಾನು ದಿನದಲ್ಲಿ 14 ಗಂಟೆಗಳ ಕಾಲ ದುಡಿದದ್ದೂ ಇದೆ ಎಂದು ಹಳೆಯ ದಿನಗಳನ್ನ ಮೆಲುಕು ಹಾಕಿದ್ರು.
ತಾವು ಸಂಪೂರ್ಣ ದಿವಾಳಿಯಾಗಿದ್ದ ದಿನಗಳನ್ನ ನೆನೆಸಿಕೊಂಡ ಜಾಕಿಶ್ರಾಫ್, ಉದ್ಯಮದಲ್ಲಿ ಏರಿಳಿತಗಳು ಸರ್ವೇ ಸಾಮಾನ್ಯ. ಯಾವಾಗಲು ನಾವು ಲಾಭವನ್ನೇ ಕಾಣಬೇಕು ಎಂದು ಬಯಸಲು ಆಗೋದಿಲ್ಲ. ಒಮ್ಮೊಮ್ಮೆ ಏಳ್ಗೆ ಮತ್ತೊಮ್ಮೆ ಇಳಿತ ಕಾಣಲೇಬೇಕು.
ಆದರೆ ನನಗೆ ನನ್ನ ಮಕ್ಕಳ ಮೇಲೆ ತುಂಬಾನೇ ಹೆಮ್ಮೆ ಇದೆ. ನನ್ನ ಮನೆಯನ್ನ ವಾಪಸ್ ಪಡೆಯಲು ಅವರಿಬ್ಬರ ಸಹಾಯ ತುಂಬಾನೇ ಇದೆ. ನನ್ನ ಪತ್ನಿಗೆ ಮನೆಯನ್ನ ವಾಪಸ್ ಪಡೆಯೋದು ಇಷ್ಟವಿರಲಿಲ್ಲ. ಏನು ಹೋಗಿದೆಯೋ ಅದು ಹೋಗಲಿ ಬಿಡಿ ಎಂದೇ ಹೇಳುತ್ತಿದ್ದಳು. ಆದರೆ ನನ್ನ ಮಗ ಮನೆಯನ್ನ ವಾಪಾಸ್ ಪಡೆದ. ಈ ರೀತಿಯ ಗುಣ ನನ್ನ ಮಕ್ಕಳ ಜೀನ್ಸ್ನಲ್ಲೇ ಇದೆ ಎಂದು ಕೃಷ್ಣಾ ಹಾಗೂ ಟೈಗರ್ರನ್ನ ಹಾಡಿ ಹೊಗಳಿದ್ದಾರೆ.