ತಮ್ಮ ನೆಚ್ಚಿನ ಸೆಲೆಬ್ರಿಟಿಯನ್ನ ಖುಷಿಪಡಿಸಬೇಕು ಅಂದರೆ ಕೆಲ ಅಭಿಮಾನಿಗಳು ಹುಚ್ಚುತನವನ್ನ ಪ್ರದರ್ಶನ ಮಾಡುತ್ತಾರೆ. ಆದರೆ ಈ ವಿಚಾರದಲ್ಲಿ ಎಲ್ಲಾ ಅಭಿಮಾನಿಗಳನ್ನ ಸರಿಗಟ್ಟಿರುವ ಬ್ರಿಟಿಷ್ ಅಭಿಮಾನಿಯೊಬ್ಬ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ 2016ರಲ್ಲಿ ನಿಧನರಾಗಿದ್ದ ಪಾಪ್ ಗಾಯಕ ಜಾರ್ಜ್ ಮೈಕಲ್ ಅವರು ಉಳಿದುಕೊಂಡಿದ್ದ ಮನೆಯನ್ನ ಬರೋಬ್ಬರಿ 1,39,78,09,100.00ರೂಪಾಯಿ ನೀಡಿ ಖರೀದಿ ಮಾಡಿದ್ದಾರೆ.
ವೈದ್ಯಕೀಯ ಸಂವಹನ ಸಂಸ್ಥೆಯನ್ನ ನಡೆಸುತ್ತಿರುವ ಸ್ಟಿಫನ್ ಕ್ಯಾಮರೂನ್, ಕಳೆದ ನಾಲ್ಕು ವರ್ಷಗಳಿಂದ ಹೊಸ ಆಸ್ತಿಗಾಗಿ ಹುಡುಕಾಟ ನಡೆಸುತ್ತಿದ್ದರು. ಇದೀಗ ಉತ್ತರ ಲಂಡನ್ನಲ್ಲಿರುವ ದಿವಂಗತ ಪಾಪ್ ಗಾಯಕನಿಗೆ ಸೇರಿದ್ದ ಏಳು ಕೋಣೆಗಳ ಭವ್ಯ ಬಂಗಲೆಯನ್ನ ಖರೀದಿ ಮಾಡಿದ್ದಾರೆ. ಅಲ್ಲದೇ ನೆಚ್ಚಿನ ತಾರೆ ವಾಸವಿದ್ದ ಮನೆಗೆ ಅತಿ ಶೀಘ್ರದಲ್ಲೇ ಶಿಫ್ಟ್ ಆಗಲಿದ್ದೇನೆ ಎಂದು ಸಂತಸ ಹೊರಹಾಕಿದ್ದಾರೆ.
ವಿವಾಹಿತ ಕ್ಯಾಮರೂನ್ಗೆ ಮೂವರು ಮಕ್ಕಳಿದ್ದಾರೆ. ಜಾರ್ಜ್ ಮೈಕಲ್ ದೊಡ್ಡ ಅಭಿಮಾನಿಯಾಗಿದ್ದ ಕ್ಯಾಮರೂನ್ ಇದೀಗ ಅವರು ವಾಸವಿದ್ದ ಮನೆಯನ್ನೇ ಖರೀದಿ ಮಾಡುವ ಮೂಲಕ ತಮ್ಮ ಅಭಿಮಾನ ಯಾವ ಮಟ್ಟದಲ್ಲಿದೆ ಎಂದು ತೋರಿಸಿಕೊಟ್ಟಿದ್ದಾರೆ. ಹೊಸ ಮನೆಗೆ ಯಾವಾಗ ಶಿಫ್ಟ್ ಆಗುತ್ತೇನೆ ಎನ್ನುವುದರ ಬಗ್ಗೆ ಕ್ಯಾಮರೂನ್ ಯಾವುದೇ ನಿಗದಿತ ದಿನಾಂಕವನ್ನ ಬಹಿರಂಗ ಮಾಡಿಲ್ಲ.