ಬೆಂಗಳೂರು: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಅದಿಕಾರಿಗಳು ದಾಳಿ ನಡೆಸಿದ ಪ್ರಕರಣ ಸಂಬಂಧ ಇಡಿ ನಿರ್ದೇಶಕ ರಾಹುಲ್ ನವೀನ್ ಖುದ್ದಾಗಿ ಪರಿಶೀಲನೆ ನಡೆಸುತ್ತಿದ್ದು, ಇಡಿ ಅಧಿಕಾರಿಗಳ ಈ ನಡೆ ತೀವ್ರ ಕುತೂಹಲ ಮೂಡಿಸಿದೆ.
ದೆಹಲಿಯಿಂದ ಬೆಂಗಳೂರಿಗೆ ಇಡಿಯ ನಿರ್ದೇಶಕ ರಾಹುಲ್ ನೇತೃತ್ವದ ತಾಂತ್ರಿಕ ಸಮಿತಿ ತಂಡ ಆಗಮಿಸಿದೆ. ಇವರು 2 ದಿನ ಬೆಂಗಳೂರಿನಲ್ಲೇ ಉಳಿಯಲಿದ್ದು, ಹಿರಿಯ ಅಧಿಕಾರಿಗಳಿಂದ ಇಂದು ಮತ್ತು ನಾಳೆ ದಾಖಲೆಗಳ ಪರಿಶೀಲನೆ ನಡೆಸಲಿದ್ದಾರೆ.
ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಇಡಿ ದಾಳಿ ವೇಳೆ 3.3 ಕೋಟಿ ರೂಪಾಯಿ ನಗದು ಮತ್ತು ವಿದೇಶಿ ಕರೆನ್ಸಿ ಪತ್ತೆಯಾಗಿದ್ದ ಹಿನ್ನೆಲೆ ಯಾವುದೇ ಕ್ಷಣದಲ್ಲಿ ಇಡಿಯಿಂದ ನೋಟಿಸ್ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಇಡಿ ತನಿಖೆ ನಡೆಸುತ್ತಿರುವ ಪ್ರಕರಣಗಳ ಪರಿಶೀಲನೆ ಸಂಬಂಧ ಸ್ವತಃ ಇಡಿ ನಿರ್ದೇಶಕರೇ ಕರ್ನಾಟಕಕ್ಕೆ ಬಂದಿರುವುದು ಭಾರಿ ಕುತೂಹಲ ಮೂಡಿಸಿದೆ. ಸತೀಶ್ ಜಾರಕೊಹೊಳಿ ಪ್ರಕರಣ ಸಂಬಂಧ ವಿದೇಶಿ ಹೂಡಿಕೆ, ಗಣಿ ಕಂಪನಿಗಳಲ್ಲಿ ಪಾಲುದಾರಿಕೆಯ ಬಗ್ಗೆ ತಾಂತ್ರಿಕ ತಂಡ ಮಾಹಿತಿ ಕಲೆಹಾಕಲಿದೆ.
ಫೆಮಾ ಕಾಯ್ದೆ ಉಲ್ಲಂಘನೆ ಸ್ವರೂಪದ ಬಗ್ಗೆಯೂ ಕಡತಗಳ ಪರಿಶೀಲನೆ ನಡೆಯಲಿದೆ. ಇವುಗಳ ಜೊತೆಗೆ ಲೋಕೋಪಯೋಗಿ ಇಲಾಖೆಯಿಂದ ಕಿಕ್ ಬ್ಯಾಕ್, ಗುತ್ತಿಗೆ ಕಂಪನಿಯಿಂದ ಹಣ ಪಡೆದ ಆರೋಪಗಳ ಸಂಬಂಧವೂ ದಾಖಲೆಗಳ ಪರಿಶೀಲನೆ ನಡೆಸಲಿದೆ. ಜೊತೆಗೆ ಕೆಪಿಎಸ್ಸಿ ಹಗರಣ, ಮೂಡಾ ಕೇಸ್ ಮತ್ತು ವಾಲ್ಮೀಕಿ ಪ್ರಕರಣಗಳ ಪ್ರಗತಿಯನ್ನೂ ಸಹ ರಾಹುಲ್ ನವೀನ್ ಖುದ್ದಾಗಿ ಪರಿಶೀಲಿಸಲಿದ್ದಾರೆ ಎನ್ನಲಾಗಿದೆ.
ಈ ಹಿಂದೆ ವಾಲ್ಮೀಕಿ ನಿಗಮ ಹಗರಣ ಸಂಬಂಧ ರಾಜ್ಯ ಸರ್ಕಾರದ ಎಸ್‌ಐಟಿ ವರದಿಯಲ್ಲಿ ನಾಗೇಂದ್ರ ಅವರಿಗೆ ಕ್ಲೀನ್ ಚಿಟ್ ಸಿಕ್ಕಿತ್ತಾದರೂ, ಕೇಂದ್ರ ತನಿಖಾ ಸಂಸ್ಥೆಗಳಾದ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ನಡೆಸಿದ ಪ್ರತ್ಯೇಕ ತನಿಖೆಗಳಲ್ಲಿ ನಾಗೇಂದ್ರ ಅವರೇ ಈ ಹಗರಣದ ಮುಖ್ಯ ಸೂತ್ರಧಾರಿ ಎಂದು ಆರೋಪಿಸಿ, ಅವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸಚಿವ ಸತೀಶ್ ಜಾರಹೊಳಿ ಅವರ ಪ್ರಕರಣ ಸಂಬಂಧ ಇಡಿ ಅಧಿಕಾರಿಗಳ ನಡೆ ಭಾರಿ ಕುತೂಹಲ ಮೂಡಿಸಿದೆ. ಮುಂದಿನ ದಿನಗಳಲ್ಲಿ ಸತೀಶ್ ಜಾರಕಿಹೊಳಿಗೂ ಮತ್ತಷ್ಟು ಸಂಕಷ್ಟ ಎದುರಾಗುವ ಸಾಧ್ಯ ಇದೆ.
ಇಡಿಗೆ ದೂರು ನೀಡಿದ್ದು ಯಾರೆಂಡು ಗೊತ್ತಿದೆ ಎಂದ ಸತೀಶ್ ಜಾರಕಿಹೊಳಿ
ನನ್ನ ವಿರುದ್ಧ ಇಡಿ ಅಧಿಕಾರಿಗಳಿಗೆ ದೂರು ಕೊಟ್ಟವರ ಬಗ್ಗೆ ನನಗೆ ಗೊತ್ತಿದೆ. ಸಿಎಂ ಡಿ.ಕೆ.ಶಿವಕುಮಾರ್ಗೆ ದೂರು ಕೊಟ್ಟವರ ಬಗ್ಗೆ ಹೇಳಿದ್ದೇನೆ ಎಂದು ಸಚಿವ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ದೂರು ಕೊಟ್ಟವರು ಯಾರು ಅಂತ ಗೊತ್ತಿದೆ, ಸಿಎಂ ಡಿ.ಕೆ.ಶಿವಕುಮಾರ್ ಗಮನಕ್ಕೆ ತಂದಿದ್ದೇನೆ. ಇಲ್ಲಿ ನಮ್ಮ ಪಕ್ಷದವರು ಇರಬಹುದು. ಯಾರೇ ಇದ್ದರೂ ಮುಖ್ಯಮಂತ್ರಿಗಳು ಗಮನವಹಿಸುತ್ತಾರೆ. ಬಿಜೆಪಿಯವರಿರಬಹುದು ಅಥವಾ ಅವರ ಸಂಬಂಧಿ ಇರಬಹುದು. 50:50 ಇದೆ, ಯಾರು ಅಂತಾ ಅವರಿಗೆ ಗೊತ್ತಿದೆ, ಹೇಳಿದ್ದೇವೆ ಎಂದರು.
ಇಡಿ ಅಧಿಕಾರಿಗಳು ವಿಚಾರಣೆಗೆ ಕರೆದರೆ ದಾಖಲೆ ಕೊಡುತ್ತೇವೆ. ಹೂಡಿಕೆ ಅಂದರೆ ಅಧಿಕೃತವಾಗಿ ವರ್ಗಾವಣೆ ಆಗಬೇಕಲ್ಲವೇ? ಹೆಚ್ಚಿನ ತನಿಖೆ ಮಾಡಬೇಕೆಂದು ಇ.ಡಿ ಅಧಿಕಾರಿಗಳು ಹೇಳಿದ್ದಾರೆ. ನೋಟಿಸ್ ಕೊಟ್ಟು ಕರೆಸಿದರೆ ಸರಿಯಾದ ಉತ್ತರ ಕೊಡುತ್ತೇನೆ. ಇಡಿ ಅಧಿಕಾರಿಗಳು ಕರೆಯಲಿ, ಉತ್ತರ ಕೊಡುತ್ತೇನೆ ಎಂದು ಹೇಳಿದ್ದಾರೆ.
ವಿದೇಶದಲ್ಲಿ ಹೂಡಿಕೆ ಮಾಡಿಲ್ಲ ಅಂತಾ ಇಡಿ ಅಧಿಕಾರಿಗಳಿಗೆ ಹೇಳಿದ್ದೇನೆ. ಇನ್ನೂ ಬಹಳ ಪ್ರಕ್ರಿಯೆ ಇದೆ, 3-6 ತಿಂಗಳ ಅವಕಾಶ ಇದೆ. ಅನುಮಾನಾಸ್ಪದ ಅಂತಾ ಹೇಳಿದ್ದಾರೆ, ಇದೇ ಫೈನಲ್ ಅಲ್ಲ. ಇನ್ನೂ ಪ್ರಗತಿ ಹಂತದಲ್ಲಿದೆ ಅಂತಾ ಪ್ರೆಸ್ನೋಟ್ನಲ್ಲೇ ಇದೆ. ಮೇಲ್ನೋಟಕ್ಕೆ ಹೂಡಿಕೆ ಇದೆ ಅಂತಿದ್ದಾರೆ ಎಂದರು. ಇಡಿ ಅಧಿಕಾರಿಗಳು ಕರೆದಾಗ ವಿಚಾರಣೆಗೆ ಹೋಗುತ್ತೇವೆ. ನಮ್ಮ ಸೇಫ್ಟಿಯಲ್ಲಿ ನಾವು ಇರಬೇಕು. ರಾಜಕಾರಣದಲ್ಲಿ ಇದೆಲ್ಲಾ ಸಾಮಾನ್ಯ ಎಂದರು.

