ಕಲಬುರಗಿ: ಲಂಚ ಪಡೆಯುವಾಗ ಸಿಕ್ಕಿಬಿದ್ದ ಎಂಜಿನಿಯರ್ ಗೆ ನಾಲ್ಕು ವರ್ಷ ಜೈಲು ಶಿಕ್ಷೆ ಮತ್ತು 20 ಸಾವಿರ ರೂಪಾಯಿ ದಂಡ ವಿಧಿಸಿ ಕಲಬುರಗಿ ಜಿಲ್ಲಾ ನ್ಯಾಯಾಲಯ ಆದೇಶಿಸಿದೆ.
ಸಿವಿಲ್ ಕಾಮಗಾರಿಯೊಂದರ ಹಣ ಬಿಡುಗಡೆಗೆ ಶೇಕಡ 4ರಷ್ಟು ಲಂಚ ಪಡೆದುಕೊಳ್ಳುವಾಗ ಸಿಕ್ಕಿ ಬಿದ್ದಿದ್ದ ಜೇವರ್ಗಿ ಪುರಸಭೆಯ ಆಗಿನ ಕಿರಿಯ ಇಂಜಿನಿಯರ್ ನಾನಾಸಾಬ್ ಅಮೃತಪ್ಪ ಮಡಿವಾಳ ಶಿಕ್ಷೆಗೊಳಗಾದವರು.
ಗುತ್ತಿಗೆದಾರ ಗೋಪಾಲ್ ಅವರು ಜೇವರ್ಗಿ ಪುರಸಭೆ ವ್ಯಾಪ್ತಿಯಲ್ಲಿ ಅಂಬೇಡ್ಕರ್ ಮೂರ್ತಿ ಸ್ಥಳಾಂತರ ಮತ್ತು ನಾಲೆ ಮೇಲೆ ವೇದಿಕೆ ನಿರ್ಮಿಸುವ 35 ಲಕ್ಷ ರೂ. ಮೊತ್ತದ ಕಾಮಗಾರಿಯನ್ನು 2016- 17 ರಲ್ಲಿ ಗುತ್ತಿಗೆ ಪಡೆದುಕೊಂಡಿದ್ದರು. ಈ ಕಾಮಗಾರಿಗೆ ಸಂಬಂಧಿಸಿದಂತೆ 6.70 ಲಕ್ಷ ರೂ. ಮೊತ್ತದ ಬಿಲ್ ಪಾಸ್ ಮಾಡಲು ಎಂಜಿನಿಯರ್ ನಾನಾಸಾಬ್ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಲಂಚದ ಹಣ ಪಡೆಯುವಾಗ ಸಿಕ್ಕಿಬಿದ್ದಿದ್ದ ಅವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಜಿ.ಎಲ್. ಲಕ್ಷ್ಮೀನಾರಾಯಣ ಅವರು ವಿಚಾರಣೆ ನಡೆಸಿ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

