alex Certify ದೇಹ ಕಪ್ಪಗಿದ್ದರೂ ಚಿಂತನೆ ಅಪರಂಜಿಯಂತಿರಲಿ….. | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇಹ ಕಪ್ಪಗಿದ್ದರೂ ಚಿಂತನೆ ಅಪರಂಜಿಯಂತಿರಲಿ…..

ಸಮಾಜದಲ್ಲಿನ ಅಂಕು-ಡೊಂಕುಗಳನ್ನು ತಮ್ಮದೇ ವಿಶಿಷ್ಠ ಮಾತಿನ ಶೈಲಿ ವಿಡಂಬನೆ ಮಾಡುವ ಮೂಲಕ ತಿದ್ದುವ ಯತ್ನ ಮಾಡುವ ನವರಸ ನಾಯಕ ಜಗ್ಗೇಶ್, ಇದೀಗ ಕಪ್ಪು-ಬಿಳಿ ಬಗ್ಗೆ ಅರಿವು ಮೂಡಿಸಿದ್ದು, ದೇಹ ಕಪ್ಪಾಗಿದ್ದರೂ ಮನಸ್ಸು ಕಪ್ಪಾಗಿರಬಾರದು ಎಂದು ಹೇಳಿದ್ದಾರೆ.

ಈ ಕುರಿತು ನಟ ದುನಿಯಾ ವಿಜಿ ಜಗ್ಗೇಶ್ ಗೆ ಕರೆ ಮಾಡಿ ಬೇಸರ ವ್ಯಕ್ತಪಡಿಸಿದ ಬಗ್ಗೆ ಹಾಗೂ ತಾವು ಅವರಿಗೆ ಹೇಳಿದ ಸಮಾಧಾನದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಜಗ್ಗೇಶ್ ಬರೆದುಕೊಂಡಿದ್ದಾರೆ.

ತನಗೆ ಕರೆ ಮಾಡಿದ ವಿಜಿ ಅಣ್ಣ ನಾವು ನೀವು ಕಪ್ಪಾಗಿ ಹುಟ್ಟಿದ್ದು ಕರ್ಮನಾ? ಎಂದು ದುಃಖದಿಂದ ಕೇಳಿಬಿಟ್ಟ! ನಾನು ಯಾಕೆ ಈ ಪ್ರಶ್ನೆ ಎಂದು ಕೇಳಿದೆ! ಅದಕ್ಕೆ ಅವನು ಹೇಳಿದ್ದು!! ನೋಡಿ ಅಣ್ಣ ನಾವು ಎಷ್ಟೇ ಶ್ರಮಪಟ್ಟು ಜೀವನ ಕಟ್ಟಿಕೊಂಡರು ಸಮಾಜ ಚರ್ಮದ ಬಣ್ಣದಿಂದ ನಮ್ಮನ್ನು ಅಳೆಯುತ್ತಾರೆ! ನಾವು ನೂರು ಶ್ರೇಷ್ಠ ಸಾಧನೆ ಮಾಡಿ ಸಣ್ಣತಪ್ಪು ಅರಿಯದಂತೆ ನಮ್ಮಿಂದ ಆಗಿಬಿಟ್ಟರೆ ನಮ್ಮ ಸಾಧನೆ ಶೂನ್ಯ ಮಾಡಿ ಹಂಗಿಸಿ ಬಿಡುತ್ತಾರೆ! ಅದೆ ಬಿಳಿ ಚರ್ಮದ ಮನುಜರ ಆಂತರ್ಯವೆಲ್ಲಾ ಕೊಳೆತು ಸಾಧನೆ ಶೂನ್ಯವಾದರು ಅವರ ಬಿಳಿ ಬಣ್ಣಕ್ಕೆ ಸಮಾಜ ಅವರನ್ನ ನಂಬಿ ಬಿಡುತ್ತಾರೆ ಎಂದ! ನಾನು ಅದಕ್ಕೆ ಉದಾಹರಣೆ ಎಂದು ಕೇಳಿದಾಗ ಡ್ರಗ್ಸ್ ದಂಧೆಯಲ್ಲಿನ ಮಹಾಮಹಿಮರ ಹೆಸರು ಹೇಳಿದ! ಉತ್ತರವಿಲ್ಲದೆ ಕ್ಷಣಕಾಲ ಮೌನವಾಗಿ ನನ್ನ ಮೈಚರ್ಮ ನೋಡಿಕೊಂಡೆ ಕಾರಣ ನಾನು ವಿಜಿಗಿಂತ ಕಪ್ಪು!

ಅದಕ್ಕೆ ನಾನು ವಿಜಿಗೆ ಇದ್ದ ಅನುಮಾನ ದುಃಖ ದೂರ ಮಾಡಲು ಈ ಉದಾಹರಣೆ ಹೇಳಿದೆ…ನೋಡು ವಿಜಿ ನಾವು ಹುಟ್ಟಿದ್ದು ಮದ್ಯಮವರ್ಗದ ಗ್ರಾಮೀಣ ಭಾಗದ ಬಡ ಕುಟುಂಬದ ತಂದೆ ತಾಯಿ ಉದರದಲ್ಲಿ.! ಅನ್ನಕ್ಕೆ ಕೂಲಿ ಮಾಡಿ ತಿನ್ನುವ ದೇಹ ಪರಿಸರದಲ್ಲಿ ಬೆಂದು ಕೃಷ್ಣ ವರ್ಣವಾಗಿರುತ್ತದೆ ಅಂತ ಉದರದಲ್ಲಿ ಕಪ್ಪಾಗಿ ಹುಟ್ಟುವುದು ನಮ್ಮ ಜನ್ಮಾಂತರ ಪುಣ್ಯ! ಜಗಕ್ಕೆ ಗುರು ಕೃಷ್ಣ ಕಪ್ಪು! ಶತೃ ಸಂಹಾರಕ ಭೈರವ ಕಪ್ಪು! ಲಯಕಾರಕ ಶಿವ ಕಪ್ಪು! ಕಾಳಿಮಾತೆ ಕಪ್ಪು! ದೇಹ ಕಪ್ಪಾಗಿದ್ದರೂ ಪರವಾಗಿಲ್ಲಾ ಆದರೆ ಹೃದಯ ಕಪ್ಪಾಗಿ ಇರಬಾರದು! ಬಿಳಿ ಚರ್ಮಕ್ಕೆ ಜನ ಮರುಳಾಗೋದು 100% ಸತ್ಯ! ಗುಣವಂತ ಹೆಣ್ಣು ಕಪ್ಪಗಿದ್ದರೆ ಮೂಗು ಮುರಿದು ಬಿಳಿ ಹೆಣ್ಣ ಬೇಗ ಒಪ್ಪಿ ಮದುವೆ ಆಗಿ ನಂತರ ಜೀವನ ಪೂರ ಬಾಯಿ ಬಡಿದುಕೊಂಡು ಬಾಳುವವರ ಉದಾಹರಣೆಯಾಗಿ ಬಹಳ ಮಂದಿ ನೋಡಿದ್ದೇವೆ! ವಿಶೇಷವಾಗಿ ನಮ್ಮ ಕಲಾರಂಗದಲ್ಲಿ ಚರ್ಮ ಬಿಳಿ ಇದ್ದರಂತು ಅವರ ಮೇಲೆ ದೇವತೆ ರಂಬೆ ಕೊಂಬೆ ಕೆರೆಕಟ್ಟೆ ಎಂದು ಹಾಡು ಬರೆದು ಮೆರೆಸುತ್ತಾರೆ! ಜಾಲತಾಣವೆಲ್ಲಾ ಅಂತ ಬಿಳಿ ಸುಂದರಿಯೇ ಆವರಿಸಿ ಹಾರಾಡುತ್ತಾರೆ! ಎಷ್ಟೋ ಪ್ರತಿಭೆ ಕಪ್ಪು ಇದ್ದರೆ ಅವಕಾಶ ವಂಚಿತರಾಗುತ್ತಾರೆ.! ಅದು ಅವರವರ ಅದೃಷ್ಟ! ಎಂದು ಸಮಾಧಾನ ಹೇಳಿದೆ!

ಅವನು ದೂರವಾಣಿ ಇಟ್ಟಮೇಲೆ ತಲೆಯಲ್ಲಿ ಕಪ್ಪು ಎನ್ನುವ ಹುಳ ಆವರಿಸಿತು! ಮೈಬಣ್ಣ ಕಪ್ಪಗಿದ್ದರು ಪರವಾಗಿಲ್ಲಾ ಚಿಂತನೆ ಅಪರಂಜಿಯಂತೆ ಇರಲಿ..!! ನಾವು ಶವವಾಗಿ ಸುಟ್ಟಾಗ ಕಪ್ಪುಬಿಳಿ ಬೇದವಿಲ್ಲದೆ ದೇಹ ಬೂದಿಯಾಗುತ್ತದೆ..ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...