alex Certify ಸ್ಲೀವ್ ಲೆಸ್ ನಲ್ಲಿ ಸೀತಾಮಾತೆ, ಚರ್ಮದ ವಸ್ತ್ರದಲ್ಲಿ ಹನುಮಂತ: ‘ಆದಿಪುರುಷ್’ ವಿರುದ್ಧ ಹಿಂದೂ ಜನಜಾಗೃತಿ ಸಮಿತಿ ಆಕ್ರೋಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಲೀವ್ ಲೆಸ್ ನಲ್ಲಿ ಸೀತಾಮಾತೆ, ಚರ್ಮದ ವಸ್ತ್ರದಲ್ಲಿ ಹನುಮಂತ: ‘ಆದಿಪುರುಷ್’ ವಿರುದ್ಧ ಹಿಂದೂ ಜನಜಾಗೃತಿ ಸಮಿತಿ ಆಕ್ರೋಶ

‘ಆದಿಪುರುಷ’ ಚಿತ್ರದಲ್ಲಿ ಕಾಲ್ಪನಿಕತೆ ಆಕ್ಷೇಪಾರ್ಹ, ಧರ್ಮಗ್ರಂಥವನ್ನು ಅಧ್ಯಯನ ಮಾಡಿ ಪೌರಾಣಿಕ ಚಲನಚಿತ್ರ ನಿರ್ಮಿಸಬೇಕು ಎಂದು ಹಿಂದೂ ಜನಜಾಗೃತಿ ಸಮಿತಿ ರಾಜ್ಯ ವಕ್ತಾರ ಮೋಹನ ಗೌಡ ಆಗ್ರಹಿಸಿದ್ದಾರೆ.

ಭಗವಾನ್ ಶ್ರೀರಾಮನನ್ನು ಆಧರಿಸಿದ ‘ಆದಿಪುರುಷ’ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಹಲವಾರು ಆಕ್ಷೇಪಣೆಗಳನ್ನು ಎದುರಿಸುತ್ತಿದೆ, ಕೆಲವರು ಚಲನಚಿತ್ರವನ್ನು ಬೆಂಬಲಿಸುತ್ತಲೂ ಇದ್ದಾರೆ. ವಾಸ್ತವದಲ್ಲಿ ಪ್ರಭು ಶ್ರೀರಾಮನ ವಿಷಯದಲ್ಲಿ ಭವ್ಯ ಚಲನಚಿತ್ರವನ್ನು ನಿರ್ಮಿಸುವುದು ಶ್ಲಾಘನೀಯವಾಗಿದೆ.

ಆದರೆ, ಅದನ್ನು ನಿರ್ಮಿಸುವಾಗ ವಾಸ್ತವವನ್ನು ತೆಗೆದು ಕಾಲ್ಪನಿಕಕ್ಕೆ ಪ್ರಾಮುಖ್ಯ ನೀಡಿದರೆ, ಸಮಾಜದಲ್ಲಿ ಸುಳ್ಳು ಇತಿಹಾಸವನ್ನು ಬಿಂಬಿಸುವ ಪಾಪ ತಟ್ಟುತ್ತದೆ. ಇದು ‘ಆದಿಪುರುಷ’ ಚಲನಚಿತ್ರದ ಟೀಸರ್‌ನಿಂದ ಗಮನಕ್ಕೆ ಬರುತ್ತಿದೆ. ಈ ಚಲನಚಿತ್ರದಲ್ಲಿ ತೋರಿಸಿರುವ ದೃಶ್ಯಗಳು ಕಾಲ್ಪನಿಕ ಮತ್ತು ಪೌರಾಣಿಕ ಸನ್ನಿವೇಶವನ್ನು ಬಿಟ್ಟು ಯಾವುದೆಲ್ಲ ದೃಶ್ಯಗಳನ್ನು ತೋರಿಸಲಾಗಿದೆಯೋ ಅವು ಆಕ್ಷೇಪಾರ್ಹವಾಗಿವೆ ಎಂದು ತಿಳಿಸಿದ್ದಾರೆ.

ಪ್ರಭು ಶ್ರೀರಾಮ ಇಡೀ ಹಿಂದೂ ಸಮಾಜದ ಆರಾಧ್ಯ ದೇವರಾಗಿದ್ದಾರೆ. ಅವರನ್ನು ಆಧರಿಸಿದ ಚಲನಚಿತ್ರವು ಕಲಾಸ್ವಾತಂತ್ರ್ಯದ ಹೆಸರಿನಲ್ಲಿ ಕಾಲ್ಪನಿಕ ಮಾಡದೇ ಧರ್ಮಗ್ರಂಥವನ್ನು ಅಧ್ಯಯನ ಮಾಡಿ ನಿರ್ಮಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಚಲನಚಿತ್ರದ ಟೀಸರ್‌ನಲ್ಲಿ ಹಿಂದೂ ಸಮಾಜಕ್ಕೆ ಒಪ್ಪಿಗೆಯಾಗದ ದೃಶ್ಯಗಳನ್ನು ನಿರ್ಮಾಪಕರು ಸಾಮಾಜಿಕ ಭಾವನೆಯೆಂದು ಅಧ್ಯಯನ ಮಾಡಬೇಕು ಮತ್ತು ಅವುಗಳಲ್ಲಿ ಅವಶ್ಯಕವಿರುವ ಬದಲಾವಣೆ ಮಾಡಬೇಕು.

ಟೀಸರ್‌ನಲ್ಲಿರುವ ಆಕ್ಷೇಪಾರ್ಹ ಅಂಶಗಳು ಹೀಗಿವೆ

ಚರ್ಮದ ವಸ್ತ್ರದಲ್ಲಿ ಹನುಮಂತ

ಹನುಮಂತನನ್ನು ಚರ್ಮದ ವಸ್ತ್ರವನ್ನು ತೊಟ್ಟಿರುವಂತೆ ತೋರಿಸಿ ಮುಕುಟ ಧರಿಸದೇ ಇರುವುದು, ಈ ಬಗ್ಗೆ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ ಮಿಶ್ರಾ ಕೂಡ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹನುಮಾನ್ ಚಾಲೀಸಾದ ಶ್ಲೋಕಗಳಲ್ಲಿ ಹನುಮಂತನ ವಸ್ತ್ರಗಳನ್ನು ಸಹ ವರ್ಣಿಸಲಾಗಿದೆ, ಅದರಂತೆ ಹನುಮಂತನ ಉಡುಪು ಇರಬೇಕು; ಆದರೆ ಇಲ್ಲಿ ಹಾಗೆ ಧರಿಸಿಲ್ಲ.

ಹನುಮಂತನಿಗೆ ಗಡ್ಡವಿದೆ ಮೀಸೆ ಇಲ್ಲ

ಯಾವುದೇ ಹಿಂದೂ ದೇವರುಗಳಿಗೆ ಇಂತಹ ಕೇಶವಿನ್ಯಾಸವಿಲ್ಲ. ಮತ್ತೊಂದೆಡೆ, ಮೀಸೆ ಇಲ್ಲದೆ ಗಡ್ಡವನ್ನು ಇಟ್ಟುಕೊಳ್ಳುವುದು ಮುಸಲ್ಮಾನರ ಪದ್ದತಿಯಾಗಿದೆ. ಹಿಂದೂ ದೇವತೆಗಳನ್ನು ಈ ರೀತಿಯಲ್ಲಿ ತೋರಿಸುವುದನ್ನು ಹಿಂದೂ ಸಮಾಜವು ಎಂದಿಗೂ ಸಹಿಸುವುದಿಲ್ಲ.

ಸ್ಲೀವ್ ಲೆಸ್ ಬಟ್ಟೆಯಲ್ಲಿ ಸೀತೆ ಮಾತೆ

ಭೂದೇವಿಯಂತಹ ಸೀತಾ ಮಾತೆಯನ್ನು ಈ ರೀತಿ ಸ್ಲೀವ್ ಲೆಸ್ ಬಟ್ಟೆಯಲ್ಲಿ ತೋರಿಸುವುದು ಅತ್ಯಂತ ಅಯೋಗ್ಯವಾಗಿದೆ.

ಮೊಘಲರಂತೆ ರಾವಣನ ವ್ಯಕ್ತಿತ್ವ

ರಾವಣನು ತಪಸ್ಸು ಮಾಡಿ ಶಂಕರನನ್ನು ಪ್ರಸನ್ನಗೊಳಿಸಿದ್ದನು, ಅವನು ಪಂಡಿತ ಬ್ರಾಹ್ಮಣನಾಗಿದ್ದನು; ಆದರೆ ಅವನ ಅಹಂಕಾರ ಮತ್ತು ದುರ್ಜನಪ್ರವೃತ್ತಿಗಳಿಂದ ಅವನ ನಾಶವಾಯಿತು. ಇದನ್ನು ಮೊಘಲ್ ಆಕ್ರಮಣಕಾರರಿಗೆ ಹೋಲಿಸಲು ಎಂದಿಗೂ ಸಾಧ್ಯವಿಲ್ಲ.

ರಾವಣನ ಪುಷ್ಪಕ ವಿಮಾನ

ಇಲ್ಲಿ ರಾವಣನ ಪುಷ್ಪಕ ವಿಮಾನ ಬದಲು ಅನಿಮೇಟೆಡ್ ಕ್ರೂರ ಪಕ್ಷಿಯನ್ನು ತೋರಿಸಲಾಗಿದೆ. ಇದು ಅತ್ಯಂತ ಅಯೋಗ್ಯವಾಗಿದೆ ಎಂದು ಕಿಡಿಕಾರಿದ್ದಾರೆ.

ನಿರ್ದೇಶಕ ಓಂ ರಾವುತ್ ಅವರು ಈ ಹಿಂದೆ ಉತ್ತಮ ಚಲನಚಿತ್ರಗಳನ್ನು ಮಾಡಿದ್ದಾರೆ, ಆದ್ದರಿಂದ ಅವರು ಈ ಚಲನಚಿತ್ರದಲ್ಲಿಯೂ ಉತ್ತಮವಾಗಿ ಪ್ರಯತ್ನಿಸಿರಬಹುದು; ಆದರೆ ಟೀಸರ್ ನಿಂದ ಮೇಲಿನ ಕೆಲವು ಆಕ್ಷೇಪಗಳು ಗಮನಕ್ಕೆ ಬಂದಿವೆ. ಪೂರ್ಣ ಚಲನಚಿತ್ರದಲ್ಲಿ ಇನ್ನಷ್ಟು ಆಕ್ಷೇಪಾರ್ಹ ದೃಶ್ಯಗಳನ್ನು ಹೊಂದಿರುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ಆದರೆ ಚಲನಚಿತ್ರ ಬಿಡುಗಡೆಗೂ ಮುನ್ನ ಸಂತ-ಮಹಂತರು, ಇತಿಹಾಸ ಅಧ್ಯಯನಕಾರರು, ಹಿಂದೂ ಸಂಘಟನೆಗಳ ಪ್ರತಿನಿಧಿಗಳಿಗೆ ತೋರಿಸಿ ಸಂದೇಹಗಳನ್ನು ನಿವಾರಿಸಿ ನಂತರವಷ್ಟೇ ಚಿತ್ರ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ತಮ್ಮ ಚಿತ್ರಗಳಿಗೆ ವಿವಾದ ಸೃಷ್ಟಿಸಿ ಗಲ್ಲಾಪೆಟ್ಟಿಗೆ ತುಂಬಿಸಿಕೊಳ್ಳುವ ಅನೇಕ ಚಿತ್ರ ನಿರ್ಮಾಪಕರಿದ್ದಾರೆ. ಅವರಂತೆ ತಾವೂ ಆಗಬಾರದು ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...