ಬೆಂಗಳೂರು: ಡ್ರಗ್ಸ್ ಜಾಲದ ಜೊತೆ ನಂಟು ಆರೋಪ ಪ್ರಕರಣದಲ್ಲಿ ಬಂಧನಕ್ಕೀಡಾಗಿದ್ದ ಸ್ಯಾಂಡಲ್ ವುಡ್ ನಟಿ ಸಂಜನಾ ಗಲ್ರಾನಿಗೆ ಕೊನೆಗೂ ಬಿಡುಗಡೆ ಭಾಗ್ಯ ಸಿಕ್ಕಿದೆ. ಸಂಜನಾ ಅವರಿಗೆ ಹೈಕೋರ್ಟ್ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.
ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೀಡಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಸಂಜನಾ ಗಂಭೀರ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಅವರಿಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆ. ಇಲ್ಲವಾದಲ್ಲಿ ಬ್ರೇನ್ ಹ್ಯಾಮರೇಜ್ ಆಗುವ ಸಾಧ್ಯತೆಯಿದೆ ಹೀಗಾಗಿ ತಕ್ಷಣ ಜಾಮೀನು ನೀಡುವಂತೆ ಸಂಜನಾ ಪರ ವಕೀಲರು ಹೈಕೋರ್ಟ್ ಗೆ ವೈದ್ಯರ ಸರ್ಟಿಫಿಕೇಟ್ ಜೊತೆಗೆ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ ನ್ಯಾ.ಶ್ರೀನಿವಾಸ್ ಹರೀಶ್ ಅವರು ಸಂಜನಾಗೆ ಜಾಮೀನು ಮಂಜೂರು ಮಾಡಿದ್ದಾರೆ.
ಸಂಜನಾ ಅವರು 3 ಲಕ್ಷ ರೂ ಗಳ ವೈಯಕ್ತಿಕ ಬಾಂಡ್ ನೊಂದಿಗೆ ಇಬ್ಬರ ಶ್ಯೂರಿಟಿ ಒದಗಿಸಬೇಕು ಹಾಗೂ ಪ್ರತಿ ತಿಂಗಳು ಎರಡು ಬಾರಿ ಠಾಣೆಗೆ ಹಾಜರಾಗಬೇಕು ಎಂದು ನ್ಯಾಯಾಲಯ ಷರತ್ತು ವಿಧಿಸಿದೆ.